ಶ್ರೀಲಂಕಾದಲ್ಲಿ 7 ಆತ್ಮಾಹುತಿ ಬಾಂಬ್ ದಾಳಿ: ತುರ್ತು ಪರಿಸ್ಥಿತಿ ಘೋಷಣೆ, ಸ್ಥಳೀಯರ ಕೈವಾಡ ಶಂಕೆ

ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಈಸ್ಟರ್ ಹಬ್ಬದ ದಿನವಾದ ಭಾನುವಾರ ನಡೆದ ಏಳು ಆತ್ಮಾಹುತಿ ಬಾಂಬ್ ದಾಳಿ ಹಾಗೂ...
ಸ್ಫೋಟಗೊಂಡ ಸ್ಥಳ
ಸ್ಫೋಟಗೊಂಡ ಸ್ಥಳ
ಕೊಲಂಬೊ: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಈಸ್ಟರ್ ಹಬ್ಬದ ದಿನವಾದ ಭಾನುವಾರ ನಡೆದ ಏಳು ಆತ್ಮಾಹುತಿ ಬಾಂಬ್ ದಾಳಿ ಹಾಗೂ ಒಂದು ಬಾಂಬ್ ಸ್ಪೋಟದಲ್ಲಿ ಐವರು ಕನ್ನಡಿಗರು ಸೇರಿದಂತೆ 290 ಮಂದಿ ಮೃತಪಟ್ಟಿದ್ದು, ದ್ವೀಪ ರಾಷ್ಟ್ರ ತತ್ತರಿಸಿ ಹೋಗಿದೆ.
ಸರಣಿ ಆತ್ಮಾಹುತಿ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿರಿಸೇನಾ ತಿಳಿಸಿದ್ದಾರೆ. 
ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ ಈ ಭೀಕರ ಕೃತ್ಯದ ಹಿಂದೆ ಶ್ರೀಲಂಕಾದ ಹಾಗೂ ನ್ಯಾಷನಲ್ ತೈಹಿದ್ ಜಮಾತ್ ಸಂಘಟನೆಯ ಕೈವಾಡದ ಶಂಕೆಯನ್ನು ಸರ್ಕಾರ ವ್ಯಕ್ತಪಡಿಸಿದೆ.
ಎಲ್ಲಾ ಬಾಂಬ್ ದಾಳಿಯಲ್ಲೂ ಸ್ಥಳೀಯರ ಕೈವಾಡವಿರುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರರಾದ ರಜಿತ ಸೇನಾರತ್ನೆ ಅವರು ಹೇಳಿದ್ದಾರೆ.
ಏಪ್ರಿಲ್ 11ರಂದೆ ಉಗ್ರ ದಾಳಿಯ ಬಗ್ಗೆ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿ ನೀಡಿತ್ತು. ಏಪ್ರಿಲ್ 4ರಂದು ಅಂತರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದವು ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಭಾನುವಾರದ ಸರಣಿ ಬಾಂಬ್ ಸ್ಫೋಟದ ನಂತರ ತನಿಖೆ ಮುಂದುವರಿಸಿರುವ ಪೊಲೀಸರು ಹಾಗೂ ಸೇನಾ ಯೋಧರು ಎಲ್ಲೆಡೆ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಇಂದು ಬಸ್‌ ನಿಲ್ದಾಣವೊಂದರಲ್ಲಿ 85ಕ್ಕೂ ಹೆಚ್ಚು ಬಾಂಬ್‌ ಡಿಟೋನೇಟರ್‌ಗಳು ಪತ್ತೆಯಾಗಿದೆ ಎಂದು ಲಂಕಾ ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com