ಭಾರತ, ಪಾಕಿಸ್ತಾನ ಬಯಸಿದರೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶಕ್ಕೆ ಸಿದ್ದ: ಡೊನಾಲ್ಡ್ ಟ್ರಂಪ್ ಪುನರುಚ್ಛಾರ

ದಶಕಗಳ ಕಾಲದ ಕಾಶ್ಮೀರ ವಿವಾದ ಬಗೆಹರಿಸುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ದಶಕಗಳ ಕಾಲದ ಕಾಶ್ಮೀರ ವಿವಾದ ಬಗೆಹರಿಸುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ವಿಷಯವಾದರೂ ಕೂಡ ಎರಡೂ ರಾಷ್ಟ್ರಗಳು ಬಯಸಿದರೆ ವಿವಾದ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ದ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.
ಕಳೆದ ವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಶ್ಮೀರ ವಿವಾದ ಬಗೆಹರಿಸಲು ತಾವು ಎರಡು ದೇಶಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ಸಿದ್ದವಿರುವುದಾಗಿ ಹೇಳಿದ್ದ ಬಗ್ಗೆ ಟ್ರಂಪ್ ಉಲ್ಲೇಖಿಸಿದರು. 
ಟ್ರಂಪ್ ಅವರ ಈ ಪ್ರಸ್ತಾಪವನ್ನು ಪಾಕಿಸ್ತಾನ ಸ್ವೀಕರಿಸಿದರೆ ಭಾರತ ತಿರಸ್ಕರಿಸಿತ್ತು. ಕಾಶ್ಮೀರ ವಿವಾದ ಬಗೆಹರಿಸಲು ತಮ್ಮ ಮಧ್ಯಸ್ಥಿಕೆಯನ್ನು ಭಾರತ ಸ್ವೀಕರಿಸುತ್ತಿಲ್ಲವಲ್ಲಾ ಎಂದು ಸುದ್ದಿಗಾರರು ಕೇಳಿದಾಗ ಸ್ವೀಕರಿಸುವುದು, ಬಿಡುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟ ವಿಚಾರ ಎಂದರು.
ಇಮ್ರಾನ್ ಖಾನ್ ಆಗಲಿ, ನರೇಂದ್ರ ಮೋದಿಯವರಾಗಲಿ ಇಬ್ಬರೂ ಅದ್ಬುತ ವ್ಯಕ್ತಿಗಳು, ಯಾರಾದರೂ ಮಧ್ಯೆ ಪ್ರವೇಶಿಸಿ ಅವರಿಬ್ಬರನ್ನು ಒಂದು ಮಾಡಿದರೆ ಎಷ್ಟು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎಂದರು.
ಕಾಶ್ಮೀರ ವಿವಾದ ಬಗೆಹರಿಸುವ ಬಗ್ಗೆ ನಾನು ಪಾಕಿಸ್ತಾನ ಜೊತೆ ಮಾತನಾಡಿದ್ದೇನೆ, ಭಾರತದ ಜೊತೆ ಕೂಡ ಪ್ರಾಮಾಣಿಕವಾಗಿ ಮಾತನಾಡಿದ್ದೇನೆ. ಅವರು ಬಯಸಿದರೆ ಖಂಡಿತವಾಗಿಯೂ ಮಧ್ಯೆ ಪ್ರವೇಶಿಸುತ್ತೇನೆ ಎಂದು ಟ್ರಂಪ್ ಪುನರುಚ್ಛರಿಸಿದರು.
ಕಳೆದ ಜೂನ್ ನಲ್ಲಿ ಜಪಾನ್ ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ವೇಳೆ ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯೆ ಪ್ರವೇಶಿಸುವಿರಾ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೇಳಿದ್ದರು ಎಂದು ಕೆಲ ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಹೇಳಿರುವುದು ವ್ಯಾಪಕ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com