ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಅಚ್ಚರಿ ನಡೆಗೆ ಇದೇನಾ ಕಾರಣ?

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಯಾಗಿದ್ದಾರೆ ಎಂಬ ವಿಚಾರವೇ ಎಲ್ಲ ಭಾರತೀಯರ ಖುಷಿಗೆ ಕಾರಣವಾಗಿತ್ತು. ಆದರೆ ಕಮಲಾ ಹ್ಯಾರಿಸ್ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಅದರೆ ಇಷ್ಟಕ್ಕೂ ಕಮಲಾ ಹ್ಯಾರಿಸ್ ಅವರ ಈ ಅಚ್ಚರಿ ನಡೆಗೆ ಕಾರಣವೇನು?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಯಾಗಿದ್ದಾರೆ ಎಂಬ ವಿಚಾರವೇ ಎಲ್ಲ ಭಾರತೀಯರ ಖುಷಿಗೆ ಕಾರಣವಾಗಿತ್ತು. ಆದರೆ ಕಮಲಾ ಹ್ಯಾರಿಸ್ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಅದರೆ ಇಷ್ಟಕ್ಕೂ ಕಮಲಾ ಹ್ಯಾರಿಸ್ ಅವರ ಈ ಅಚ್ಚರಿ ನಡೆಗೆ ಕಾರಣವೇನು?

ಡೆಮಾಕ್ರಟಿಕ್ ಪಕ್ಷ ಕಳೆದ ಜನವರಿಯಲ್ಲೇ ಪಕ್ಷದೊಳಗೆ ಅಧ್ಯಕ್ಷೀಯ ಸ್ಪರ್ಧೆಯನ್ನು ಘೋಷಿಸಿತ್ತು. ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಹಾಗೂ ಕಮಲಾ ಹ್ಯಾರೀಸ್ ನಡುವೆ ಅಧ್ಯಕ್ಷೀಯ ಪದವಿಗೆ ತೀವ್ರ ಪೈಪೋಟಿ ಇತ್ತು. ಆದರೆ, 20 ಸಾವಿರ ಬೆಂಬಲಿಗರೊಂದಿಗೆ ಕಮಲಾ ಹ್ಯಾರೀಸ್ ಪಕ್ಷದೊಳಗೆ ತಮ್ಮ ಪ್ರಭಾವವನ್ನು ಬೀರುವ ಮೂಲಕ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ ಎನಿಸಿಕೊಂಡಿದ್ದರು.

ಆದರೆ, ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಅಮೆರಿಕದ ಮತದಾರರು ಕಮಲಾ ಹ್ಯಾರೀಸ್ ಅವರಿಗೆ ಕೇವಲ ಶೇ. 3ರಷ್ಟು ಮಾತ್ರ ಮತ ನೀಡಿದ್ದರು. ಅಲ್ಲದೆ, ಚುನಾವಣಾ ಅಭಿಯಾನ ನಡೆಸುವುದಕ್ಕೂ ಸಹ ಕಮಲಾ ಹ್ಯಾರೀಸ್ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಇದೇ ವಿಚಾರವಾಗಿ ಬಹಿರಂಗವಾಗಿಯೂ ಮಾತನಾಡಿರುವ ಕಮಲಾ ಹ್ಯಾರೀಸ್, 'ನಾನು ಕೋಟ್ಯಾಧಿಪತಿಯಲ್ಲ. ಹೀಗಾಗಿ ನನ್ನ ಸ್ವಂತ ಅಭಿಯಾನಕ್ಕೆ ಧನ ಸಹಾಯ ನೀಡಲು ಸಾಧ್ಯವಾಗುತ್ತಿಲ್ಲ. ನಾವು ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಸಂಗ್ರಹಿಸುವುದು ಸಹ ಕಷ್ಟಕರವಾಗಿದೆ. ಆದ್ದರಿಂದ ನನ್ನ ಅಭಿಯಾನವನ್ನು ಇಲ್ಲಿಗೆ ಸ್ಥಗಿತಗೊಳಿಸುವುದಕ್ಕೆ ನಾನು ನನ್ನ ಬೆಂಬಲಿಗರ ಬಳಿ ತೀವ್ರವಾಗಿ ವಿಷಾಧಿಸುತ್ತೇನೆ. ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ' ಎಂದು ಹೇಳಿದ್ದಾರೆ.

ಇದಲ್ಲದೆ ಕಮಲಾ ಹ್ಯಾರಿಸ್ ಆಯ್ಕೆಗೆ ಡೆಮಾಕ್ರಟಿಕ್ ಪಕ್ಷದಲ್ಲಿಯೇ ಆಂತರಿಕ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ. ಬರಾಕ್ ಒಬಾಮಾ ರೀತಿಯ ಅಭ್ಯರ್ಥಿಗಾಗಿ ಹುಡುಕಾಡುತ್ತಿದ್ದ ಡೆಮಾಕ್ರಟಿಕ್ ಪಕ್ಷದ ನಾಯಕರಿಗೆ ವ್ಯಕ್ತಿಯ ವರ್ಚಸ್ಸಿಗಿಂತ ಸಿದ್ಧಾಂತಗಳು ಮುಖ್ಯವಾಗಿತ್ತು ಎನ್ನಲಾಗಿದೆ. ಆದರೆ ಡೆಮಾಕ್ರಟಿಕ್ ಕಾರ್ಯಕರ್ತರಿಗೆ ಮಾತ್ರ ಸಿದ್ಧಾಂತಗಳಿಗಿಂತ ವ್ಯಕ್ತಿಯ ವರ್ಚಸ್ಸು ಮುಖ್ಯ ಎಂಬುದು ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿತ್ತು. ಇದಲ್ಲದೆ ಕಮಲಾ ಹ್ಯಾರಿಸ್ ಅವರಿಗಿಂತಲೂ ಬಿಡೆನ್, ಸ್ಯಾಂಡರ್ಸ್ ಮತ್ತು ವಾರೆನ್ ಅವರು ಪ್ರಬಲ ಸ್ಪರ್ಧಿಗಳಾಗಿದ್ದಾರೆ. 

ಇದಲ್ಲದೆ ಕಮಲಾ ಹ್ಯಾರಿಸ್ ಭಾರತ ಮತ್ತು ಜಮೈಕಾ ಮೂಲದ ಕಪ್ಪು ವರ್ಣೀಯ ಮಹಿಳೆಯಾಗಿದ್ದು, ಇದೂ ಕೂಡ ಅವರ ಸ್ಪರ್ಧೆಗೆ ಹಿನ್ನಡೆಯಾಗುವಂತೆ ಮಾಡಿತ್ತು ಎನ್ನಲಾಗಿದೆ. ಇದಲ್ಲದೆ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷರಾಗಿದ್ದು, ಅವರ ಮುಂದೆ ಓರ್ವ ಮಹಿಳೆಯನ್ನು ಸ್ಪರ್ಧಿಯಾಗಿ ನಿಲ್ಲಿಸುವುದು ಅಪಾಯ. ಪಕ್ಷಕ್ಕೆ ಸೋಲುಂಟಾಗಬಹುದು ಎಂಬ ಕಾರ್ಯಕರ್ತರ ಆತಂಕ ಕೂಡ ಹ್ಯಾರಿಸ್ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com