ಪೂರ್ವ ರಷ್ಯಾದ ಆಡಳಿತಗಳೊಂದಿಗೆ ವಾಣಿಜ್ಯ ಕುರಿತ ಒಪ್ಪಂದಗಳಿಗೆ ಭಾರತದ ಐದು ರಾಜ್ಯಗಳು ಸಹಿ

ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳ ಆಡಳಿತಗಳೊಂದಿಗೆ ಭಾರತದ ಐದು ರಾಜ್ಯಗಳು ವಜ್ರದಿಂದ ಹಿಡಿದು ಪ್ರವಾಸೋದ್ಯಮದವರೆಗಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಸೋಮವಾರ ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

Published: 12th August 2019 09:48 PM  |   Last Updated: 12th August 2019 09:48 PM   |  A+A-


Russian Far Eastern Regions

ಪೂರ್ವ ರಷ್ಯಾದ ಆಡಳಿತಗಳೊಂದಿಗೆ ಭಾರತ ವಾಣಿಜ್ಯ ಒಪ್ಪಂದ

Posted By : Srinivasamurthy VN
Source : UNI

ವ್ಲಾಡಿವೋಸ್ಟಾಕ್: ಪೂರ್ವ ರಷ್ಯಾದ ದೂರದ ಪ್ರಾಂತ್ಯಗಳ ಆಡಳಿತಗಳೊಂದಿಗೆ ಭಾರತದ ಐದು ರಾಜ್ಯಗಳು ವಜ್ರದಿಂದ ಹಿಡಿದು ಪ್ರವಾಸೋದ್ಯಮದವರೆಗಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಕುರಿತು ಸೋಮವಾರ ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೋವಾ, ಗುಜರಾತ್, ಹರಿಯಾಣ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳು ಹಾಗೂ 100 ಕ್ಕೂ ಹೆಚ್ಚು ಉದ್ಯಮಿಗಳನ್ನು ಒಳಗೊಂಡ ಭಾರತೀಯ ನಿಯೋಗ ಸದ್ಯ ರಷ್ಯಾದ ಪೆಸಿಫಿಕ್ ನಗರ ವ್ಲಾಡಿವೋಸ್ಟಾಕ್‌ ಗೆ ಭೇಟಿ ನೀಡಿದೆ. ಇಂದು ನಿಯೋಗದ ಸದಸ್ಯರು ಪೂರ್ವ ರಷ್ಯಾದ ಆಡಳಿತ ಮುಖ್ಯಸ್ಥರು ಮತ್ತು ಅಲ್ಲಿನ ಉದ್ಯಮಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಪೂರ್ವ ರಷ್ಯಾ ಪ್ರದೇಶದಲ್ಲಿನ ಹೂಡಿಕೆಯ ಬಗ್ಗೆ ಚರ್ಚಿಸಿದ್ದೇವೆ. ಇದು ಹೆಚ್ಚಿನ ಆರ್ಥಿಕ ಅವಕಾಶಗಳು ಮತ್ತು ಉಭಯ ದೇಶಗಳ ನಡುವಿನ ವಾಣಿಜ್ಯ ಸಹಕಾರಕ್ಕೆ ನೆರವಾಗಲಿದೆ ಎಂದು ಗೋಯಲ್ ಹೇಳಿದರು.

ಕಲ್ಲಿದ್ದಲು ಉತ್ಪಾದನೆ ಮತ್ತು ಪ್ರವಾಸೋದ್ಯಮದಲ್ಲಿ ಸಹಕಾರ ಕುರಿತು ಗೋವಾ ಸರ್ಕಾರ ಕಮ್ಚಟ್ಕಾ ಪ್ರಾಂತ್ಯದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಉತ್ತರ ಪ್ರದೇಶ ಸರ್ಕಾರ ಮತ್ತು ಜಬೈಕಲ್ಸಿಕಿ ಪ್ರಾಂತ್ಯದ ಆಡಳಿತ ಕೃಷಿ ಮತ್ತು ಆಹಾರ ಉತ್ಪಾದನೆಯಲ್ಲಿ ಸಹಕಾರ ಕುರಿತು ಒಪ್ಪಂದಕ್ಕೆ ಸಹಿ ಹಾಕಿದರೆ, ತೈಲ ಮತ್ತು ಅನಿಲ ಉದ್ಯಮದಲ್ಲಿ ಸಹಕಾರದ ಕುರಿತು ಹರಿಯಾಣ ಸರ್ಕಾರ ಸಖಾಲಿನ್ ರಾಜ್ಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಯಂತ್ರ ನಿರ್ಮಾಣ ಮತ್ತು ಪ್ರವಾಸೋದ್ಯಮದಲ್ಲಿ ಸಹಕಾರ ಕುರಿತು ಮಹಾರಾಷ್ಟ್ರ ಮತ್ತು ಬುರ್ಯಾಟಿಯಾ ಆಡಳಿತ ಒಪ್ಪಂದಕ್ಕೆ ಸಹಿ ಹಾಕಿದರೆ, ಗುಜರಾತ್ ಮತ್ತು ಯಾಕುಟಿಯಾ ರಾಜ್ಯ ಸರ್ಕಾರ ವಜ್ರ ಉತ್ಪಾದನೆಯಲ್ಲಿ ಸಹಕಾರಕ್ಕೆ ಒಪ್ಪಿಗೆ ಸೂಚಿಸಿವೆ.

ರಷ್ಯಾದ ಮತ್ತು ಭಾರತೀಯ ನಿಯೋಗಗಳ ನಡುವೆ ಸಭೆ ಆಯೋಜಿಸಿದ್ದ ಪೂರ್ವ ರಷ್ಯಾದ ಈಸ್ಟರ್ನ್ ಫೆಡರಲ್ ವಿಶ್ವವಿದ್ಯಾಲಯ, ಪರಸ್ಪರ ಪ್ರತಿನಿಧಿ ಕಚೇರಿಗಳನ್ನು ತೆರೆಯುವುದು ಮತ್ತು ಶಿಕ್ಷಣದಲ್ಲಿ ಸಹಕಾರ ಕುರಿತು ಅಮಿಟಿ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಪೂರ್ವ ರಷ್ಯಾದ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಭಾರತೀಯ ನಿಯೋಗದ ಭೇಟಿ ಪೂರ್ವ ಆರ್ಥಿಕ ಒಕ್ಕೂಟದ ಸಮಾವೇಶಕ್ಕೆ ಒಂದು ತಿಂಗಳ ಮೊದಲೇ ನಡೆದಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೋದಿಯವರ ಭೇಟಿಯ ವೇಳೆ ಹತ್ತಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಪ್ರಧಾನ ಮಂತ್ರಿ ಒಕ್ಕೂಟದ ಸಮಾವೇಶದಲ್ಲಿ ಭಾಗಿಯಾಗಲು ರಷ್ಯಾ ಭೇಟಿ ವೇಳೆ, ಹತ್ತಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಹೊಂದಿದ್ದೇವೆ, ಅವುಗಳಲ್ಲಿ ಕೆಲವೊಂದರ ಬಗ್ಗೆ ಇಂದು ಚರ್ಚಿಸುತ್ತಿದ್ದೇವೆ. ಮುಂದಿನ 20 ದಿನಗಳಲ್ಲಿ ಇವುಗಳನ್ನು ಅಖೈರುಗೊಳಿಸುತ್ತೇವೆ.' ಎಂದು ಗೋಯಲ್‌ ಹೇಳಿದ್ದಾರೆ. ನಿಯೋಗದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪರವಾಗಿ ಅವರ ಪ್ರತಿನಿಧಿ ಒಪ್ಪಂದಗಳಿಗೆ ಸಹಿ ಹಾಕಿದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp