ಶ್ರೀಲಂಕಾದಲ್ಲಿ ಉಗ್ರ ದಾಳಿ: ಸಾವಿನ ಸಂಖ್ಯೆ 310ಕ್ಕೆ ಏರಿಕೆ, 10 ಭಾರತೀಯರ ಸಾವು, 40 ಶಂಕಿತರ ಬಂಧನ

ನೆರೆಯ ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಅಲ್ಲದೆ ಉಗ್ರರ ವಿಧ್ವಂಸಕ ಕೃತ್ಯದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Published: 23rd April 2019 12:00 PM  |   Last Updated: 23rd April 2019 02:10 AM   |  A+A-


Sri Lanka bombings: Death toll reaches 310 including 10 Indians as 40 suspects arrested

ಸಂಗ್ರಹ ಚಿತ್ರ

Posted By : SVN SVN
Source : The New Indian Express
ಕೊಲಂಬೋ: ನೆರೆಯ ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಅಲ್ಲದೆ ಉಗ್ರರ ವಿಧ್ವಂಸಕ ಕೃತ್ಯದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಮೂಲಕ ಮೃತಪಟ್ಟವರ ಭಾರತೀಯರ ಸಂಖ್ಯೆ 10ಕ್ಕೆ ಏರಿದೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸುಷ್ಮಾ ಸ್ವರಾಜ್, ಒಟ್ಟು 10 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಕಾರ್ಯ ಮುಂದುವರಿದಿದೆ. ಈಗಾಗಲೇ ಭಾರತೀಯರಾದ ಎ ಮರೇಗೌಡ ಮತ್ತು ಹೆಚ್​ ಪುಟ್ಟರಾಜು ಅವರ ಮೃತದೇಹ ಯಾವುದು ಅನ್ನೋದು ಕನ್ಫರ್ಮ್ ಆಗಿದೆ. 

ಉಳಿದವರ ಮೃತದೇಹ ಗುರುತು ಪತ್ತೆಹಚ್ಚುವ ಸಲುವಾಗಿ ಹಾಗೂ ಅವರ ಮೃತದೇಹ ಸ್ವದೇಶಕ್ಕೆ ತರಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈ ಸಂಬಂಧ ಶ್ರೀಲಂಕಾದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಕಳೆದ ಭಾನುವಾರ ನಡೆದ ಸರಣಿ ಸ್ಫೋಟದಲ್ಲಿ ಒಟ್ಟು 310 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನು, ಶ್ರೀಲಂಕಾದಲ್ಲಿ ಭಾರತೀಯರ ರಾಯಭಾರಿ ಮಾಡಿರುವ ಟ್ವೀಟ್ ಅನ್ನ ಸುಷ್ಮಾ ಸ್ವರಾಜ್ ರಿಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಶ್ರೀಲಂಕಾ ರಾಷ್ಟ್ರಾಧ್ಯಕ್ಷ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ಭಾರತದಲ್ಲೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‌ಎಸ್‌ಸಿ) ಸಭೆಯಲ್ಲಿ ಈ ನಿರ್ಧಾರ ತಾಳಲಾಗಿದೆ. ಉಗ್ರ ನಿಗ್ರಹದ ವಿಚಾರದಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ''ಉಗ್ರ ನಿಗ್ರಹದ ವಿಚಾರದಲ್ಲಿ ಸಾಮಾನ್ಯ ಸಂದರ್ಭದಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ಇಲ್ಲ. ಹೀಗಾಗಿ ತುರ್ತು ಪರಿಸ್ಥಿತಿ ಘೋಷಿಸಿ ಹೆಚ್ಚಿನ ಅಧಿಕಾರ ನೀಡಲಾಗುವುದು. ಸಾರ್ವಜನಿಕ ಭದ್ರತೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳಲು ಭದ್ರತಾ ಪಡೆಗಳಿಗೆ ಇದರಿಂದ ಅನುಕೂಲವಾಗಲಿದೆ. ಆದರೆ ಈ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಿಲ್ಲ,'' ಎಂದು ಸರಕಾರ ಸ್ಪಷ್ಟಪಡಿಸಿದೆ. 

ಶ್ರೀಲಂಕಾ ಸರ್ಕಾರರ ಮಂಗಳವಾರದಂದು ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇದೇವೇಳೆ, ದ್ವೀಪ ರಾಷ್ಟ್ರದಲ್ಲಿ ಉಗ್ರ ನಿಗ್ರಹಕ್ಕೆ ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡಬೇಕು ಎಂದು ಸಿರಿಸೇನಾ ಮನವಿ ಮಾಡಿದ್ದಾರೆ. 

ಮೂವರು ಮಕ್ಕಳನ್ನು ಕಳೆದುಕೊಂಡ ಡೆನ್ಮಾರ್ಕ್‌ ಆಗರ್ಭ ಶ್ರೀಮಂತ
ಇನ್ನು ಈಸ್ಟರ್‌ ಸಂಡೇಯಂದು ನಡೆದಿದ್ದ ಭೀಕರ ಬಾಂಬ್ ಸ್ಫೋಟ ಪ್ರಕರಣದಲ್ಲಿ 40ಕ್ಕೂ ಹೆಚ್ಚು ವಿದೇಶಿಗರು ಸಾವನ್ನಪ್ಪಿದ್ದು, ಈ ಪೈಕಿ 10 ಭಾರತೀಯರಾಗಿದ್ದಾರೆ. ಅಲ್ಲದೆ ವಿವಿಧ ದೇಶಗಳ ಸುಮಾರು 30 ಮಂದಿ ವಿದೇಶಿಗರೂ ಸಾವನ್ನಪ್ಪಿದ್ದು, ಭೀಕರ ಬಾಂಬ್‌ ಸ್ಫೋಟದಲ್ಲಿ ಡೆನ್ಮಾರ್ಕ್ನ ಶ್ರೀಮಂತ ವ್ಯಕ್ತಿ ಆಂಡರ್ಸ್‌ ಹೋಚ್‌ ಪೊವ್ಲ್‌ಸೆನ್‌ ಅವರು ತಮ್ಮ ಮೂವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಭಾನುವಾರ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊವ್ಲ್‌ಸೆನ್‌ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ. 

40 ಮಂದಿ ಶಂಕಿತರ ಬಂಧನ 
ಸರಣಿ ಬಾಂಬ್‌ ಸ್ಫೋಟ ಸಂಬಂಧ ಈ ವರೆಗೂ 40 ಮಂದಿಯನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಮುಸ್ಲಿಂ ಸಮುದಾಯದವರು ಎಂದು ತಿಳಿಸಿರುವ ಪೊಲೀಸ್‌ ಅಧಿಕಾರಿಗಳು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ''ಬಂಧಿತರಿಗೆ ಹೆಚ್ಚಿನ ಪ್ರಚಾರ ಸಿಗುವುದನ್ನು ತಡೆಯಲು ದಾಳಿಯಲ್ಲಿ ತೊಡಗಿರುವ ಶಂಕಿತರ ಮಾಹಿತಿ ಬಹಿರಂಗಪಡಿಸದೇ ಇರಲು ನಿರ್ಧರಿಸಲಾಗಿದೆ,'' ಎಂದು ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ರಿವಾ ವಿಜೆವರ್ನೆ ಹೇಳಿದ್ದಾರೆ. ಮೂರು ಹೋಟೆಲ್‌ಗಳ ಮೇಲೆ ದಾಳಿ ನಡೆಸಲು ಸ್ಫೋಟಕ ಸಾಗಿಸಿದ ವ್ಯಾನ್‌ ಅನ್ನು ವಶಕ್ಕೆ ಪಡೆದಿದ್ದು, ವ್ಯಾನ್‌ ಚಾಲಕನನ್ನು ಬಂಧಿಸಲಾಗಿದೆ. ಚಾಲಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ದಾಳಿ ನಡೆಸುವ ಮುನ್ನ ಮೂರು ತಿಂಗಳು ಕಾಲ ಉಗ್ರರು ತಂಗಿದ್ದ ಅಡಗುತಾಣವನ್ನು ಪತ್ತೆಹಚ್ಚಲಾಗಿದ್ದು, ಅದು ದಕ್ಷಿಣ ಕೊಲಂಬೊದ ಪನಾಡುರಾ ಉಪನಗರದಲ್ಲಿದೆ ಎಂದು ಶ್ರೀಲಂಕಾ ಪೊಲೀಸ್‌ ಮೂಲಗಳು ತಿಳಿಸಿವೆ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp