
ನವದೆಹಲಿ: ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಇಂಡಿಯಾ ಫೆ.1 ರಿಂದ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಜ.23 ರಂದು ಘೋಷಿಸಿದೆ.
ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದಾಗಿ ಕಾರುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.
"ಕಂಪನಿಯು ವೆಚ್ಚವನ್ನು ಅತ್ಯುತ್ತಮವಾಗಿಸಲು ಮತ್ತು ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಬದ್ಧವಾಗಿದ್ದರೂ, ಹೆಚ್ಚಿದ ಕೆಲವು ವೆಚ್ಚಗಳನ್ನು ಮಾರುಕಟ್ಟೆಗೆ ವರ್ಗಾಯಿಸುವ ಅನಿವಾರ್ಯತೆ ಎದುರಾಗಿದೆ" ಎಂದು ಸಂಸ್ಥೆ ಹೇಳಿದೆ.
ಪರಿಷ್ಕೃತ ಬೆಲೆಗಳ ಅಡಿಯಲ್ಲಿ, ಕಂಪನಿಯ ಕಾಂಪ್ಯಾಕ್ಟ್ ಕಾರು ಸೆಲೆರಿಯೊದ ಎಕ್ಸ್-ಶೋರೂಂ ಬೆಲೆಯಲ್ಲಿ ರೂ. 32,500 ರಷ್ಟು ಹೆಚ್ಚಳವಾಗಲಿದ್ದು, ಪ್ರೀಮಿಯಂ ಮಾದರಿ ಎಲ್‌ಎನ್‌ವಿಕ್ಟೊದ ಬೆಲೆಯಲ್ಲಿ ರೂ. 30,000 ರಷ್ಟು ಹೆಚ್ಚಳವಾಗಲಿದೆ.
ಕಂಪನಿಯ ಜನಪ್ರಿಯ ಮಾದರಿ ವ್ಯಾಗನ್-ಆರ್ ಬೆಲೆ ರೂ. 15,000 ದವರೆಗೆ ಮತ್ತು ಸ್ವಿಫ್ಟ್ ಬೆಲೆ ರೂ. 5,000 ದವರೆಗೆ ಹೆಚ್ಚಾಗಲಿದೆ.
ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಳ ಬೆಲೆ ಕ್ರಮವಾಗಿ ರೂ. 20,000 ಮತ್ತು ರೂ. 25,000 ದವರೆಗೆ ಏರಿಕೆಯಾಗಲಿದೆ.
ಆರಂಭಿಕ ಹಂತದ ಸಣ್ಣ ಕಾರುಗಳಾದ ಆಲ್ಟೊ ಕೆ 10 ಬೆಲೆ ರೂ. 19,500 ದವರೆಗೆ ಮತ್ತು ಎಸ್-ಪ್ರೆಸ್ಸೊ ಬೆಲೆ ರೂ. 5,000 ದವರೆಗೆ ಏರಿಕೆಯಾಗಲಿದೆ.
ಪ್ರೀಮಿಯಂ ಕಾಂಪ್ಯಾಕ್ಟ್ ಮಾದರಿ ಬಲೆನೊ ಬೆಲೆ ರೂ. 9,000 ದವರೆಗೆ, ಕಾಂಪ್ಯಾಕ್ಟ್ ಎಸ್‌ಯುವಿ ಫ್ರಾಂಕ್ಸ್ ಬೆಲೆ ರೂ. 5,500 ದವರೆಗೆ ಮತ್ತು ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಬೆಲೆ ರೂ. 10,000 ದವರೆಗೆ ಏರಿಕೆಯಾಗಲಿದೆ ಎಂದು ಅದು ಹೇಳಿದೆ.
ಕಂಪನಿ ಪ್ರಸ್ತುತ ಆರಂಭಿಕ ಹಂತದ ಆಲ್ಟೊ ಕೆ -10 ವಾಹನಗಳನ್ನು ರೂ. 3.99 ಲಕ್ಷದಿಂದ ಪ್ರಾರಂಭವಾಗಿ ಇನ್ವಿಕ್ಟೊ ರೂ. 28.92 ಲಕ್ಷದವರೆಗೆ ಮಾರಾಟ ಮಾಡುತ್ತದೆ.
Advertisement