ತನ್ನನ್ನು ಸಾಕಿ ಬೆಳೆಸಿದ ಮಾಲೀಕನನ್ನೇ ಕೋಪದಿಂದ ಕಚ್ಚಿ ಕೊಂದು ಹಾಕಿದ 'ಕ್ಯಾಸ್ಸೋವಾರಿ' ಪಕ್ಷಿ!

ತನ್ನನ್ನು ಸಾಕಿ ಬೆಳೆಸಿದ ಮಾಲೀಕನನ್ನೇ ಪಕ್ಷಿಯೊಂದು ಕಚ್ಚಿ ಕೊಂದು ಹಾಕಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಲೋರಿಡಾ: ತನ್ನನ್ನು ಸಾಕಿ ಬೆಳೆಸಿದ ಮಾಲೀಕನನ್ನೇ ಪಕ್ಷಿಯೊಂದು ಕಚ್ಚಿ ಕೊಂದು ಹಾಕಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಕನ್ನಡದಲ್ಲಿ ಪ್ರಖ್ಯಾತ ಹಾಡೊಂದಿದೆ.... 'ನೀನೇ ಸಾಕಿದಾ ಗಿಣಿ.. ನಿನ್ನಾ ಮುದ್ದಿನಾ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ'.... ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮಾನಸ ಸರೋವರ ಚಿತ್ರದ ಖ್ಯಾತ ಹಾಡಿದು.. ಆದರೆ ಹಾಡಿನ ಸಾಲಿನಲ್ಲಿರುವಂತೆ ಅಕ್ಷರಶಃ ಪಕ್ಷಿಯೊಂದು ತನ್ನನ್ನು ಸಾಕಿ ಬೆಳೆಸಿದ ಮಾಲೀಕನನ್ನು ಕಚ್ಚಿ ಕೊಂದು ಹಾಕಿದೆ.
ಈ ಘಟನೆ ನಡೆದಿರುವುದು ಫ್ಲೋರಿಡಾದಲ್ಲಿ... ಕ್ಯಾಸೋವಾರಿ ಎಂಬ ಪಕ್ಷಿ ಜಾತಿಗೆ ಸೇರಿದ ಪಕ್ಷಿಯೊಂದು ತನ್ನನ್ನು ಸಾಕಿ ಬೆಳೆಸಿದ್ದ ಮಾಲೀಕನನ್ನುಕೋಪದಿಂದ ಕೊಂದು ಹಾಕಿದೆ. ಆಸ್ಟ್ರಿಚ್ ನಂತಹ ಹಾರಲಾಗದ ದೊಡ್ಡ ಜಾತಿಯ ಪಕ್ಷಿಗಳ ಸಾಲಿಗೆ ಸೇರುವ ಕ್ಯಾಸೋವಾರಿ ಪಕ್ಷಿ ತನ್ನ ಮಾಲೀಕ 75 ವರ್ಷದ ಮಾರ್ವಿನ್ ಹೆಜೋಸ್ ಎಂಬಾತನನ್ನು ಕಚ್ಚಿ ಕೊಂದು ಹಾಕಿದೆ. 
ಮಾರ್ವಿನ್ ಹೆಜೋಸ್ ತನ್ನ ಫ್ಲೋರಿಡಾ ನಿವಾಸದ ಸಮೀಪದಲ್ಲೇ ಖಾಸಗಿ ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಂಡು ದಶಕಗಳಿಂದಲೂ ಇಲ್ಲಿ ಅಪರೂಪದ ತಳಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುತ್ತಿದ್ದನಂತೆ. ಇತ್ತೀಚೆಗೆ ಈತ ತನ್ನ ನಿವಾಸದ ಮಹಡಿ ಮೇಲೆ ಹೋಗಿದ್ದಾಗ ಆತ ಜಾರಿ ಬಿದ್ದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಈ ಕ್ಯಾಸೋವಾರಿ ಪಕ್ಷಿ ಆತನ ಮೇಲೆ ದಾಳಿ ಮಾಡಿ ಆತನ ಕುತ್ತಿಗೆಯನ್ನು ಕಚ್ಚಿ ಹಾಕಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮಾರ್ವಿನ್ ಹೆಜೋಸ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಸುಮಾರು ಹೊತ್ತಿನ ಬಳಿಕ ಸ್ಥಳಕ್ಕಾಗಮಿಸಿದ ಮನೆಯವರು ಮಾರ್ವಿನ್ ಕೆಳಗೆ ಬಿದ್ದಿರುವುದನ್ನು ಗಮನಿಸಿ ಹತ್ತಿರ ಹೋದಾಗ ಆತ ಸಾವನ್ನಪ್ಪಿರುವುದು ತಿಳಿದಿದೆ. 
ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಅದನ್ನು ಪ್ರತ್ಯೇಕವಾಗಿರಿಸಿದ್ದಾರೆ. ಇನ್ನು ಪಕ್ಷಿಗೆ ಮಾರ್ವಿನ್ ಮೇಲೆ ಏಕೆ ಕೋಪವಿತ್ತು ಎಂಬುದನ್ನು ಪೊಲೀಸರು ತಜ್ಞರ ನೆರವಿನಿಂದ ತನಿಖೆ ನಡೆಸುತ್ತಿದ್ದಾರೆ.
ಪ್ರಮುಖವಾಗಿ ಪಕ್ಷಿ ಪ್ರಭೇದದಲ್ಲಿ ಅತ್ಯಂತ ಅಪರೂಪದ ಪ್ರಭೇದ ಇದಾಗಿದ್ದು, ಜಗತ್ತಿನ ಅತ್ಯಂತ ಅಪಾಯಕಾರಿ ಪಕ್ಷಿಗಳಲ್ಲಿ ಈ ಕ್ಯಾಸೋವಾರಿ ಕೂಡ ಒಂದು.. ಹಾರಲಾರದ ದೈತ್ಯ ದೇಹಿಯಾಗಿರುವ ಈ ಕ್ಯಾಸೋವಾರಿ ಸುಮಾರು 60 ಕೆಜಿಗಳ ವರೆಗೂ ತೂಕ ಹೊಂದಿರುತ್ತದೆ. ಇವು ಸುಮಾರು 8 ಅಡಿಗಳವರೆಗೂ ಬೆಳೆಯುತ್ತವೆ. ಇವುಗಳ ಶಕ್ತಿ ಎಂದರೆ ಇವುಗಳ ಪಾದಗಳು.. ದೈತ್ಯಾಕಾರದ ಪಾದಗಳ ನೆರವಿನಿಂದ ಇವು ಎಂತಹ ಬಲಿಷ್ಟ ವ್ಯಕ್ತಿಯನ್ನಾದರೂ ಕಾಲಿನಿಂದ ತುಳಿದು ಅಲುಗಾಡದಂತೆ ಮಾಡುತ್ತವೆ. ಅಲ್ಲದೆ ಇವುಗಳ ಕಾಲಿನಲ್ಲಿರುವ ಉಗುರುಗಳು ಬರೊಬ್ಬರಿ 10 ಸೆಂ.ಮೀಗಳವರೆಗೂ ಬೆಳೆಯುತ್ತವೆ. ಅಂತೆಯೇ ತನ್ನ ಬಲಿಷ್ಟ ಕೊಕ್ಕುಗಳಿಂದ ಈ ಪಕ್ಷಿ ಒಂದೇ ಏಟಿಗೆ ಎಂತಹ ಬಲಿಷ್ಠ ವ್ಯಕ್ತಿಯಾದರೂ ಕುಕ್ಕಿ ಕೊಂದು ಹಾಕಿ ಬಿಡುತ್ತವೆ. ಅಲ್ಲದೆ ಗಂಟೆಗೆ ಸುಮಾರು 50 ಕಿಮೀ ವೇಗದಲ್ಲಿ ಇವು ಓಡಬಲ್ಲದು. ಇದೇ ಕಾರಣಕ್ಕೆ ಈ ಕ್ಯಾಸೋವಾರಿ ಪಕ್ಷಿಯನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಪಕ್ಷಿ ಎಂದು ಹೇಳಲಾಗುತ್ತದೆ. ಈ ಕ್ಯಾಸೋವಾರಿ ಪಕ್ಷಿ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. 
ಇದೇ ಕಾಲುಗಳಿಂದಲೇ ಈ ಪಕ್ಷಿ ಮಾರ್ವಿನ್ ರನ್ನು ತುಳಿದು ಬಳಿಕ ಆತನ ಕುತ್ತಿಗೆಯನ್ನು ಕಚ್ಚಿಹಾಕಿದೆ ಎನ್ನಲಾಗಿದೆ. ಪ್ರಸ್ತುತ ಈ ಕ್ಯಾಸೋವಾರಿ ಪಕ್ಷಿ ದಾಳಿಯ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com