ಭಾರತದ ನಿಜ ಬಣ್ಣ ಬಯಲು, ರಾಷ್ಟ್ರಪತಿ ಮೂಲಕ ರಾಜಕೀಯ : ಪಾಕ್ ತಿರುಗೇಟು

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ಅಸಂವಿಧಾನಿಕ ಕ್ರಮದಿಂದ ನಿಜ ಬಣ್ಣಬಯಲಾಗಿದ್ದು ಇದನ್ನು ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆ, ಅವಕಾಶ ಬಳಸಿಕೊಳ್ಳುವುದಾಗಿ
Pakistan condemns scrapping of Article 370 in Kashmir
Pakistan condemns scrapping of Article 370 in Kashmir
ಇಸ್ಲಾಮಾಬಾದ್: ಜಮ್ಮು ಮತ್ತು  ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ಅಸಂವಿಧಾನಿಕ ಕ್ರಮದಿಂದ ನಿಜ ಬಣ್ಣಬಯಲಾಗಿದ್ದು  ಇದನ್ನು  ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆ, ಅವಕಾಶ ಬಳಸಿಕೊಳ್ಳುವುದಾಗಿ ಪಾಕಿಸ್ತಾನ ಸೋಮವಾರ ಪ್ರತಿಕ್ರಿಯಿಸಿದೆ. 
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಶ್ಮೀರದ ಜನರ  ವಿಶೇಷ ಹಕ್ಕುಗಳನ್ನು ದುರ್ಬಲಗೊಳಿಸಿ, ಅದನ್ನು  ಕಸಿಯಲು ಹೊರಟು ಕಣಿವೆಯಲ್ಲಿ ಭಾರಿ ಭದ್ರತಾ ಪಡೆ ನಿಯೋಜನೆ ಮಾಡಿದೆ ಎಂದು ಪಾಕ್ ದೂರಿದೆ. 
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿದ ಪಾಕ್  ವಿದೇಶಾಂಗ ಸಚಿವಾಲಯ   ಭಾರತ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿ ಪ್ರಸ್ತಾವವನ್ನು ತಿರಸ್ಕರಿಸಿದೆ.  ಕಾಶ್ಮೀರ  ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದೆ. 
"ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳಲ್ಲಿ ಪ್ರತಿಪಾದಿಸಿರುವಂತೆ ಭಾರತದ  ಯಾವುದೇ ಏಕಪಕ್ಷೀಯ ತೀರ್ಮಾನ  ವಿವಾದಿತ ಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ  ಮೇಲಾಗಿ ಈ ನಿರ್ಧಾರವು ಕಾಶ್ಮೀರ ಮತ್ತು ಪಾಕಿಸ್ತಾನದ ಜನರ ಪರವಾಗಿಲ್ಲ.  
ಭಾರತ ಕೈಗೊಂಡ ಅಕ್ರಮ ತೀರ್ಮಾನವನ್ನು ಎದುರಿಸಲು ಪಾಕ್ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಅವಕಾಶ ಬಳಕೆ ಮಾಡಿಕೊಳ್ಳಲಿದೆ ಎಂದು ಪಾಕ್ ಪತ್ರಿಕೆ  ಡಾನ್ ವರದಿ ಮಾಡಿದೆ. 
ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ, ಡಾನ್  ನ್ಯೂಸ್ ಜೊತೆ ಮಾತನಾಡಿ,   ಆಡಳಿತಾರೂಢ  ಬಿಜೆಪಿ ಸರ್ಕಾರ ತನ್ನ  ನೀತಿ ಪರಿಣಾಮಕಾರಿ ಎಂದು ಭಾವಿಸಿದ್ದರೆ ರಾಜ್ಯಪಾಲರ ಆಡಳಿತ  ಹೇರುತ್ತಿರಲಿಲ್ಲ ಅಥವಾ ರಾಷ್ಟ್ರಪತಿ ಆದೇಶದ  ಮೂಲಕ ರಾಜಕೀಯ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.  
ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವುದನ್ನು ನೋಡಿದರೆ  ಭಾರತ ಭರವಸೆ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ  ಹಿಂದೆ ಅವರನ್ನು ಬೆಂಬಲಿಸುತ್ತಿದ್ದ ಕಾಶ್ಮೀರಿ ನಾಯಕರು ಗೃಹಬಂಧನದಲ್ಲಿದ್ದಾರೆ. ಇಂದು, ಭಾರತ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಮತ್ತಷ್ಟು ಕಗ್ಗಟ್ಟು ಮಾಡಿ  ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡಿದೆ,  ಇದು ಸಮಸ್ಯೆ ಪರಿಹರಿಸದೇ ಮತ್ತಷ್ಟು ಜಠಿಲಗೊಳಿಸಲಿದ್ದು  ಅಂತಾರಾಷ್ಟ್ರೀಯ ಸಮುದಾಯ ಭಾರತದ ಈ ನಡೆಯನ್ನು ಖಂಡಿಸುವ ಅಗತ್ಯವಿದೆ ಎಂದು ಖುರೇಷಿ ಹೇಳಿದರು. 
ಟ್ವಿಟರ್‌ನಲ್ಲಿ ಇದರ ಬಗ್ಗೆ ಅನಿಸಿಕೆ  ಹಂಚಿಕೊಂಡಿರುವ  ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಾಲ್ ಭುಟ್ಟೋ, ಕಾಶ್ಮೀರದಲ್ಲಿ ದೌರ್ಜನ್ಯಗಳಿಗೆ ಅಡೆತಡೆಯಿಲ್ಲ. ಸರ್ಕಾರದ ಉದ್ದೇಶ ಸ್ಪಷ್ಟವಾಗಿವೆ. ಕಾಶ್ಮೀರದಲ್ಲಿ ಭಾರತದ ಆಕ್ರಮಣದ ಹಿನ್ನೆಲೆಯಲ್ಲಿ ಪಾಕ್ ಅಧ್ಯಕ್ಷರು ತಕ್ಷಣ ಸಂಸತ್ ಜಂಟಿ ಅಧಿವೇಶನ ಕರೆಯಬೇಕು ಇದರ ಜೊತೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ  ತುರ್ತು ಸಭೆ ಕರೆಯುವಂತೆಯೂ ಪಾಕಿಸ್ತಾನ ಒತ್ತಡ ಹಾಕಬೇಕು ಎಂದು ಆಗ್ರಹಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com