
ಮಂದಾರಗಿರಿ ಬೆಟ್ಟ
ಬೇಸಿಗೆ ರಜೆ ಸಂದರ್ಭದಲ್ಲಿ ಅಥವಾ ವಾರಾಂತ್ಯದಲ್ಲಿ ನೀವು ಭೇಟಿ ನೀಡಬಹುದಾದ ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಕೆಲವು ಸ್ಥಳಗಳು ಇಲ್ಲಿವೆ.
1. ಮೈದಾಳ ಕೆರೆ/ ಮಂದಾರಗಿರಿ ಬೆಟ್ಟಗಳು
ನೀವು ಚಾರಣವನ್ನು ಆನಂದಿಸುವವರಾಗಿದ್ದರೆ, ಮಂದಾರಗಿರಿ ಬೆಟ್ಟಗಳು ನಿಮ್ಮ ವಾರಾಂತ್ಯದ ವಿಹಾರಕ್ಕೆ ಸೂಕ್ತವಾಗಬಹುದು. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮಂದರಗಿರಿ ಬೆಟ್ಟದ ತುದಿ ತಲುಪಲು ನೀವು 430 ಮೆಟ್ಟಿಲುಗಳನ್ನು ಏರಬೇಕು. ವಿಶಾಲವಾದ ಕೃಷಿ ಭೂಮಿ, ಮೈದಾಳ ಕೆರೆ ಮತ್ತು ಪಂಡಿತನಹಳ್ಳಿ ಗ್ರಾಮದ ನೋಟ ನಿಮಗೆ ಆಹ್ಲಾದಕರ ಅನುಭವ ನೀಡುವುದು. ನೀವು ಅಲ್ಲಿಗೆ ಹೋದಾಗ, ಸುಮಾರು 12 ಮತ್ತು 14 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾದ ಮತ್ತು ಈಗ ಪುನರುಜ್ಜೀವನ ಕಾಣುತ್ತಿರುವ ನಾಲ್ಕು ದೇವಾಲಯಗಳನ್ನು ನೋಡಬಹುದು.
2. ಮುನಿನಗರ ಅಣೆಕಟ್ಟು
ನೀವು ಅಲ್ಲಿಗೆ ಹೋದಾಗ ಅಣೆಕಟ್ಟನ್ನು ಕಾಣದಿರಬಹುದು. ಆದರೆ ಆಶ್ಚರ್ಯಪಡಬೇಡಿ, ಆದರೆ ಕೆರೆ ಮತ್ತು ಬೆಟ್ಟಗಳ ಸರಣಿಯ ನೋಟವನ್ನು ತೋರುವ ಸೇತುವೆಯನ್ನು ಗುರುತಿಸಿ. ಎಚ್ಚರಿಕೆ: ಇಲ್ಲಿ ನೀವು ಬರಿ ಬೈಕರ್ಗಳು ಅಥವಾ ಸೈಕ್ಲಿಸ್ಟ್ಗಳನ್ನು ಕಾಣಬಹುದು. ಬೈಕ್ ವ್ಲಾಗರ್ಗಳು ಹೆಚ್ಚು ಭೇಟಿ ನೀಡಿ ಪ್ರಚಾರಕ್ಕೆ ಬಂದ ನಂತರ ಈ ಸ್ಥಳ ಎಲ್ಲರ ಗಮನ ಸೆಳೆಯಿತು ಎಂದು ಪ್ರವಾಸ ತಜ್ಞರು ನಂಬುತ್ತಾರೆ. ಆದ್ದರಿಂದ ಇದಕ್ಕೆ 'ಬೈಕರ್ಸ್ ಡ್ಯಾಮ್' ಎಂದು ಕರೆಯಲಾಗಿದೆ. ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಕನಕಪುರದ ಸಮೀಪದಲ್ಲಿರುವ ಮುನಿನಗರವು ಪ್ರಕೃತಿಯ ಮಡಿಲಲ್ಲಿ ಕಳೆದುಹೋಗ ಬಯಸುವವರಿಗೆ ಸೂಕ್ತ ತಾಣವಾಗಿದೆ.
3. ಮಾಕಳಿದುರ್ಗ ಚಾರಣ
ಕೆಲವರು ಇದನ್ನು ಗುಪ್ತ ರತ್ನ ಎಂದು ಕರೆದರೆ, ಇತರರು ಇದನ್ನು ಚಾರಣಿಗರ ಸ್ವರ್ಗ ಎಂದು ಕರೆಯುತ್ತಾರೆ. ನೀವು ಲಾಂಗ್ ಡ್ರೈವ್ ಮತ್ತು ಸವಾಲಿನ ಚಾರಣವನ್ನು ಬಯಸುವವರಾದರೆ, ಮಾಕಳಿದುರ್ಗವು ಸೂಕ್ತ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ದೊಡ್ಡಬಳ್ಳಾಪುರದ ಬಳಿ ಇದೆ. ಚಾರಣವು ನಿಮ್ಮನ್ನು ಮಾಕಳಿದುರ್ಗ ಎಂಬ ಹಳ್ಳಿಯ ಹೆಸರನ್ನು ಹೊಂದಿರುವ ಬೆಟ್ಟದ ಮೇಲೆ ಪಾಳುಬಿದ್ದ ಕೋಟೆಗೆ ಕರೆದೊಯ್ಯುತ್ತದೆ. ನೀವು ಕರ್ನಾಟಕ ಪರಿಸರ ಪ್ರವಾಸೋದ್ಯಮ ವೆಬ್ಸೈಟ್ ಮೂಲಕ ಮುಂಚಿತವಾಗಿ ಬುಕಿಂಗ್ ಮಾಡಬೇಕಾಗುತ್ತದೆ; ಪ್ರತಿ ವ್ಯಕ್ತಿಗೆ ರೂ.250 ಬೆಲೆ.
4. ಮಂಚನಬೆಲೆ ಡ್ಯಾಮ್
ರಾಮನಗರ ಜಿಲ್ಲೆಯಲ್ಲಿರುವ ಬೆಂಗಳೂರಿನಿಂದ ಸುಮಾರು 40 ಕಿಮೀ ದೂರದಲ್ಲಿರುವ ಮಂಚನಬೆಲೆ ಅಣೆಕಟ್ಟನ್ನು ಕಾವೇರಿ ನದಿಯ ಉಪನದಿಯಾಗಿರುವ ಪ್ರಶಾಂತ ಅರ್ಕಾವತಿ ನದಿಯ ನೀರಿನ ಮೇಲೆ ನಿರ್ಮಿಸಲಾಗಿದೆ. ವಿಶಾಲ ಸಸ್ಯ ಮತ್ತು ಪ್ರಾಣಿ ವರ್ಗದಿಂದ ಸಮೃದ್ಧವಾಗಿರುವ ಈ ಸ್ಥಳವು ಮೋಡಿಮಾಡುವ ಜೀವವೈವಿಧ್ಯದಿಂದ ಕೂಡಿದೆ. ಈ ಸ್ಥಳವು ವಿವಿಧ ಹಚ್ಚ ಹಸಿರಿನ ಮರಗಳಿಂದ ಮತ್ತು ಪಕ್ಷಿಸಂಕುಲದಿಂದ ತುಂಬಿಕೊಂಡಿದೆ. ಇಲ್ಲಿಗೆ ಭೇಟಿ ನೀಡಿದ್ದೇ ಆದರೆ ಮಂಚನಬೆಲೆ ಡ್ಯಾಂ ಫಿಶ್ ಫ್ರೈ ಸವಿಯದಿರಲು ಮರೆಯದಿರಿ!
5. ಗುಡಿಬಂಡೆ ಕೋಟೆ
ಚಿಕ್ಕಬಳ್ಳಾಪುರದ ಬಳಿ ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿರುವ ಈ ಸ್ಥಳವು ತನ್ನ ಪರಂಪರೆ ಮತ್ತು ಕೆರೆಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಭೈರಸಾಗರ ಮತ್ತು ವಟದಹೊಸಹಳ್ಳಿ ಕೆರೆಗಳು ಸೇರಿವೆ, ಇವು ಕೋಟೆಗೆ ಹೋಗುವ ಮಾರ್ಗದಲ್ಲಿವೆ. ಗುಡಿಬಂಡೆ ಕೋಟೆ ಸುಮಾರು 400 ವರ್ಷಗಳಷ್ಟು ಹಳೆಯದು. ಕೋಟೆಯು ಏಳು ಹಂತಗಳನ್ನು ಹೊಂದಿದ್ದು, ತುರ್ತು ಸಂದರ್ಭಗಳಲ್ಲಿ ಸೈನಿಕರು ಪಲಾಯನ ಮಾಡಲು ಪರಸ್ಪರ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಹೊಂದಿದೆ. ಕೋಟೆಯ ಮೇಲೆ 108 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ನಂಬಲಾದ ಶಿವ ದೇವಾಲಯವಿದೆ. ಕೋಟೆಯ ಮುಖ್ಯ ಲಕ್ಷಣವೆಂದರೆ ಮಳೆ ನೀರು ಕೊಯ್ಲು ವ್ಯವಸ್ಥೆ ಎಂದು ಪ್ರವಾಸ ತಜ್ಞರು ಹೇಳುತ್ತಾರೆ. ಕೋಟೆಯ ವಿವಿಧ ಹಂತಗಳಲ್ಲಿ ಸುಮಾರು 19 ಕಲ್ಲಿನ ಕೊಳಗಳಿತ್ತು ಎಂದು ನಂಬಲಾಗಿದೆ. ಸಲಹೆ: ಭೇಟಿ ನೀಡುವಾಗ ನಿಮ್ಮೊಂದಿಗೆ ಆಹಾರವನ್ನು ಒಯ್ಯಿರಿ.