
ರಾಜಕುಮಾರಿಯರು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಬರುವವರು ಸಿಂಡ್ರೆಲ್ಲಾ ಅಥವಾ ಸ್ನೋವೈಟ್; ಸುಂದರ ರಾಜಕುಮಾರರನ್ನು ಭೇಟಿ ಮಾಡಿ, ಅವರ ಪ್ರೇಮಪಾಶದಲ್ಲಿ ಬಿದ್ದು ಕೊನೆಗೆ ಎಲ್ಲಾ ಅಡೆತಡೆಗಳನ್ನು ಎದುರಿಸಿ ಅವರನ್ನೇ ವರಿಸಿ ಸುಖವಾಗಿ ಬದುಕಿದರು ಎನ್ನುವ ಕಥೆ. ಆದರೆ ವಾಸ್ತವ ಈ ಕಥೆಗಳಿಗಿಂತಲೂ ಬಹಳ ವಿಭಿನ್ನ ಎನ್ನುವುದನ್ನೇ ಮರೆತುಬಿಡುತ್ತೇವೆ. ಅವುಗಳಲ್ಲಿ ಬಹುತೇಕ ಮದುವೆಗಳ ಹಿಂದೆ ರಾಜಕೀಯ ಲಾಭ, ದುರಾಸೆಯಿರುತ್ತದೆ ಎನ್ನುವುದು ಸೂಕ್ಷ್ಮವಾಗಿ ನೋಡದಿದ್ದರೆ ಮನವರಿಕೆಯಾಗುವುದಿಲ್ಲ. ಹೀಗಿದ್ದರೂ ಬಾಲಕಿಯರು ರಾಜಕುಮಾರನ ಕನಸು ಕಂಡರೆ ಅದರಲ್ಲಿ ಅವರ ತಪ್ಪೇನೂ ಇಲ್ಲ ಬಿಡಿ.
ಪತ್ರಕರ್ತೆ ಲಿಂಡಾ ರೊಡ್ರಿಗಜ್ ಮ್ಯಾಕ್ರಾಬಿ ಅವರ 'ಪ್ರಿನ್ಸೆಸ್ ಬಿಹೇವಿಂಗ್ ಬ್ಯಾಡ್ಲಿ' (2014) ಓದಿದರೆ, ಅದರಲ್ಲಿ ಬರುವ ಇತಿಹಾಸದ ಕೆಲವು ನೈಜ, ವಿಚಿತ್ರವಾದ ಮತ್ತು ಅತ್ಯಂತವಿಕ್ಷಿಪ್ತ ಉದಾಹರಣೆಗಳು, ಅವುಗಳ ಹಿಂದಿರುವ ರಾಜಕುಮಾರಿಯರ ವಿಲಕ್ಷಣ ಮತ್ತು ಸಾಮಾನ್ಯರಿಗೆ ಹಿಡಿಸದ ವರ್ತನೆಗಳನ್ನು ನೋಡಿ ರಾಜಕುಮಾರಿಯರ ಬದುಕೂ ಬೇಡ, ರಾಜಕುಮಾರರ ಕನಸೂ ಬೇಡ ಎನಿಸದೆ ಇರುವುದಿಲ್ಲ. ಪುಸ್ತಕದ ಹಿಂಬದಿಯಲ್ಲಿರುವ ಸಾಲು ಒಳಗೇನಿದೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ: 'ಒಂದಾನೊದು ಕಾಲದಲ್ಲಿ ತನ್ನ ದಾರಿಗೆ ಅಡ್ಡ ಬರುವವರನ್ನು ವಂಚಿಸಿ, ಮೋಸ ಮಾಡಿ, ಭ್ರಷ್ಟಗೊಳಿಸಿ ಇಲ್ಲವೇ ಕೊಲೆ ಮಾಡಿ ತನ್ನ ಕಾರ್ಯ ಸಾಧಿಸಿಕೊಳ್ಳಲು ಹಿಂಜರಿಯದ ಒಬ್ಬ ಸುಂದರ ರಾಜಕುಮಾರಿಯಿದ್ದಳು...'
ಮ್ಯಾಕ್ರಾಬಿ ಈ ಪುಸ್ತಕವನ್ನು ಏಳು ವಿಭಾಗಗಳಾಗಿ ಮಾಡಿ ಒಂದೊಂದರಲ್ಲೂ ಒಬ್ಬ ರಾಜಕುಮಾರಿಯ ಬದುಕನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಇವರಲ್ಲಿ ಕೆಲವರು ಕ್ರಿ.ಪೂ. 1500ರಲ್ಲಿ ಬಂದರೆ, ಮತ್ತೆ ಕೆಲವರು 21ನೇ ಶತಮಾನದಲ್ಲಿ ಬರುತ್ತಾರೆ.
ಯೋಧರು
ಯುದ್ಧಗಳಲ್ಲಿ ಹೋರಾಡಿದ ರಾಜಕುಮಾರಿಯರು- ಕಡಲ್ಗಳ್ಳಿಯಾದ ರಾಜಕುಮಾರಿ ಅಲ್ಫಿಲ್ಡ್; ಸೇನೆಯನ್ನು ಮುನ್ನಡೆಸಿದ ರಾಜಕುಮಾರಿ ಪಿಂಗ್ಯಾಂಗ್; ಹತ್ಯೆಗೈಯ್ದು ಸನ್ಯಾಸಿನಿಯಾದ ರಾಜಕುಮಾರಿ, ಕೀವ್ನ ಓಲ್ಗಾ, ಕುಸ್ತಿ ಅಖಾಡವನ್ನು ಆಳಿದ ರಾಜಕುಮಾರಿ ಖುಟುಲುನ್,ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧ ಮಾಡಿದ ರಾಜಕುಮಾರಿ ಲಕ್ಷ್ಮೀಬಾಯಿ.
ದುರಾಕ್ರಮಣ ಮಾಡಿದವರು
ಪುರುಷ ಸಮಾಜದಲ್ಲಿ ಅಧಿಕಾರಕಸಿದುಕೊಂಡ ರಾಜಕುಮಾರಿಯರು- ರಾಜನಂತೆ ಈಜಿಪ್ಟ್ ಅನ್ನು ಆಳಿದ ರಾಜಕುಮಾರಿ ಹ್ಯಾಟ್ಶೆಪ್ಸುಟ್; ಚೀನಾದ ಚಕ್ರವರ್ತಿಯಾದ ರಾಜಕುಮಾರಿ ವು ಜೆತಿಯಾನ್; ಪುರುಷ 'ಉಪಪತಿ'ಯರನ್ನು ತನ್ನ ಅರಮನೆಯಲ್ಲಿರಿಸಿಕೊಂಡಿದ್ದ ರಾಜಕುಮಾರಿ ದೊಂಗೋದ ಜಿಂಗಾ.
ಸಂಚುಗಾರರು
ಒಳಸಂಚು ಮತ್ತು ಯೋಜನೆ ನಡೆಸಿದ ರಾಜಕುಮಾರಿಯರು - ರೋಮನ್ ಸಾಮ್ರಾಜ್ಯವನ್ನು ವಿನಾಶದ ಅಂಚಿಗೆ ಕೊಂಡೊಯ್ದ ರಾಜಕುಮಾರಿ ಜಸ್ಟ ಗ್ರಾಟ ಹೊನೋರಿಯ; 'ಹಸಿದ ತೋಳ'ವೆಂದು ಹೆಸರು ಪಡೆದಿದ್ದ ಫ್ರಾನ್ಸಿನ ರಾಜಕುಮಾರಿ ಇಸಾಬೆಲ್ಲಾ; ಲೃಂಗಿಕ ಗುಲಾಮಗಿರಿಯಿಂದ ಮುಕ್ತವಾಗಿ ರಾಣಿಯಾಗಿ ಮೆರೆದ ರಾಜಕುಮಾರಿ ರೋಕ್ಸೋಲೋನ; ಇತರರ ಮೇಲೆ ಬೇಹುಗಾರಿಕೆ ಮಾಡುತ್ತಿದ್ದ ರಾಜಕುಮಾರಿ ಕ್ಯಾಥರಿನ್ ರಾದ್ಜಿವಿಲ್; ಹಿಟ್ಲರ್ಗಾಗಿ ಔತಣಕೂಟ ಏರ್ಪಡಿಸಿದ ರಾಜಕುಮಾರಿ ಸ್ಟೆಫಾನಿ.
ಬದುಕುಳಿದವರು
ಬದುಕಲು ವಿವಾದಾತ್ಮಕ ಮತ್ತು ಪ್ರಶ್ನಾರ್ಹ ಆಯ್ಕೆಗಳನ್ನು ಮಾಡಿದ ರಾಜಕುಮಾರಿಯರು - ನವೋದಯ ಕಾಲದ ಮಾಫಿಯಾ ರಾಜಕುಮಾರಿ ಲುಕ್ರೆಜಿಯಾ, ತನ್ನ ದೇಶವನ್ನು ಆಕ್ರಮಿಸಿದವರೊಡನೆ ಕೈ ಜೋಡಿಸಿದ ರಾಜಕುಮಾರಿ ಮಲಿನ್ಚೆ ಬಂಧನದಲ್ಲಿದ್ದ ರಾಜಕುಮಾರಿ ಸೋಫಿಯಾ ಡೋರೋಥಿಯಾ, ವೈರಿಗಳೊಡನೆ ಕೈ ಜೋಡಿಸಿದ ಆರೋಪ ಹೊತ್ತ ರಾಜಕುಮಾರಿ ಸಾರಾ ವಿನ್ನೆಮುಕ್ಕ; ಕಮ್ಯುನಿಸ್ಟ್ ಆದ ರಾಜಕುಮಾರಿ ಸೋಫ್ಕ ಡೋಲ್ಗೊರೌಕಿ.
ಮೋಜುಗಾರರು
ಮೋಜಿನ ಜೀವನ ನಡೆಸಿದ ರಾಜಕುಮಾರಿಯರು - ಪುರುಷರ ಉಡುಗೆ ಧರಿಸುತ್ತಿದ್ದ ರಾಜಕುಮಾರಿ ಕ್ರಿಸ್ಟಿನಾ, ಇಂಗ್ಲೆಂಡಿನ ಕಣ್ಣಿಗೆ ಮಣ್ಣೆರೆಚಿದ ಮೋಸಗಾತಿ ರಾಜಕುಮಾರಿ ಕಾರಾಬೂ, ಲೈಂಗಿಕ ಔತಣಕೂಟಗಳನ್ನೇರ್ಪಡಿಸುತ್ತಿದ್ದ ರಾಜಕುಮಾರಿ ಪ್ರಷ್ಯಾದ ಚಾರ್ಲೆಟ್, ಅಲೆಮಾರಿ... ಪರಿಚಾರಕ... ಮತ್ತು ಒಬ್ಬ ಸ್ಟೇಷನ್ ಮ್ಯಾನೇಜರ್ನೊಡನೆ ಮೂರು ಬಾರಿ ಓಡಿ ಹೋದ ರಾಜಕುಮಾರಿ ಕ್ಲಾರಾ ವಾರ್ಡ್; ಕಾರ್ಪೋರೇಟ್ ಆದ ಪಂಕ್ ರಾಜಕುಮಾರಿ ಗ್ಲೋರಿಯಾ ವೊನ್ ಥರ್ನ್ ಉಂಡ್ ತಾಕ್ಸಿಸ್.
ಹಾದರ ಮಾಡಿದವರು
ಮುಕ್ತ ಲೈಂಗಿಕ ಜೀವನ ನಡೆಸಿ ಕುಖ್ಯಾತರಾಗಿದ್ದ ರಾಜಕುಮಾರಿಯರು- ಸ್ನಾನವನ್ನೇ ಮಾಡದ ರಾಜಕುಮಾರಿ ಬ್ರನ್ಸ್ವಿಕ್-ವೊಲ್ಫೆನ್ಬುತ್ತೆಲ್ನ ಕ್ಯಾರೋಲಿನ್; ಪ್ರದರ್ಶನ ರೋಗದ ರಾಜಕುಮಾರಿ ಪೌಲಿನ್ ಬೋನಾಪಾರ್ಟೆ; ಬ್ಯಾಂಕ್ ಲೂಟಿ ಮಾಡಿದರಾಜಕುಮಾರಿ ಮಾರ್ಗರೆಟ್.
ಮತಿಗೆಟ್ಟವರು
ಹುಚ್ಚು ಹಿಡಿದ ಅಥವಾ ಮತಿಭ್ರಮಣೆಗೆ ಸಮೀಪವಾಗಿದ್ದ ರಾಜಕುಮಾರಿಯರು- ಸದಾ ಉಗುಳುತ್ತಿದ್ದ ಸ್ಯಾಕ್ಸೋನಿಯ ರಾಜಕುಮಾರಿ ಅನ್ನಾ, ಮಾಂಸದ ಮುಖವಾಡ ಧರಿಸುತ್ತಿದ್ದ ಆಸ್ಟ್ರಿಯಾದ ರಾಜಕುಮಾರಿ ಎಲಿಜಬೆತ್; ಪೋಪ್ನನ್ನೇ ಎದುರಿಸಿದ ಬೆಲ್ಜಿಯಂನ ರಾಜಕುಮಾರಿ ಚಾರ್ಲೆಟ್; ರೋಮೊನೋವ್ನ ಕೊನೆಯ ಮರೆಗುಳಿ ರಾಜಕುಮಾರಿ ಫ್ರಾನ್ಜಿಸ್ಕ.
ಕುತೂಹಲಕಾರಿ ಇತಿಹಾಸ
ಕಡಲುಗಳ್ಳರ ರಾಜಕುಮಾರಿ, ಈಜಿಪ್ಟಿನ ಆಡಳಿತಗಾರ್ತಿ ಹ್ಯಾಟ್ಶೆಪ್ಸುಟ್, ಕೃಯಲ್ಲಿ ತನ್ನ ಪತಿಯ ಹೃದಯವನ್ನು ಹಿಡಿದು ಸಮಾಧಿಯಾದ ಫ್ರಾನ್ಸಿನ ಇಸಾಬೆಲ್ಲಾ, ಮಾಫಿಯಾ ರಾಜಕುಮಾರಿ ಲುಕ್ರೇಜಿಯಾ ಬೋರ್ಗಿಯ, ಕಮ್ಯುನಿಸ್ಟ್ ಆಗಿ ಬದಲಾದ ರಾಜಕುಮಾರಿ, ಕುಸ್ತಿಯಲ್ಲಿ ತನ್ನನ್ನು ಸೋಲಿಸಿದವನನ್ನೇ (ಯಾರೂ ಆಕೆಯನ್ನು ಸೋಲಿಸಲಾಗಲಿಲ್ಲ!) ಮದುವೆಯಾಗುವುದಾಗಿ ಪಟ್ಟು ಹಿಡಿದ ಮಂಗೋಲದ ರಾಜಕುಮಾರಿ ಖುಟುಲುನ್.. ಹೀಗೆ ಲೇಖಕಿ 30 ಮಹಿಳೆಯರ ಬಗ್ಗೆ ಸಂಪೂರ್ಣವಾಗಿ ಓದಬಲ್ಲ, ಕುತೂಹಲಕಾರಿ ಇತಿಹಾಸಗಳನ್ನು ಹೇಳಿದ್ದಾರೆ.
ಲೇಖಕಿಯ ಬರವಣಿಗೆ ಉತ್ಸಾಹಭರಿತವೂ, ಕುತೂಹಲಕಾರಿಯೂ ಆಗಿದೆ. ಸಣ್ಣ ಅಧ್ಯಾಯಗಳಲ್ಲಿ ಪ್ರತಿಯೊಬ್ಬ ರಾಜಕುಮಾರಿಯ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ.
ಪ್ರತಿ ರಾಜಕುಮಾರಿಯ ಜೀವನಕ್ಕೆ ಪ್ರತ್ಯೇಕ ಅಧ್ಯಾಯಗಳು ಮೀಸಲಾಗಿದ್ದರೆ, ಪ್ರಮುಖ ವಿವರಗಳನ್ನು ನೀಡುತ್ತಾ ಪ್ರತಿ ಅಧ್ಯಾಯದೊಳಗೂ ಇತರ ಮಹಿಳೆಯರ ಜೀವನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಉದಾಹರಣೆಗೆ: ವಾಮಾಚಾರದ ಆರೋಪ ಹೊತ್ತ ಮಹಿಳೆಯರು (ಆನ್ಬೊಲಿನ್ ಮತ್ತು ಎಲಿಜಬೆತ್ ವುಡ್ವಿಲ್), ಯುರೋಪಿಯನ್ ಉದ್ಯಮಿಗೆ ಹಣ ನೀಡಿ ಪ್ರಶಸ್ತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಡಾಲರ್ ರಾಜಕುಮಾರಿಯರು, ಪ್ರೀತಿಗಾಗಿ ತಮ್ಮ ಪದವಿಯನ್ನೇ ತೊರೆದ ಹುಚ್ಚು ರಾಜಕುಮಾರಿಯರು (ಕೌಂಟೆಸ್ ಎಲಿಜಬೆತ್ ಬತ್ಹೋರಿ).
ಭಾರತದ ರಾಜಕುಮಾರಿಯರು
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ರಜಪೂತ ರಾಣಿ ದುರ್ಗಾವತಿಯೂ ಇಲ್ಲಿ ಬರುತ್ತಾರೆ. ಆದರೆ ಕೆಟ್ಟ ರಾಜಕುಮಾರಿಯರ ಸಾಲಿನಲ್ಲಿ ಇವರಿಬ್ಬರು ಬಂದದ್ದೇಕೆ ಎಂದು ಅಚ್ಚರಿಪಡುವ ಹಾಗೆ ಲೇಖಕಿ ಅವರಿಬ್ಬರ ಜೀವನದ ವಿವರಣೆಗಳನ್ನು ನೀಡುತ್ತಾರೆ.
ಪತಿ ಗೊಂಡವಾನದ ರಾಜನ ಮರಣದ ಬಳಿಕ ಪುಟ್ಟ ಮಗನ ಜವಾಬ್ದಾರಿ ಹೊತ್ತ ರಾಣಿ ದುರ್ಗಾವತಿ ತನ್ನ ರಾಜ್ಯವನ್ನು ಶತ್ರುಗಳಿಂದ ಕಾಪಾಡಿಕೊಳ್ಳುತ್ತಿರುತ್ತಾಳೆ, ಆದರೆ ಮೊಘಲ್ ಸಾಮ್ರಾಜ್ಯ ಅವಿರತವಾಗಿ ಆಕೆಯ ರಾಜ್ಯದ ಮೇಲೆ ಕಣ್ಣು ಹಾಕುತ್ತಲೇ ಇರುತ್ತದೆ. ಮೊಘಲ್ ಸಾಮ್ರಾಟ ಅಕ್ಬರ್ ಅವಳಿಗೆ ತನ್ನ ಸಾಮಂತಳಾಗುವಂತೆ ಸಂದೇಶ ಕಳುಹಿಸುತ್ತಾನೆ, ಅದನ್ನು ನಿರಾಕರಿಸಿದ ದುರ್ಗಾವತಿ ಆತನ ಸೇನೆಯನ್ನು ರಣರಂಗದಲ್ಲಿ ಎದುರಿಸುತ್ತಾಳೆ. ಯುದ್ಧದಲ್ಲಿ ಶತ್ರು ಪಡೆ ಆಕೆಯ ಕಣ್ಣ ಮೇಲೆ ಬಾಣ ಬಿಡುತ್ತದೆ, ಅದರಿಂದ ವಿಚಲಿತಳಾಗದ ದುರ್ಗಾವತಿ ನಾಟಿದ ಬಾಣವನ್ನು ಮುರಿದು, ಒಂದೇ ಕಣ್ಣಿನಲ್ಲಿ ಯುದ್ಧವನ್ನು ಮುಂದುವರೆಸುತ್ತಾಳೆ. ಮತ್ತೊಂದು ಬಾಣ ಬಂದು ಆಕೆಯ ಕುತ್ತಿಗೆಗೆ ನಾಟಿದಾಗ ಸೆರೆ ಸಿಕ್ಕುವ ಭಯದಲ್ಲಿ ಮಾವುತನನ್ನು ತನ್ನ ಪ್ರಾಣ ತೆಗೆಯಬೇಕೆಂದು ಕೋರುತ್ತಾಳೆ. ಆ ಕೋರಿಕೆಯನ್ನು ನಿರಾಕರಿಸಿದ ಮಾವುತನ ಕತ್ತಿಯನ್ನು ತೆಗೆದುಕೊಂಡು ದುರ್ಗಾವತಿ ಪ್ರಾಣ ಕಳೆದುಕೊಳ್ಳುತ್ತಾಳೆ.
ಇನ್ನು ಲಕ್ಷ್ಮೀಬಾಯಿಯ ಕಥೆಯೂ ಇದಕ್ಕೆ ಹೊರತಲ್ಲ. ಪತಿಯ ಮರಣದ ಬಳಿಕಲಕ್ಷ್ಮೀಬಾಯಿ ಐದು ವರ್ಷದ ಬಾಲಕನನ್ನು ದತ್ತು ತೆಗೆದುಕೊಂಡು ಮುಂದಿನ ರಾಜನನ್ನಾಗಿ ಘೋಷಿಸುತ್ತಾಳೆ. ಆದರೆ ಇದನ್ನು ಒಪ್ಪದ ಬ್ರಿಟಿಷ್ ಆಡಳಿತಗಾರ ಲಾರ್ಡ್ ಡಾಲ್ಹೌಸಿ ಝಾನ್ಸಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾನೆ, ಮಾತ್ರವಲ್ಲ ಆಕೆಯನ್ನು 'ಜಾರಿಣಿ' ಎಂದು 1857ರ ದಂಗೆಯ ಬಳಿಕ ಘೋಷಿಸಲಾಗುತ್ತದೆ. ಬ್ರಿಟಿಷ್ ಆಡಳಿತದ ವಿರುದ್ಧ ದಂಗೆಎದ್ದ ಲಕ್ಷ್ಮೀಬಾಯಿ, ಪುಟ್ಟ ಮಗನನ್ನು ಹೆಗಲಿಗೆ ಕಟ್ಟಿಕೊಂಡು ಬ್ರಿಟಿಷ್ ಸೇನೆಯನ್ನು ರಣರಂಗದಲ್ಲಿ ಎದುರಿಸುತ್ತಾಳೆ. ನಿರೀಕ್ಷೆಯಂತೆ ಯುದ್ಧಭೂಮಿಯಲ್ಲಿ ಎದುರಾಳಿಗಳ ಬಾಣಗಳಿಗೆ ಆಹುತಿಯಾಗುತ್ತಾಳೆ.
ಒಂದು ವೇಳೆ ದುರ್ಗಾವತಿ ಮತ್ತು ಲಕ್ಷ್ಮೀಬಾಯಿರಣರಂಗದಲ್ಲಿ ಪ್ರಾಣ ಕಳೆದುಕೊಳ್ಳದಿದ್ದರೆ ಬಹುಶಃ ಅವರ ಪ್ರಸ್ತಾವನೆ ಇಲ್ಲಿ ಬರುತ್ತಿರಲಿಲ್ಲ. ಲೇಖಕಿಯ ಪ್ರಕಾರ, ಇತಿಹಾಸಕಾರರ ಪ್ರಕಾರ, ಪುಟ್ಟ ಬಾಲಕನನ್ನು ರಣರಂಗಕ್ಕೆ ಕರೆದೊಯ್ದಿದ್ದು ಮತ್ತು ಕಣ್ಣಿಗೆ ಬಾಣ ಚುಚ್ಚಿದರೂ ಯುದ್ಧ ಮುಂದುವರೆಸಿದ್ದು ಈ ರಾಜಕುಮಾರಿಯರ ಉದ್ಧಟತನ, ಮೂರ್ಖತನ!
ಆರೋಪಗಳು ಎಷ್ಟು ಸತ್ಯ?
ಇಲ್ಲಿ ಬರುವ ಎಲ್ಲಾ ರಾಜಕುಮಾರಿಯರು ಒಂದಲ್ಲಾ ಒಂದು ರೀತಿಯಲ್ಲಿ ಇತಿಹಾಸದ ಉದ್ದಕ್ಕೂ ತಮ್ಮ ಛಾಪನ್ನು ಬಿಟ್ಟು ಹೋಗಿದ್ದಾರೆ. ವಿವಿಧ ಸಂಸ್ಕೃತಿಗಳ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕ ಹೊರತುಪಡಿಸಿ ಪ್ರತಿಯೊಂದು ಭೂಖಂಡದ ರಾಜಕುಮಾರಿಯರು ಇಲ್ಲಿ ಬಂದಿರುವುದು ವಿಶೇಷ. ಕೇವಲ ಯುರೋಪಿಯನ್ ಸಾಮ್ರಾಜ್ಯಕ್ಕೆ ಅಂಟಿಕೊಳ್ಳದೆ ಪುಸ್ತಕ, ಇತಿಹಾಸದ ವಿವಿಧ ಮಜಲುಗಳನ್ನು ತಾಕಿ ನೋಡುತ್ತಾ ಓದುಗರ ಜ್ಞಾನದ ಅಂತರವನ್ನು ಬಹಳಷ್ಟು ತುಂಬುತ್ತದೆ.
ಪುಸ್ತಕದಲ್ಲಿ ನಾವು ಹಿಂದೆ ಕೇಳರಿಯದಿದ್ದ ಮಹಿಳೆಯರ ಬಗ್ಗೆ ಪ್ರಸ್ತಾಪವಿದೆ. ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಓದುಗರಿಗೆ ಬಂದರೆ ಅವರಿಗೆ ಅನುಕೂಲವಾಗುವಂತೆ ಕೊನೆಯಲ್ಲಿ ಉಪಭಾಗ ನೀಡಲಾಗಿದೆ. ಇತಿಹಾಸದ ದಿನಾಂಕಗಳು ಮತ್ತು ಯುದ್ಧಗಳ ಶಿಕ್ಷಣದಿಂದ ಬೇಸರ ಪಡುವ ವಿದ್ಯಾರ್ಥಿಗಳಿಗೆ ಈ ಪುಸ್ತಕ ಬಹಳ ಇಷ್ಟವಾಗುತ್ತದೆ. ಮಹಿಳೆಯರ ಕೊಡುಗೆಯನ್ನು ಹೇಗೆ ಇತಿಹಾಸದಿಂದ ಅಳಿಸಿಹಾಕಲ್ಪಟ್ಟಿದೆ ಎನ್ನುವ ಹೊಸ ಸಾಮಗ್ರಿ ಕಂಡು ಸ್ತ್ರೀವಾದಿಗಳು ಸಂತೋಷ ಪಡಬಹುದು.
ಇಲ್ಲಿ ಬರುವ ಪ್ರತಿಯೊಬ್ಬ, ರಾಜಕುಮಾರಿಯ ಸಾಹಸ ಆಕರ್ಷಕ ಜೀವನಚರಿತ್ರೆಯಾಗಬಲ್ಲವಾದರೂ, ಈಗ ಮಾತ್ರವಲ್ಲ ನೂರಾರು ವರ್ಷಗಳ ಹಿಂದೆಯೂ ಮಹಿಳೆಯರ ಬದುಕು ಸುಲಭವಾಗಿರಲಿಲ್ಲ ಎನ್ನುವುದನ್ನು ಈ ಪುಸ್ತಕ ತೋರಿಸುತ್ತದೆ. ಮಹಿಳೆಯರನ್ನು ರಾಜಕೀಯ ಪಗಡೆಯಾಟದ ಕಾಯಿಗಳಾಗಿ ಬಳಸಿಕೊಳ್ಳುತ್ತಿದ್ದರು, ಬಹಳ ಚಿಕ್ಕ ವಯಸ್ಸಿನಲ್ಲಿ ಕಾರ್ಯತಂತ್ರದ ಮೃತ್ರಿಗಾಗಿ ಅವರನ್ನು ಮದುವೆ ಮಾಡಿಕೊಡಲಾಗುತ್ತಿತ್ತು. ದಾಂಪತ್ಯ ದ್ರೋಹ, ನ್ಯಾಯಾಲಯದ ಒಳಸಂಚು, ಯುದ್ಧಗಳು, ರಾಜಕೀಯ ಮತ್ತು ಸಾವು ಸದಾ ಅವರ ತಲೆಯ ಮೇಲೆಯೇ ನೇತಾಡುತ್ತಿರುತ್ತಿದ್ದವು. ಅವರ ಒಂದು ತಪ್ಪು ನಡೆವರದಕ್ಷಿಣೆಯನ್ನು ಇಮ್ಮಡಿಗೊಳಿಸುತ್ತಿತ್ತು ಇಲ್ಲವೇ ಅವರ ತಲೆದಂಡ ಕೋರುತ್ತಿತ್ತು!
ಪುಸ್ತಕದ ತುಂಬಾ ವ್ಯಭಿಚಾರದ ಆರೋಪ ಹೊತ್ತ ರಾಜಕುಮಾರಿಯರ ಬಗ್ಗೆ ಬೆಳಕು ಚೆಲ್ಲಲಾಗಿದೆಯಾದರೂ, ಲೇಖಕಿ ಓದುಗರಿಗೆ ತ್ವರಿತವಾಗಿ ನೆನಪಿಸುವುದೇನೆಂದರೆ: 'ಯಾವುದೇ ಯುಗದಲ್ಲಿ ಮಹಿಳೆಯನ್ನು ಸದೆಬಡಿಯುವ ಸುಲಭಅಸ್ತ್ರವೆಂದರೆ ಆಕೆಯನ್ನುವ್ಯಭಿಚಾರಿಣಿ ಎಂದುಘೋಷಿಸುವುದು!'
ಹಾಗಾಗಿ ಈ ರಾಜಕುಮಾರಿಯರ ಮೇಲಿರುವ ಆರೋಪಗಳು ಸತ್ಯಕ್ಕೆ ಎಷ್ಟು ಹತ್ತಿರ ಎನ್ನುವುದು ಓದುಗರ ತರ್ಕಕ್ಕೆ ಬಿಟ್ಟಿದ್ದು.
- ಚೈತ್ರಾ ಅರ್ಜುನಪುರಿ, ದುಬೈ
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)
ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555
ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.