ಕೃಷಿ, ತೋಟಗಾರಿಕೆ ಯಂತ್ರೋಪಕರಣಗಳನ್ನು ತಯಾರಿಸುವ ದೇಶದ ಏಕೈಕ ಮಹಿಳೆ ಶೈಲಜಾ ವಿಠಲ್ 

ಮಹಿಳೆ ವಿಭಿನ್ನವಾಗಿ ಯೋಚಿಸಿದರೆ ಏನು ಬೇಕಾದರೂ ಮಾಡಬಹುದು, ತಾನು ಕಲಿತ ವಿದ್ಯೆಗೆ ತಕ್ಕ ಉದ್ಯೋಗವನ್ನೇ ಮಾಡಬೇಕಿಲ್ಲ. ಪ್ರತಿಭೆ, ಕೌಶಲ್ಯ, ಆಸಕ್ತಿಯಿದ್ದರೆ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. 
ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಂದ ಸನ್ಮಾನ
ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಂದ ಸನ್ಮಾನ

ಮಹಿಳೆ ವಿಭಿನ್ನವಾಗಿ ಯೋಚಿಸಿದರೆ ಏನು ಬೇಕಾದರೂ ಮಾಡಬಹುದು, ತಾನು ಕಲಿತ ವಿದ್ಯೆಗೆ ತಕ್ಕ ಉದ್ಯೋಗವನ್ನೇ ಮಾಡಬೇಕಿಲ್ಲ. ಪ್ರತಿಭೆ, ಕೌಶಲ್ಯ, ಆಸಕ್ತಿಯಿದ್ದರೆ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. 


ಇಂದು ತುಮಕೂರಿನ ಸಿದ್ದಾರ್ಥ ಬಡಾವಣೆ ಬಳಿ ಧರ್ಮ ಟೆಕ್ನಾಲಜಿಸ್ ಸಂಸ್ಥೆಯ ಸ್ಥಾಪಕಿ ಶೈಲಜಾ ಹೆಚ್ ವಿಠಲ್. ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣ ತಯಾರಿಸುವ ದೇಶದ ಏಕೈಕ ಮಹಿಳೆ ಎಂದು ಗುರುತಿಸಿದ್ದಾರೆ. ಇವರು ಮಾಡಿರುವ ಸಾಧನೆಯೇನು, ಇವರ ಪಯಣ ಹೇಗೆ ಸಾಗಿತು ಎಂಬುದನ್ನು ಅವರ ಮಾತುಗಳಲ್ಲಿಯೇ ಕೇಳೋಣ:


''ನಾನು ಮೈಸೂರಿನಲ್ಲಿ ಬಿ.ಎಸ್ಸಿ ಓದು ಮುಗಿಸಿ ಬೆಂಗಳೂರಿನಲ್ಲಿ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮಾಡಿದೆ. ನಂತರ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. 1992ರಲ್ಲಿ ತುಮಕೂರಿನ ವಿಠಲ್ ಎಂಬುವವರನ್ನು ವಿವಾಹವಾಗಿ ಅರುಣಾಚಲ ಪ್ರದೇಶಕ್ಕೆ ಹೋದೆ. ಅಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಲ್ಪ ಸಮಯ ಉಪನ್ಯಾಸಕಿಯಾಗಿ ಕೆಲಸ ಮಾಡಿದೆ. ಸಂಘ ಸಂಸ್ಥೆಗಳೊಂದಿಗೆ, ಮಹಿಳಾ ಕ್ಲಬ್ ಗಳೊಂದಿಗೆ ಒಡನಾಟ ಬೆಳೆದು ಜನರ ಸಂಪರ್ಕ ಹೆಚ್ಚಾಯಿತು.

ನಂತರ ಸಾಮಾಜಿಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದೆ. ಈ ಸಂಸ್ಥೆ ಮೂಲಕ ಕೆಲಸ ಮಾಡುವಾಗ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ನೋಡಿದಾಗ ಮಹಿಳೆಯರು ಯಾವ ರೀತಿಯ ಶಿಕ್ಷಣ ಪಡೆಯುತ್ತಿದ್ದಾರೆ, ಅವರ ಜೀವನ ಹೇಗೆ ನಡೆಯುತ್ತಿದೆ ಎಂದೆಲ್ಲಾ ಗಮನಿಸುತ್ತಿದ್ದೆ. ವಿಷಯಗಳನ್ನು ಕ್ರೋಢೀಕರಿಸುತ್ತಿದ್ದೆ. ಉದ್ಯಮಿಯಾಗಬೇಕೆಂಬ ಬಯಕೆ ನನ್ನಲ್ಲಿ ಇತ್ತು. ಹೀಗಾಗಿ 2000-2001ರಲ್ಲಿ ಸ್ಕಾಫಿ ಎನ್ನುವ ಆಹಾರ ಮೂಲದ ಲಘು ಪಾನೀಯ ಕಂಪೆನಿಯನ್ನು ನನ್ನ ಮೊದಲ ಸಂಶೋಧನೆಯೊಂದಿಗೆ ಸಣ್ಣ ಮಟ್ಟಿಗೆ ಹುಟ್ಟುಹಾಕಿದೆ. ಅದನ್ನು ಮುಂದುವರಿಸಲಾಗಲಿಲ್ಲ.

ನನ್ನ ಪತಿ ವಿಠಲ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. ಅಲ್ಲಿಂದ ವರ್ಗವಾಗಿ ಗುವಾಹಟಿಗೆ ಬಂದೆವು. ಅಲ್ಲಿದ್ದಾಗ ಇನ್ನೊಂದು ಆಹಾರ ಸಂಬಂಧಿ ಸಂಶೋಧನಾ ಕಂಪೆನಿಯನ್ನು ಹುಟ್ಟುಹಾಕಿದೆ.ಗುವಾಹಟಿಯಲ್ಲಿದ್ದಾಗ ಈ ಕಂಪೆನಿಗೆ ಬಹಳಷ್ಟು ಸಂಶೋಧಕರು, ಜನರು ಬಂದು ಅವರ ಜೊತೆ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ಯುವಜನತೆಯನ್ನು ಸೇರಿಸಿಕೊಂಡು ಪತಿಯವರ ವಿದ್ಯಾರ್ಥಿಗಳ ಸಹಾಯದಿಂದ  ವಿರಾಸ ಎಂಟರ್ ಪ್ರೈಸಸ್ ಎಂದು ಆರಂಭಿಸಿದೆ. ಇದರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಬರುತ್ತಿದ್ದರು. ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.ಸಂಶೋಧನೆಗೆ ನೆರವಾಗುತ್ತಿದ್ದರು. ಬೇರೆಯವರು ಸಂಶೋಧನೆ ಮಾಡಿದ್ದ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಾನು ಮತ್ತು ನನ್ನ ಪತಿ ಪ್ರಯತ್ನಿಸಿದೆವು.

ಈ ಮಧ್ಯೆ ಸಂಶೋಧಕರು, ಶೋಧಕರ ಸಾಧನಗಳು ಶೋಧನೆಗೊಂಡು ಅಲ್ಲಿಯೇ ಉಳಿದುಕೊಳ್ಳುತ್ತವೆ, ಮಾರುಕಟ್ಟೆಗೆ ಬರುವುದಿಲ್ಲ, ಅಷ್ಟು ಹೊತ್ತಿಗೆ ಅದರ ಆಲೋಚನೆಗಳನ್ನು ಪಡೆದು ಬೇರೆಯವರು ಬೇರೊಂದು ಸೃಷ್ಟಿ ಮಾಡಿ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ ಎಂಬ ವಾಸ್ತವಾಂಶ ಅರಿವಿಗೆ ಬಂತು. 

ಈ ಹೊತ್ತಿಗೆ ನನ್ನ ಪತಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದವರಾಗಿರುವುದರಿಂದ ತಾವು ಸಂಶೋಧನೆ ಮಾಡಿದ ಯಂತ್ರಗಳನ್ನು ಪರಿಚಯ ಮಾಡಿಸಿಕೊಡಿ, ಸಹಾಯ ಮಾಡಿ ಎಂದು ಹಲವರು ಬಂದು ಕೇಳುತ್ತಿದ್ದರು, ಅಸ್ಸಾಂನವರೊಬ್ಬರು ಅಡಿಕೆ ಸಿಪ್ಪೆ ಕೀಳುವ ಯಂತ್ರವನ್ನು ಮಾಡುತ್ತಿದ್ದೇನೆ, ಹಣದ ಸಹಾಯ ಮಾಡಿ ಎಂದು ಕೇಳಿದರು.ಅದಕ್ಕೆ ನಮ್ಮ ಪತಿ ತಾಂತ್ರಿಕ ಸಹಾಯ ಮಾಡಬಲ್ಲೆ ಎಂದು ಹೇಳಿ ನನಗೆ ವಿರಾಸ ಎಂಟರ್ ಪ್ರೈಸಸ್ ನಿಂದ ಏನಾದರೂ ಮಾಡು ಎಂದರು.

ಆ ಸಂದರ್ಭದಲ್ಲಿ ನಮ್ಮ ಊರು ತುಮಕೂರಿನಲ್ಲಿ ಅಡಿಕೆ ಬೆಳೆಯು ಜಾಸ್ತಿಯಿದೆ, ಅಡಿಕೆ ಸಿಪ್ಪೆ ಕೀಳಲು ಸಮಸ್ಯೆಗಳೂ ಇದ್ದವು. ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿರಲಿಲ್ಲ. ಯಂತ್ರವನ್ನು ತಯಾರಿಸಿ ಕರ್ನಾಟಕಕ್ಕೆ ಕಳುಹಿಸೋಣ, ರೈತರಿಗೆ ಅಲ್ಲಿ ಅನುಕೂಲವಾಗುತ್ತದೆ ಎಂದು ಯಂತ್ರವನ್ನು ನನ್ನ ಪತಿ ಊರಾದ ತುಮಕೂರಿನ ಗೂಳೂರಿಗೆ ಕಳುಹಿಸಿ ಪರೀಕ್ಷೆ ಮಾಡಿ ನೋಡಿದೆವು, ಆದರೆ ಇಲ್ಲಿ ಆ ಯಂತ್ರದಲ್ಲಿ ಅಡಿಕೆ ಸಿಪ್ಪೆ ಕೀಳಲು ಸಾಧ್ಯವಾಗಲಿಲ್ಲ. ಅಸ್ಸಾಂನ ವ್ಯಕ್ತಿಗೆ ಹೇಳಿದ್ದಕ್ಕೆ ಅವರು ವಿನ್ಯಾಸದಲ್ಲಿ ಬದಲಾವಣೆ ಮಾಡಲು ಸಿದ್ದರಿರಲಿಲ್ಲ.

ಆಗ ನನಗೆ ನಾವೇ ಅಡಿಕೆ ಸಿಪ್ಪೆ ತೆಗೆಯುವ ಯಂತ್ರವನ್ನು ಏಕೆ ವಿನ್ಯಾಸಗೊಳಿಸಬಾರದು ಎಂದು ಯೋಚನೆ ಬಂತು. ನನ್ನ ಪತಿಯೂ ಬೆಂಬಲ ನೀಡಿ ಅಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ 2005ರಲ್ಲಿ ಗುವಾಹಟಿಯಿಂದ ತುಮಕೂರಿಗೆ ಬಂದೆವು. ಅಲ್ಲಿದ್ದಾಗ ಮತ್ತು ತುಮಕೂರಿಗೆ ಬಂದಾಗ ನನಗೆ ಅನಿಸಿದ್ದು,  ಹಳ್ಳಿಗಳಲ್ಲಿ ತೋಟ, ಗದ್ದೆಗಳಲ್ಲಿ ರೈತರು, ಅದರಲ್ಲೂ ಮಹಿಳೆಯರು ಕಷ್ಟಪಟ್ಟು ದುಡಿಯುತ್ತಾರೆ, ಅವರಿಗೆ ಸುಲಭ ಮಾಡಿಕೊಡಲು ಏನಾದರೊಂದು ಯಂತ್ರ ತಯಾರಿಸಬೇಕೆಂದು 50 ಸಾವಿರ ರೂಪಾಯಿ ಮೂಲ ಬಂಡವಾಳದೊಂದಿಗೆ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಸಿದೆವು. ಗೊರಬಲು ಯಂತ್ರವನ್ನು ಮೊದಲು ನಾವು ತಯಾರು ಮಾಡಿದ್ದೆವು, 2006ರಲ್ಲಿ ಮೊದಲ ಯಂತ್ರ ಬಿಡುಗಡೆಯಾಗಿ ಬಹಳ ಯಶಸ್ವಿಯಾಯಿತು. ಇದುವರೆಗೆ ಸುಮಾರು 50 ಸಾವಿರ ಪ್ರತಿಯಂತ್ರಗಳು ತಯಾರಾಗಿವೆ'' ಎಂದು ತಮ್ಮ ಯಂತ್ರ ತಯಾರಿಯ ಪಯಣದ ಹಿನ್ನೆಲೆಯನ್ನು ಶೈಲಜಾ ಹೇಳಿದರು.

ಏನೇನು ಯಂತ್ರಗಳು: ದಾಳಿಂಬೆ ಹಣ್ಣಿನ ಕಾಳು ಬಿಡಿಸುವ ಯಂತ್ರ, ಅಡಿಕೆ ಸಿಪ್ಪೆ ಕೀಳುವ, ಅಡಿಕೆ ಗೊರಬಲು ಪಾಲಿಷ್ ಯಂತ್ರ, ಹುಣಸೆಹಣ್ಣಿನ ಬೀಜ ತೆಗೆಯುವ, ಸಿಪ್ಪೆ ಸುಲಿಯುವ ಯಂತ್ರವನ್ನು, ಅಡುಗೆ ಮನೆ ತ್ಯಾಜ್ಯದಿಂದ ಮನೆಯಲ್ಲೇ ಗೊಬ್ಬರ ತಯಾರು ಮಾಡುವ ಯಂತ್ರ, ಈರುಳ್ಳಿ ಬಿತ್ತನೆ ಯಂತ್ರ, ಬೀಜಗಳನ್ನು ಬಿತ್ತಲು ಸೈಕಲ್ ಮಾದರಿಯ ಯಂತ್ರ, ರಾಗಿ ಬಿತ್ತನೆ ಯಂತ್ರ, ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ಯಂತ್ರಗಳು ಶೈಲಜಾ ಅವರ ಫ್ಯಾಕ್ಟರಿಯಲ್ಲಿ ತಯಾರಾಗುತ್ತವೆ. ಇಲ್ಲಿಂದ ದೇಶ,ವಿದೇಶಗಳ ಹಲವು ಭಾಗಗಳಿಗೆ ಯಂತ್ರಗಳನ್ನು ತಯಾರಿಸಿ ಕಳುಹಿಸುತ್ತಾರೆ. 450 ರೂಪಾಯಿಯಿಂದ ಹಿಡಿದು 15 ಲಕ್ಷ ರೂಪಾಯಿಗಳವರೆಗೆ ಬೆಲೆಬಾಳುವ ಯಂತ್ರಗಳು ಇವರಲ್ಲಿವೆ. 


ಈ ಯಂತ್ರೋಪಕರಣಗಳನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಬೇಕಿದ್ದವರು ಶೈಲಜಾ ಅವರ ಮನೆಯ ಬಳಿಯಿರುವ ಫ್ಯಾಕ್ಟರಿಗೆ ಹೋಗಿ ಖರೀದಿಸಬಹುದು. ಆಧುನಿಕ ಜೀವನಶೈಲಿಯೊಳಗೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಉಪಕರಣಗಳನ್ನು ವಿನ್ಯಾಸಗೊಳಿಸಿದ್ದಾರೆ. 


ತಮ್ಮ ಈ ಕೆಲಸದ ಬಗ್ಗೆ ಶೈಲಜಾ ಅವರು ಹೇಳುವುದು ಹೀಗೆ: ನಾನು ಇದನ್ನು ಸೇವೆ ಮತ್ತು ಉದ್ಯಮ ಎರಡೂ ದೃಷ್ಟಿಯಿಂದ ನೋಡುತ್ತೇನೆ, ನಮಗೆ ಇದರಿಂದ ಜೀವನದ ದಾರಿ ಕಂಡುಕೊಳ್ಳಲು ಸುಲಭವಾಗುತ್ತದೆ ಎಂದು ಕೇಳಿಕೊಂಡು ಬರುವ ಮಹಿಳೆಯರು, ಅವಿದ್ಯಾವಂತ ಜನರು, ಬಡವರಿಗೆ ನಾವು ರಿಯಾಯಿತಿ ದರದಲ್ಲಿ ಯಂತ್ರೋಪಕರಣಗಳನ್ನು ನೀಡಿದ್ದೇವೆ. 


ಪ್ರತಿಯೊಬ್ಬ ರೈತರೂ ಎಲ್ಲಾ ಯಂತ್ರಗಳನ್ನು ಖರೀದಿಸಲು ಸಾಧ್ಯವಿಲ್ಲ. ಆಗ ನಾಲ್ಕೈದು ಜನರು ಸೇರಿ ಸಹಕಾರದಿಂದ ಯಂತ್ರ ಖರೀದಿಸಿ ಊರಿನವರಿಗೆಲ್ಲಾ ಇದರಿಂದ ಉಪಯೋಗವಾಗಬೇಕೆಂಬುದು ನನ್ನ ಬಯಕೆಯಾಗಿದೆ. ಈ ಮೂಲಕ ಈ ಯಂತ್ರೋಪಕರಣಗಳ ಪ್ರಚಾರ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದರು.

ಶೈಲಜಾ ಅವರು ಇದರ ಜೊತೆಗೆ ಹಲವಾರು ಸಮಾಜ ಸೇವೆ, ಜನಪರ, ವ್ಯಕ್ತಿತ್ವ ವಿಕಸನ ಕಾರ್ಯಗಳಲ್ಲಿ ತೊಡಗಿದ್ದಾರೆ. ಅನೇಕ ರೈತ ಮಹಿಳೆಯರ ಪಾಲಿಗೆ ಯಂತ್ರಗಳನ್ನು ಮತ್ತು ಉದ್ಯೋಗಗಳನ್ನು ಒದಗಿಸಿಕೊಡುವ ಮೂಲಕ ದಾರಿದೀಪವಾಗಿದ್ದಾರೆ. ಇವರ ಕೆಲಸ, ಸಾಧನೆಗಳನ್ನು ಗುರುತಿಸಿ ಅನೇಕ ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ.

ಕೃಷಿ ಮತ್ತು ತೋಟಗಾರಿಕೆ ಕೆಲಸದಲ್ಲಿ ತೊಡಗಿಕೊಂಡಿರುವವರಿಗೆ ದೇಶದಲ್ಲಿಯೇ ಯಂತ್ರೋಪಕರಣಗಳು ತಯಾರಾಗಬೇಕೆಂಬುದು ಇವರ ಬಯಕೆ. 

ಹೆಚ್ಚಿನ ಮಾಹಿತಿಗೆ ಶೈಲಜಾ ಅವರ  ಮೊಬೈಲ್ ಸಂಖ್ಯೆ: 9886737260

ಲೇಖನ: ಸುಮನಾ ಉಪಾಧ್ಯಾಯ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com