'ಸಂಸ್ಕಾರ ಕಲಿಸುವ ಹೆಣ್ಣು, ಗಂಡಿನ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ'

ಮನೆಯಲ್ಲಿ ಸಂಸ್ಕಾರ ಕಲಿಸುವವಳು ಹೆಣ್ಣು, ಜಗತ್ತಿನಲ್ಲಿ ಗಂಡಿನ ಕ್ರೌರ್ಯಕ್ಕೆ ಬಲಿಯಾಗುವವಳು ಹೆಣ್ಣು ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಪ್ರಭಾ.ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ

ಆದಿ ಶಕ್ತಿಯಾಗಿ ವಿಶ್ವದೆಲ್ಲೆಡೆ ನೆಲೆಸಿರುವ ಮಹಿಳೆ, ಈ ಜಗತ್ತಿಗೆ ದೊರಕಿರುವ ಅಪೂರ್ವವಾದ ಕೊಡುಗೆ ಎಂದರೆ ತಪ್ಪಾಗಲಾರದು. ಮಹಿಳೆಯ ಹೃದಯ ಆಗಸದಷ್ಟು ಎತ್ತರ. ಮನಸ್ಸು ಸಾಗರದಷ್ಟೇ ವಿಶಾಲ. ಮಹಿಳೆ ನಿಜಕ್ಕೂ ಈ ಸೃಷ್ಟಿಯ ಸೃಷ್ಟಿಗೆ ಕಾರಣಳಾದವಳು. 

ಮನೆಯಲ್ಲಿ ಸಂಸ್ಕಾರ ಕಲಿಸುವವಳು ಹೆಣ್ಣು, ಜಗತ್ತಿನಲ್ಲಿ ಗಂಡಿನ ಕ್ರೌರ್ಯಕ್ಕೆ ಬಲಿಯಾಗುವವಳು ಹೆಣ್ಣು ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಪ್ರಭಾ.ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರ. ಮಹಿಳಾ ದಿನಾಚರಣೆ ಬಗ್ಗೆ ನಿಮ್ಮ ವ್ಯಾಖ್ಯಾನ?

ಮಹಿಳೆಯರಿಗೆ ಪ್ರತಿದಿನವೂ ಮಹಿಳಾ ದಿನಾಚರಣೆಯೇ..ಮಹಿಳಾ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆ, ಬೆಳಗ್ಗಿನಿಂದ ಸಂಜೆವರೆಗೂ ನಾವು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇವೆ,  ಮಗಳು, ಪತ್ನಿ, ತಾಯಿ, ಸೊಸೆಯಾಗಿ ವಿವಿಧ ರೂಪಗಳಲ್ಲಿ ಹೆಣ್ಣಿನ ಪಾತ್ರ ಅಪಾರವಾದದ್ದು. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಹೆಣ್ಣು ತನ್ನ ಆರೋಗ್ಯ ಮತ್ತು ಸೌಂದರ್ಯದ ಕಡೆ ಗಮನ ಹರಿಸಬೇಕು. ಎಲ್ಲಾ ರೀತಿಯ ಸಾಧನೆ ಮಾಡಿ ಕಡೆಗೆ ಮಹಿಳೆ ಆರೋಗ್ಯದ ಸಮಸ್ಯೆಯಲ್ಲಿ ಸಿಲುಕಬಾರದು. ಮಕ್ಕಳಾದ ನಂತರ ಮಹಿಳೆಯರು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಹಿಂದೆಲ್ಲಾ ಮಹಿಳೆಯರು ಮನೆಯಲ್ಲೇ ಇರಬೇಕು ಎಂದು ಬಯಸುತ್ತಿದ್ದರೂ ಏಕೆಂದರೇ ಮಹಿಳೆಗೆ ಹೊರಗೆ ಹೋಗಿ ಸಾಧಿಸುವ ಶಕ್ತಿಯಿಲ್ಲ ಎಂದು ಹೇಳುತ್ತಿದ್ದರು.  ಆದರೆ ಇಂದು ಯಾವುದೇ  ಕ್ಷೇತ್ರದಲ್ಲಿ ಮಹಿಳೆ ಹಿಂದುಳಿದಿಲ್ಲ. ಜಗತ್ತಿನಲ್ಲಿರುವ ಎಲ್ಲಾ ಪ್ರಮುಖವಾದ ಹುದ್ದೆಗಳನ್ನು ಅಲಂಕರಿಸಿರುವ ಮಹಿಳೆ ಅತ್ಯದ್ಭುತ ಸಾಧನೆ ಮಾಡಿದ್ದಾಳೆ. 

ಪ್ರ. ನಿಮ್ಮ ಪ್ರಕಾರ ಪರಿಪೂರ್ಣ ಮಹಿಳೆ ಹೇಗಿರಬೇಕು?

ಮಹಿಳೆಗೆ ತನಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆಯೋ ಅದರಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳಬೇಕು. ಗೃಹಿಣಿಯಾಗಿರುವುದು ಸಾಮಾನ್ಯ ವಿಷಯವಲ್ಲ. ಕುಟುಂಬವನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವುದು ಒಂದು ಸವಾಲು. ಗಂಡ, ಮನೆ, ಮಕ್ಕಳು, ಅತ್ತೆ- ಮಾವ ಎಲ್ಲವನ್ನು ಸರಿದೂಗಿಸುವುದು ಸುಲಭದ ಮಾತಲ್ಲ. ಇದೆಲ್ಲಾ ಮಾಡುವುದರಿಂದ ಪರಿಪೂರ್ಣ ಮಹಿಳೆಯಾಲು ಸಾಧ್ಯ.ನಾವು ಹೇಗಿರುತ್ತೇವೆ ಎಂಬುದನ್ನು ನಮ್ಮ ಮಕ್ಕಳು ನೋಡಿ ಕಲಿಯುತ್ತವೆ, ಹೀಗಾಗಿ ಮೊದಲು ನಾವು ಸರಿಯಾಗಿರಬೇಕು, ನಾವು ತಪ್ಪು ಮಾಡಿದಾಗ ಅದನ್ನು ಸರಿಪಡಿಸಿಕೊಂಡಾಗ ಮಕ್ಕಳು ಅದನ್ನು ಅನುಸರಿಸುತ್ತವೆ. ನಾವು ಬೇರೆಯವರಿಗೆ ಮಾದರಿಯಾಗಿ ಬದುಕಬೇಕು ಎಂದಾಗ ಅದರ ಹಿಂದೆ ಅಪಾರ ಪರಿಶ್ರಮ ಮತ್ತು ತ್ಯಾಗ ಇರುತ್ತದೆ. 

ಪ್ರ.  ಅಪರಾಧ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಾಜ ಪರಿವರ್ತನೆ ಹೇಗಾಗಬೇಕು?

ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಕಲಿಸುವ ಸಂಸ್ಕಾರ ಚೆನ್ನಾಗಿರಬೇಕು.  ಮನೆಯಲ್ಲಿ ಸಂಸ್ಕಾರ ಕಲಿಸುವವಳು ಹೆಣ್ಣು, ಜಗತ್ತಿನಲ್ಲಿ ಗಂಡಿನ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಮಕ್ಕಳಿಗೆ ಏನಾದರೂ ಸಮಸ್ಯೆ ಇದ್ದರೇ ಸಣ್ಣ ವಯಸ್ಸಿನಲ್ಲಿಯೇ ಅದನ್ನು ಸರಿಪಡಿಸುವಂತ ಕೆಲಸ ಮಾಡಬೇಕು. ವೈದ್ಯರ ಬಳಿ ಕರೆದು ಕೊಂಡು ಅವರ ಮಾನಸಿಕ ಸ್ಥಿತಿ ಗತಿಯ ಬಗ್ಗೆ ತಿಳಿದುಕೊಂಡು ಸರಿಯಾದ ಚಿಕಿತ್ಸೆ ಕೊಡಿಸಬೇಕು. ಹೆಣ್ಣು-ಗಂಡು ಎಂಬ ತಾರತಮ್ಯ ಮಾಡಬಾರದು, ಊಟ, ಬಟ್ಟೆ, ವಿದ್ಯೆ ಪ್ರೀತಿ ಎಲ್ಲವನ್ನು ಸಮಾನವಾಗಿ ಹಂಚಿ ಮಕ್ಕಳನ್ನು ಬೆಳಸಬೇಕು. ಮನೆಯಲ್ಲಿ ನಾವು ಈ ರೀತಿಯ ಗುಣ ಬೆಳೆಸಿದರೆ ಹೊರಗಡೆ ಸಮಾಜದಲ್ಲಿ ನಮ್ಮ ಮಕ್ಕಳು ಪರಸ್ಪರ ಗೌರವ ಆದರ ನೀಡಲು ಸಹಾಯವಾಗುತ್ತದೆ.  ಹೆಣ್ಣು ಮಕ್ಕಳನ್ನ ಗೌರವದಿಂದ ನೋಡಲು ಸಾಧ್ಯವಾಗುತ್ತದೆ.

ಪ್ರ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮ್ಮ ಅನಿಸಿಕೆ?

ನ್ಯಾಯಾಂಗ ವ್ಯವಸ್ಥೆ ಜೊತೆಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಅಗತ್ಯವಿದೆ. ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ, ತಪ್ಪಿತಸ್ಥರಿಗೆ, ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ತರುವ ನೀತಿ ನಿಯಮ ಹಾಗೂ ಕಾನೂನುಗಳು ಪಾರದರ್ಶಕವಾಗಿ ಜನರಿಗೆ ತಲುಪುವಂತಾಗಬೇಕು, ನಮ್ಮನ್ನ ರಕ್ಷಿಸಲು, ಸರ್ಕಾರ, ವ್ಯವಸ್ಥೆ ನಮ್ಮ ಜೊತೆಯಿದೆ ಎಂಬ ಧೈರ್ಯ ಮೂಡಿಸಬೇಕು. ಹಾಗೂ ನ್ಯಾಯಾಂಗ ತಪ್ಪಿತಸ್ಥರಿಗೆ ಶೀಘ್ರವಾಗಿ ನ್ಯಾಯ ದೊರಕುವಂತಾಗಬೇಕು. ಮೊದಲೇ ನೊಂದಿರುವ ಸಂತ್ರಸ್ತರಿಗೆ ವ್ಯವಸ್ಥೆ ಹಾಗೂ ಕಾನೂನಿನಿಂದ ಮತ್ತಷ್ಟು ನೋವಾಗಬಾರದು.

ಪ್ರ. ಮಹಿಳೆಯರಿಗೆ ನಿಮ್ಮ ಸಂದೇಶ?

ಮಹಿಳೆಯರ ಸೇಫ್ಟಿ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕು, ಯಾವುದೇ ಭಯವಿಲ್ಲದೇ ಮಹಿಳೆ ರಾತ್ರಿ ಹೊರಹೋಗುವ ವಾತಾವರಣ ನಿರ್ಮಾಣವಾಗಬೇಕು, ಆ ರೀತಿಯ ವಾತಾವರಣ ಸೃಷ್ಠಿ ಮಾಡುವ ನಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಇನ್ನೂ ಹೆಚ್ಚಿನ ರೀತಿಯ ಸಾಧನೆ ಮಾಡುವಲ್ಲಿ ಸಹಾಯವಾಗುತ್ತದೆ. ಹೆಣ್ಣು ಮಕ್ಕಳು ಯಾವುದಕ್ಕೂ ಹಿಂಜರಿಯದೇ ತಮಗಾದ ದೌರ್ಜನ್ಯದ ಬಗ್ಗೆ ನಿರ್ಭಿತಿಯಿಂದ ಹೇಳಿಕೊಳ್ಳಬೇಕು, ಹೀಗಾದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯ.ಮೊದಲು ನಾವು ಜನ ಸಾಮಾನ್ಯರು ಸಶಕ್ತರಾಗಬೇಕು,  ಪ್ರಬಲರಾಗಬೇಕು ಇದರಿಂದ ತಪ್ಪಿತಸ್ಥರಿಗೆ ಭಯ ಬರುತ್ತದೆ. ತಪ್ಪು ಮಾಡಲು ಹಿಂಜರಿಯುತ್ತಾರೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಉದ್ದೇಶ ಕೂಡ ಇದಾಗಿದೆ. ಪ್ರೀತಿಯಿಂದ ಎಲ್ಲವನ್ನು ಗೆಲ್ಲಬೇಕು.

ಪ್ರ. ನಿಮಗೆ ಸ್ಫೂರ್ತಿ ಯಾರು?

ನಾನು ಸದಾ ಖುಷಿಯಾಗಿರುವ ಮಹಿಳೆ, ನನ್ನ ಸುತ್ತ ಮುತ್ತ ಇರುವವರು ಖುಷಿಯಾಗಿರಬೇಕೆಂದು ಬಯಸುತ್ತೇನೆ. ಹೆಣ್ಣಾಗಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಿದೆ. ನಮ್ಮ ಅಮ್ಮ, ಅತ್ತೆ ನಾದಿನಿ ನನಗೆ ಸ್ಪೂರ್ತಿ ಅವರನ್ನು ನೋಡಿ ನಾನು ಬೆಳೆದಿದ್ದೇನೆ, ಕಲಿತಿದ್ದೇನೆ, ಹೀಗಾಗಿ ನನ್ನನ್ನು ನೋಡಿ ಅನುಕರಿಸುವವರಿದ್ದಾರೆ ಹೀಗಾಗಿ ನನಗೂ ಜವಾಬ್ದಾರಿಯಿರುತ್ತದೆ. ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತೇನೆ, ಮಕ್ಕಳನ್ನು ಸಮಾನವಾಗಿ ಬೆಳೆಸುತ್ತಿದ್ದೇನೆ, ನನ್ನದೆ ಆದ ಪ್ರೊಡಕ್ಷನ್ ಹೌಸ್ ತೆರೆಯುತ್ತಿದ್ದೇನೆ, ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಹೀಗಾಗಿ ನನಗೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ.

21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು ಇದೀಗ ಕಷ್ಟವಿದ್ದಲ್ಲಿ ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಟ್ಟಿದ್ದಾಳೆ. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ' ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ.

ಸಂದರ್ಶನ- ಶಿಲ್ಪ ಭರತ್ ಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com