ಸಬ್ಬಕ್ಕಿ ತಿನ್ನೋ ಕಾಲ

Published: 19th August 2014 02:00 AM  |   Last Updated: 19th August 2014 01:36 AM   |  A+A-


Posted By : Lingaraj
Source : Sakhi
ಸಬ್ಬಕ್ಕಿ, ಸಾಬೂದಾನ ಅಥವಾ ಸೀಮೆಅಕ್ಕಿ ಎಂದೂ ಕರೆಯುವ ಈ ಪದಾರ್ಥವು ಹೆಚ್ಚು ಕಾಬ್ರೋಹೈಡ್ರೇಟ್ ಹೊಂದಿದೆ. ಉಪವಾಸ ಕೈಗೊಳ್ಳುವಾಗ ಇದರ ಬಳಕೆ ಹೆಚ್ಚು. ಆಟವಾಡುವ ಮಕ್ಕಳು ನಿಶಕ್ತಿ ಹೊಂದಿದಾಗ ಇದನ್ನು ಸೇವಿಸಿದರೆ ನಿಶ್ಯಕ್ತಿ ಶಮನವಾಗುವುದು. ಅಲ್ಲದೆ ಇದರಿಂದ ಅನೇಕ ರುಚಿಕರ ಉಪಹಾರವನ್ನುತಯಾರಿಸಬಹುದು.

ಸಬ್ಬಕ್ಕಿ- ಮ್ಯಾಂಗೋ ಖೀರ್
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ 1 ಕಪ್, ಮಾವಿನ ರಸ 1 ಕಪ್, ದ್ರಾಕ್ಷಿ 1/4 ಕಪ್, ಗೋಡಂಬಿ 1/4 ಕಪ್, ಬಾದಾಮಿ 1/4 ಕಪ್, ಏಲಕ್ಕಿ ಪುಡಿ 1/4 ಚಮಚ, ತುಪ್ಪ 3 ಚಮಚ,ಸಕ್ಕರೆ 2 ಚಮಚ, ಹಾಲು 1/2 ಕಪ್.
ಮಾಡುವ ವಿಧಾನ:
ಮೊದಲು ಸಬ್ಬಕ್ಕಿಯನ್ನು ತೊಳೆದು ಮುಚ್ಚಿಡಿ (ನೀರನ್ನು ಹಾಕಬಾರದು). ಮೂರು- ನಾಲ್ಕು ಗಂಟೆಗಳ ನಂತರ ಸಬ್ಬಕ್ಕಿಯನ್ನು 1/2 ಕಪ್ ಹಾಲು ಮತ್ತು 1/2 ಕಪ್ ನೀರಿನೊಂದಿಗೆ ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಹಾಕಿ ಹುರಿದುಕೊಳ್ಳಿ. ಇದಕ್ಕೆ ಬೆಂದ ಸಬ್ಬಕ್ಕಿ, ಸಕ್ಕರೆ, ಏಲಕ್ಕಿಪುಡಿ ಸೇರಿಸಿ ಕುದಿಸಿ (ಸ್ವಲ್ಪ ನೀರನ್ನು ಸೇರಿಸಬಹುದು) ಇಳಿಸಿ. ನಂತರ ಮಾವಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹತ್ತು ನಿಮಿಷ ಮುಚ್ಚಿಡಿ ನಂತರ ಮೇಲೆ ತುಪ್ಪ ಹಾಕಿಕೊಂಡು ಮ್ಯಾಂಗೋ-ಸಬ್ಬಕ್ಕಿ-ಖೀರ್‌ಅನ್ನು ಸವಿಯಿರಿ. (ಸಕ್ಕರೆ ಬೇಡ ಎನ್ನುವವರು ಬೆಲ್ಲವನ್ನು ಉಪಯೋಗಿಸಬಹುದು, ಇದು ಹೆಚ್ಚು ಪೋಷಕಾಂಶದಿಂದ ಕೂಡಿದ ಖಾದ್ಯ)

ಸಬ್ಬಕ್ಕಿ ತಾಲೀಪೆಟ್ಟು  (ರೊಟ್ಟಿ)
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ 1 ಕಪ್, ಅಕ್ಕಿಹಿಟ್ಟು 1/2ರಿಂದ 3/4 ಕಪ್, ಕ್ಯಾರೆಟ್ ತುರಿ 1/2 ಕಪ್, ಕರಿಬೇವು 1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಜೀರಿಗೆ 1 ಚಮಚ,ಎಣ್ಣೆ 2 ಚಮಚ, ಹಸಿಮೆಣಸಿನಕಾಯಿ 1.
ಮಾಡುವ ವಿಧಾನ:
ಸಬ್ಬಕ್ಕಿಯನ್ನು ತೊಳೆದು ಮೂರರಿಂದ-ನಾಲ್ಕು ಗಂಟೆಗಳ ಕಾಲ ನೆನೆಸಿಡಿ (ನೀರನ್ನು ಹಾಕಬಾರದು) ನಂತರ ನೆನೆದ ಸಬ್ಬಕ್ಕಿ, ಕರಿಬೇವು, ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿಮಾಡಿಕೊಳ್ಳಿ (ನೀರನ್ನು ಸೇರಿಸಬಾರದು), ಪುಡಿಮಾಡಿಕೊಂಡ ಮಿಶ್ರಣವನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ. ಇದಕ್ಕೆ ತುರಿದ ಕ್ಯಾರೆಟ್, ಅಕ್ಕಿಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ರೊಟ್ಟಿಯ ಹದಕ್ಕೆ (ಮೃದುವಾಗಿ) ಕಲಸಿಕೊಂಡು ಹತ್ತು ನಿಮಿಷ ಬಿಟ್ಟು ಬಾಣಲೆಯನ್ನು ಬಿಸಿಮಾಡಿ ಎಣ್ಣೆಹಾಕಿ. ಕಾದ ನಂತರ ರೊಟ್ಟಿಯನ್ನು ಹಾಕಿ. ಕೆಂಪಗೆ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ. (ಸಣ್ಣ ಉರಿಯಲ್ಲಿ) (ಪ್ಲಾಸ್ಚಿಕ್/ಬಾಳೆ/ ಹೆಂಚಿನ ಮೇಲೆ ತಟ್ಟಿಕೊಳ್ಳಬಹುದು). ತಯಾರಾದ ತಾಲೀಪೆಟ್ಟು (ರೊಟ್ಟಿಯನ್ನು) ಶೇಂಗಾ ಚಟ್ನಿಪುಡಿ ಅಥವಾ ಮಾವಿನಕಾಯಿ ಉಪ್ಪಿನಕಾಯಿಯೊಂದಿಗೆ ಸೇವಿಸಿರಿ. ಬಿಸಿ ಇದ್ದಾಗ ಸೇವಿಸಿದರೆ ಹೆಚ್ಚು ರುಚಿಯೂ ರುಚಿ.

ಸಬ್ಬಕ್ಕಿ (ಸಾಬೂದಾನ) ಕಿಚಡಿ
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ 1 ಕಪ್, ತುರಿದ ಕ್ಯಾರೆಟ್ 1/2 ಕಪ್, ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ 1/2 ಕಪ್, ಸಣ್ಣದಾಗಿ ಹೆಚ್ಚಿದ ಈರುಳ್ಳಿ 1/2 ಕಪ್, ಸಣ್ಣದಾಗಿ ಹೆಚ್ಚಿದ ಆಲೂಗಡ್ಡೆ 1/2 ಕಪ್, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 2, ಕರಿಬೇವು ಸ್ವಲ್ಪ, ತೆಂಗಿನತುರಿ 1/2 ಕಪ್, ಅರಿಶಿನ ಚಿಟಿಕೆಯಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಕಡ್ಲೆಕಾಯಿ ಬೀಜ 2 ಚಮಚ, ಎಣ್ಣೆ 3 ಚಮಚ, ಸಾಸಿವೆ 1/2 ಚಮಚ, ಜೀರಿಗೆ 1 ಚಮಚ, ನಿಂಬೆರಸ 1 ಚಮಚ.

ಮಾಡುವ ವಿಧಾನ:
ಮೊದಲು ಸಬ್ಬಕ್ಕಿಯನ್ನು ತೊಳೆದು ನೀರನ್ನು ಒಗ್ಗಿಸಿ. ಎಂಟು ಗಂಟೆಗಳ ಕಾಲ ಮುಚ್ಚಿಡಿ, ನಂತರ ಬಾಣಲೆಯನ್ನು ಬಿಸಿಗಿಟ್ಟು ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ.  ಜೀರಿಗೆಯನ್ನು ಹಾಕಿ ಇದಕ್ಕೆ ಕ್ರಮವಾಗಿ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಹಸಿಮೆಣಸಿನಕಾಯಿ, ಕರಿಬೇವನ್ನು ಹಾಕಿ, ಇದಕ್ಕೆ ಕಡ್ಲೆಕಾಯಿಬೀಜವನ್ನು ಹಾಕಿ ಕೆಂಪಗೆ ಹುರಿಯಿರಿ.  ತುರಿದ ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗೆಡ್ಡೆಯನ್ನು ಸೇರಿಸಿ, ಜೊತೆಗೆ ಅರಿಶಿನವನ್ನು ಹಾಕಿ ಸ್ವಲ್ಪ ನೀರನ್ನು ಚುಮುಕಿಸಿ ಸ್ವಲ್ಪ ಬೇಯಿಸಿಕೊಳ್ಳಿ. ಇದಕ್ಕೆ ನೆನೆದ ಸಬ್ಬಕ್ಕಿ ಹಾಕಿ ಎಲ್ಲವೂ ಹೊಂದುವಂತೆ ನಯವಾಗಿ ತಿರುಗಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಎಲ್ಲವನ್ನು ಮಗುಚಿ, ಒಲೆಯಿಂದ ಕೆಳಗಿಳಿಸಿ, ನಿಂಬೆರಸ, ಕಾಯಿತುರಿ ಸೇರಿಸಿ. ಬಿಸಿ ಇರುವಾಗಲೇ ಸೇವಿಸಿದರೆ ಹೆಚ್ಚು ರುಚಿ.

ಮಾವಿನಕಾಯಿ ಸಬ್ಬಕ್ಕಿ ಒಗ್ಗರಣೆ
ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ 1 ಕಪ್, ಮಾವಿನ ಕಾಯಿತುರಿ 1/2 ಕಪ್, ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಕಡ್ಲೆಕಾಯಿಬೀಜ 1 ಚಮಚ, ಕರಿಬೇವು ಸ್ವಲ್ಪ, ಅರಿಶಿನ ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಸಾಸಿವೆ 1/2 ಚಮಚ, ಜೀರಿಗೆ 1 ಚಮಚ, ತೆಂಗಿನ ತುರಿ 1/2 ಕಪ್, ಹಸಿಮೆಣಸಿನಕಾಯಿ 2, ಎಣ್ಣೆ 3 ಚಮಚ, ಈರುಳ್ಳಿ 1 ಸಣ್ಣದಾಗಿ ಹೆಚ್ಚಿದ್ದು, ಸಕ್ಕರೆ ಸ್ವಲ್ಪ.
ಮಾಡುವ ವಿಧಾನ: ಸಬ್ಬಕ್ಕಿಯನ್ನು ತೊಳೆದು ಮುಚ್ಚಿಡಿ, (ನೀರನ್ನು ಒಗ್ಗಿಸಿಕೊಂಡು) ಮೂರರಿಂದ ನಾಲ್ಕು ಗಂಟೆಗಳ ಕಾಲ, ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ, ಚಟಪಟಿಸಿಕೊಳ್ಳಿ.  ನಂತರ ಜೀರಿಗೆ, ಹಸಿಮೆಣಸಿನಕಾಯಿ, ಕರಿಬೇವು, ಕೆಂಪಗೆ ಹುರಿದುಕೊಳ್ಳಿ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಕಡ್ಲೆಕಾಯಿಬೀಜವನ್ನು ಕೆಂಪಗೆ ಬಾಡಿಸಿ. ನಂತರ ಈರುಳ್ಳಿ ಸೇರಿಸಿ. ಅರಿಶಿನ, ತೆಂಗಿನತುರಿ, ಮಾವಿನತುರಿ ಹಾಗೂ ಸಕ್ಕರೆ ಸೇರಿಸಿ ಹುರಿದುಕೊಂಡು ಇದಕ್ಕೆ ನೆನೆಸಿದ ಸಬ್ಬಕ್ಕಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತಿರುಗಿಸಿ. 3 ನಿಮಿಷ ಬೇಯಿಸಿ, ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ. ತೆಂಗಿನ ತುರಿ ಸೇರಿಸಿ ತಯಾರಾದ ಮಾವಿನಕಾಯಿ-ಸಬ್ಬಕ್ಕಿ-ಒಗ್ಗರಣೆಯನ್ನು ಬಿಸಿ ಇರುವಾಗಲೇ ಸವಿಯಿರಿ.

ಸಬ್ಬಕ್ಕಿ-ಲಾಡು (ಉಂಡೆ)
ಬೇಕಾಗುವ ಪದಾರ್ಥಗಳು: ಸಬ್ಬಕ್ಕಿ 1 ಕಪ್, ಸಕ್ಕರೆ 3/4 ಕಪ್, ತುಪ್ಪ 2 ಚಮಚ, ಏಲಕ್ಕಿಪುಡಿ 1 ಚಮಚ, ಚೆರ್ರಿ ಹಣ್ಣು ಅಲಂಕರಿಸಲು, ಗೋಡಂಬಿ, ಬಾದಾಮಿಪುಡಿ 1/2 ಕಪ್, ಹಾಲು 1/2 ಕಪ್
ಮಾಡುವ ವಿಧಾನ: ಮೊದಲು ಸಬ್ಬಕ್ಕಿಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ ಇದನ್ನು ಸ್ವಲ್ಪ ತಣಿಯಲು ಬಿಡಿ. ಸಕ್ಕರೆ ಹಾಗೂ ಏಲಕ್ಕಿಯನ್ನು ಪುಡಿಮಾಡಿಕೊಳ್ಳಿ. ಗೋಡಂಬಿ, ಬಾದಾಮಿಯನ್ನು ಸ್ವಲ್ಪವೇ ಹುರಿದು ಪುಡಿ ಮಾಡಿಕೊಳ್ಳಿ. ಗೋಡಂಬಿ ಬಾದಾಮಿಪುಡಿ ಹಾಗೂ ಸಬ್ಬಕ್ಕಿಪುಡಿ ಮಾಡಿಕೊಳ್ಳಿ, ಎರಡನ್ನು ಮಿಕ್ಸ್ ಮಾಡಿ ಸ್ವಲ್ಪವೇ ತುಪ್ಪವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಸ್ವಲ್ಪ ತಣಿದ ಬಳಿಕ. ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿಪುಡಿ ಸೇರಿಸಿ. ಇದನ್ನು ತುಪ್ಪ ಹಾಕಿ ಉಂಡೆಗಳಾಗಿ ಕಟ್ಟಿಕೊಳ್ಳಿ. ತುಪ್ಪ ಬೇಡ ಎನ್ನುವವರು ಹಾಲನ್ನು ಚುಮುಕಿಸಿಕೊಂಡು ಉಂಡೆಯನ್ನು ಒತ್ತಿಕೊಂಡು ಚೆರ್ರಿಯಿಂದ ಅಲಂಕರಿಸಿ ಸವಿಯಿರಿ.

-ಕೆ.ಎಸ್.ಹೇಮಲತ ರೇವಣ್ಣ
8951142981
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/60791ಗೆ ಭೇಟಿನೀಡಿ.

Stay up to date on all the latest ಮಹಿಳೆ-ಮನೆ-ಬದುಕು news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp