ಉಗ್ರ ದಾಳಿ ಹಿನ್ನಲೆ: ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಕ್ಕೆ ಆಗ್ರಹ!

ಕಳೆದ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಮಹಿಳಾ ಬಾಂಬರ್‌ ಇರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಕ್ಕೆ ಸಲಹೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲೊಂಬೋ: ಕಳೆದ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಮಹಿಳಾ ಬಾಂಬರ್‌ ಇರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಕ್ಕೆ ಸಲಹೆ ಮಾಡಿದ್ದಾರೆ. 
ಯುಎನ್ ಪಿ ಪಕ್ಷದ ನಾಯಕ ಆಶು ಮಾರಸಿಂಘೆ ಅವರು ಈ ಬಗ್ಗೆ ಫೇಸ್ ಬುಕ್‌ನಲ್ಲಿ ಈ ಬಗ್ಗೆ ಬರೆದು ಕೊಂಡಿದ್ದು, ಭದ್ರತಾ ದೃಷ್ಟಿಯಿಂದ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮುಖ್ಯ ಎಂದು ಅವರು ವಾದಿಸಿದ್ದಾರೆ. 
'ಬುರ್ಖಾ ಎನ್ನುವುದು ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರ ಅಲ್ಲ. ಉಗ್ರ ಕೃತ್ಯ ನಡೆಸುವ ಪುರುಷರು ತಮ್ಮ ಗುರುತು ಮುಚ್ಚಿಕೊಳ್ಳಲು ಅದನ್ನು ಬಳಕೆ ಮಾಡಿಕೊಂಡಿರುವ ಬಗ್ಗೆ ದೃಷ್ಟಾಂತ ಇದೆ. ದೇಶದ ಕೆಲವು ಭಾಗಗಳಿಗೆ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿಸುವಾಗ ಬುರ್ಖಾ ತೆಗೆಯಬೇಕು ಎಂಬ ಸೂಚನೆಯನ್ನು ನೀಡಲಾಗಿತ್ತು ಎಂದು ಅಂಶು ಮಾರಸಿಂಘೆ ಹೇಳಿದ್ದಾರೆ. 
ಜತೆಗೆ ದ್ವೀಪ ರಾಷ್ಟ್ರದಲ್ಲಿರುವ ಸಮುದಾಯದ ಮುಖಂಡರು ಅದು ಸಾಂಪ್ರದಾಯಿಕ ವಸ್ತ್ರ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ದೇಶದಲ್ಲಿ ಬುರ್ಖಾ ನಿಷೇಧವನ್ನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬುರ್ಖಾ ಧರಿಸಿ ಪರಾರಿಯಾದ ಉಗ್ರರು?
ಕಳೆದ ಭಾನುವಾರ ನಡೆದ ಉಗ್ರದಾಳಿ ಪ್ರಕರಣದಲ್ಲಿ ಭಾಗಿಯಾದ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿದ ವೇಳೆ, ಬುರ್ಖಾ ಧರಿಸಿದ ಮಹಿಳೆಯರು ದಾಳಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗಿದ್ದಾರೆ. ಹೀಗಾಗಿ ಮಸೀದಿಗಳ ಮೌಲ್ವಿಗಳ ಜೊತೆ ಚರ್ಚಿಸಿ ಬುರ್ಖಾ ನಿಷೇಧ ಜಾರಿಗೆ ತರುವ ನಿಟ್ಟಿನಿಂದ ಸಚಿವ ಸಂಪುಟದ ಸದಸ್ಯರು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಉಗ್ರರು ತಮ್ಮ ಕೃತ್ಯಗಳಿಗೆ ಮಹಿಳೆಯರ ನೆರವು ಪಡೆಯುವ ನಿಟ್ಟಿನಲ್ಲಿ ಅವರಿಗೆ ಬುರ್ಖಾ ಧರಿಸಿ ಕರೆತರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಈಗಾಗಲೇ ಚಾದ್‌, ಕ್ಯಾಮರೂನ್‌, ಗಬಾನ್‌, ಮೊರಾಕ್ಕೋ, ಆಸ್ಟ್ರೀಯಾ, ಬಲ್ಗೇರಿಯಾ, ಡೆನ್ಮಾರ್ಕ್, ಫ್ರಾನ್ಸ್‌, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com