ವಿಶ್ವಸಂಸ್ಥೆಯಲ್ಲೂ ಪಾಕ್ ಗೆ ಮುಖಭಂಗ; ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದ ಭದ್ರತಾ ಮಂಡಳಿ

ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಬಾಗಿಲು ಬಡಿದಿದ್ದ ಪಾಕಿಸ್ತಾನಕ್ಕೆ ಅಲ್ಲೂ ತೀವ್ರ ಮುಖಭಂಗವಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು ಸಲಹೆ ನೀಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಬಾಗಿಲು ಬಡಿದಿದ್ದ ಪಾಕಿಸ್ತಾನಕ್ಕೆ ಅಲ್ಲೂ ತೀವ್ರ ಮುಖಭಂಗವಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು ಸಲಹೆ ನೀಡಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಸಂವಿಧಾನದ ವಿಧಿಯನ್ನು ಕೈಬಿಡುವ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಗೌಪ್ಯ ಸಭೆ ನಡೆಸಿತು. ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಸದಸ್ಯರಿಗೆ ಮಾತ್ರ ಮುಕ್ತವಾಗಿರುವ ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸಿರಲಿಲ್ಲ. 

ಇನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸದಸ್ಯ ರಾಷ್ಟ್ರಗಳ ನಿಲುವು ಭಾರತದ ಪರವಾಗಿದ್ದರೆ, ಅಂತೆಯೇ ಚೀನಾವನ್ನು ಹೊರತು ಪಡಿಸಿ ಮತ್ತೆ ಕೆಲ ಸದಸ್ಯ ರಾಷ್ಟ್ರಗಳು ತಟಸ್ಥವಾಗಿದ್ದವು.

ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ
ಭಾರತ ಉಪಖಂಡದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ. ಮಾತುಕತೆ ಮೂಲಕ ವಿವಾದವನ್ನು ಪರಿಹರಿಸಿಕೊಳ್ಳಿ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಸಲಹೆ ನೀಡಿದವು. ಜತೆಗೆ ಈ ವಿಷಯವಾಗಿ ವಿಶ್ವಸಂಸ್ಥೆ ಹಿಂದೆ ಕೈಗೊಂಡಿದ್ದ ನಿರ್ಣಯಗಳನ್ನು ಪ್ರಸ್ತಾಪಿಸಿದವು ಎನ್ನಲಾಗಿದೆ. ಅಲ್ಲದೆ, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ನಿರ್ಧರಿಸಿದವು ಎಂದು ಹೇಳಲಾಗಿದೆ.

ಇನ್ನು ಆಗಸ್ಟ್ ​ನಲ್ಲಿ ವಿಶ್ವಸಂಸ್ಥೆಯ ಅಧ್ಯಕ್ಷತೆ ಹೊಂದಿರುವ ಪೋಲೆಂಡ್​ ಈ ವಿಷಯವಾಗಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆ ಮೂಲಕ ಪರೋಕ್ಷವಾಗಿ ಪೋಲೆಂಡ್ ಭಾರತದ ಪರವಾಗಿ ನಿಂತಿತು. ಇನ್ನು ಈ ಸಭೆಗೆ ತೆರಳುವ ಮೊದಲು ಸುದ್ದಿಗಾರರ ಜತೆ ಮಾತನಾಡಿದ್ದ ರಷ್ಯಾದ ಉಪ ಶಾಶ್ವತ ಪ್ರತಿನಿಧಿ ಡಿಮಿಟ್ರಿ ಪೋಲ್ಯಾನ್​ಸ್ಕಿ, ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆ. ಇದನ್ನು ಆ ಎರಡು ರಾಷ್ಟ್ರಗಳೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು. 

ಮಾನವಹಕ್ಕು ದಮನವಾಗುತ್ತಿದೆ: ಚೀನಾ ಕಳವಳ
ಶುಕ್ರವಾರ ಬೆಳಗ್ಗೆ ಸಭೆ ಆರಂಭವಾಗುತ್ತಲೇ ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳ ದಮನವಾಗುತ್ತಿದೆ ಎಂದು ಚೀನಾ ಕಳವಳ ವ್ಯಕ್ತಪಡಿಸಿತು. ಅಲ್ಲದೆ, ಈ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ತುಂಬಾ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿತು ಎನ್ನಲಾಗಿದೆ.

ಇನ್ನು ಸಭೆ ಬಳಿಕ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಸೈಯ್ಯದ್ ಅಕ್ಬರುದ್ದೀನ್ ಅವರು, 'ಭಯೋತ್ಪಾದನೆ ಕುಮ್ಮಕ್ಕು ಕೊಡುವುದನ್ನು ಬಿಟ್ಟು ಬಂದರೆ ಪಾಕಿಸ್ತಾನದೊಂದಿಗೆ ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com