ಇಸ್ರೇಲ್ ಚುನಾವಣೆ: ಮತ್ತೆ ನೆತನ್ಯಾಹು ಆಯ್ಕೆಗೆ ಎದುರಾಳಿ ಹಮಾಸ್ ಹೇಳಿದ್ದೇನು?

ದಾಖಲೆಯ ಸತತ 5ನೇ ಬಾರಿಗೆ ನೆತನ್ಯಾಹು ಅವರ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಈ ಕುರಿತು ಇಸ್ರೇಲ್ ಎದುರಾಳಿ ಹಮಾಸ್ ಸಂಘಟನೆ ಕೂಡ ಪ್ರತಿಕ್ರಿಯೆ ನೀಡಿದೆ.
ಹಮಾಸ್ ಪ್ಯಾಲೆಸ್ತೀನ್ ಮುಖಂಡ ಅಲ್ ಹಯ್ಯಾ ಹಾಗೂ ನೆತನ್ಯಾಹು
ಹಮಾಸ್ ಪ್ಯಾಲೆಸ್ತೀನ್ ಮುಖಂಡ ಅಲ್ ಹಯ್ಯಾ ಹಾಗೂ ನೆತನ್ಯಾಹು
ಪ್ಯಾಲೆಸ್ತೀನ್: ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಇಸ್ರೇಲ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜಯಭೇರಿ ಭಾರಿಸಿದ್ದು, ದಾಖಲೆಯ ಸತತ 5ನೇ ಬಾರಿಗೆ  ನೆತನ್ಯಾಹು ಅವರ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಈ ಕುರಿತು ಇಸ್ರೇಲ್ ಎದುರಾಳಿ ಹಮಾಸ್ ಕೂಡ ಪ್ರತಿಕ್ರಿಯೆ ನೀಡಿದೆ.
ಇಸ್ರೇಲ್ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದ ಹಮಾಸ್, ಚುನಾವಣಾ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ್ದು, ನೆತನ್ಯಾಹು ಆಯ್ಕೆಯನ್ನು ಅಸಂಬದ್ಧ ಎಂದು ಹೇಳಿದೆ. ಈ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್ ಸರ್ಕಾರ, ಇಸ್ರೇಲ್ ನಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಯೋಜನವಿಲ್ಲ. ಶಾಂತಿ ಮಾತುಕತೆಯಲ್ಲಿ ನಂಬಿಕೆ ಇರದ ಯಾವುದೇ ಪಕ್ಷ ಅಧಿಕಾರ ರಚನೆ ಮಾಡಿದರೂ ಅದು ಹಾಲಿ ಪರಿಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಸ್ರೇಲ್ ನ ಎಲ್ಲ ರಾಜಕೀಯ ಪಕ್ಷಗಳೂ ಒಂದೇ.. ಗಾಜಾ ಮೇಲೆ ನಿಯಂತ್ರಣ ಸಾಧಿಸುವುದೇ ಅವರ ಗುರಿ ಎಂದು ವ್ಯಂಗ್ಯವಾಗಿ ಹೇಳಿದೆ.
ಇದೇ ರೀತಿಯ ಪ್ರತಿಕ್ರಿಯೆಯನ್ನು ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯಾ ಕೂಡ ಹೇಳಿದ್ದು, ಇಸ್ರೇಲ್ ಚುನಾವಣಾ ಫಲಿತಾಂಶಕ್ಕೆ ನಮ್ಮ ಪ್ರತಿಕ್ರಿಯೆ ಅಸಂಬದ್ಧ.. ಅಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಗುರಿ ಗಾಜಾ ಪಟ್ಟಿ ಮೇಲಿನ ನಿಯಂತ್ರಣವಾಗಿರುತ್ತದೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಇಸ್ರೇಲ್ ನ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ನಾಣ್ಯದ ಮುಖಗಳಿದ್ದಂತೆ. ಅವರ ಗುರಿ ಕೇವಲ ಗಾಜಾ ಪಟ್ಟಿಯಾಗಿರುತ್ತದೆ. ಹೀಗಾಗಿ ನಾವು ನಮ್ಮ ಹೋರಾಟ ಮುಂದುವರೆಸಲಿದ್ದು, ಇಸ್ರೇಲ್ ಆಕ್ರಮಿತ ಪ್ರದೇಶವನ್ನು ಸ್ವತಂತ್ರಗೊಳಿಸಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಶಾಂತಿಯಲ್ಲಿ ನಂಬಿಕೆ ಇರದ ಯಾವುದೇ ಸರ್ಕಾರ ನಮಗೆ ಬೇಕಿಲ್ಲ ಎಂದೂ ಹಯ್ಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com