ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರಾದ ಭಾರತೀಯ ವಾಯುಸೇನೆ ಮುಖ್ಯಸ್ಥ

ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥಆರ್.ಕೆ.ಎಸ್. ಭದೌರಿಯ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಾಸ್ ಏಂಜಲೀಸ್: ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥಆರ್.ಕೆ.ಎಸ್. ಭದೌರಿಯ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.

ವಿಶ್ವದ ಬಲಿಷ್ಠ ನೌಕಾನೆಲೆ ಎಂದೇ ಎನಿಸಿಕೊಂಡಿರುವ ಅಮೆರಿಕದ ಹಾವಾಯಿ ದ್ವೀಪದ ಪರ್ಲ್ ಹಾರ್ಬರ್ ಈ ಶೂಟೌಟ್ ನಡೆದಿದ್ದು, ಇಲ್ಲಿನ ನಾವಿಕನೊಬ್ಬ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸುಮಾರು ಮೂವರು ಸಿಬ್ಬಂದಿಗಳಿಗೆ ಗಾಯವಾಗಿದ್ದು, ಗುಂಡಿನ ದಾಳಿ ಬಳಿಕ ಆತ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಮೂಲಗಳ ಪ್ರಕಾರ ಘಟನೆ ಸಂಭವಿಸಿದಾಗ ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯ ಮತ್ತು ಅವರ ತಂಡ ನೌಕಾನೆಲೆಯ ಸೇನಾ ಬೇಸ್​ ನಲ್ಲೇ ಇದ್ದರು ಎಂದು ತಿಳಿದುಬಂದಿದೆ. ಆದರೆ, ಅವರು ವಾಯುಪಡೆಯ ನೆಲೆಯಲ್ಲಿದ್ದರೆ, ಶೂಟೌಟ್ ನೌಕಾ ನೆಲೆಯಲ್ಲಿ ನಡೆದಿದೆ. ಹೀಗಾಗಿ ಭಾರತದ ಏರ್​ ಚೀಫ್ ಮಾರ್ಷಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಸೇನಾಮೂಲಗಳು ತಿಳಿಸಿರುವಂತೆ ಭದೌರಿಯಾ ಮತ್ತು ಅವರ ತಂಡ ಪೆಸಿಫಿಕ್ ವಾಯುಪಡೆ ಮುಖ್ಯಸ್ಥರ ಸಮಾವೇಶದಲ್ಲಿ (ಪಿಎಸಿಎಸ್-2019) ಪಾಲ್ಗೊಳ್ಳುವ ಸಲುವಾಗಿ ವಿಶ್ವದ ಬಲಿಷ್ಠ ನೌಕಾನೆಲೆ ಎನಿಸಿಕೊಂಡಿರುವ ಅಮೆರಿಕದ ಪರ್ಲ್ ಹಾರ್ಬರ್​ಗೆ ತೆರಳಿದ್ದರು. ಇದಲ್ಲದೆ ವಿವಿಧ ದೇಶದ 21 ಜನ ವಾಯುಸೇನೆ ಮುಖ್ಯಸ್ಥರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಂತಹ ಸಂದರ್ಭದಲ್ಲಿ ನೌಕಾನೆಲೆಯಲ್ಲೇ ಶೂಟ್ಔಟ್ ನಡೆದಿರುವುದು ಅಮೆರಿಕ ಸೇನೆಗೆ ತೀವ್ರ ಮುಜುಗರವಾಗುವಂತೆ ಮಾಡಿದೆ.

ಇನ್ನು ಘಟನೆ ಕುರಿತು ಟ್ವೀಟರ್​ ನಲ್ಲಿ ಮಾಹಿತಿ ನೀಡಿರುವ ಅಮೆರಿಕ ನೌಕಾದಳ, 'ಮಧ್ಯಾಹ್ನ 2.30ರ ಸುಮಾರಿಗೆ ಶೂಟ್ಔಟ್ ನಡೆದಿದ್ದು, ಪರಿಣಾಮ ಒಂದು ಗಂಟೆಯ ಕಾಲ ಸೇನಾ ಬೇಸ್ ಅನ್ನು ಮುಚ್ಚಲಾಗಿತ್ತು. ಶೂಟರ್ ಅನ್ನು ಅಮೆರಿಕ ಮೂಲದ ನಾವಿಕ ಎಂದು ಗುರುತಿಸಲಾಗಿದೆ. ನಾವಿಕ ತನಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಜನ ನೌಕಾದಳದ ರಕ್ಷಣಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾನೆ'ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com