ನನ್ ಗಳ ಮೇಲೆ ಪಾದ್ರಿಗಳಿಂದ ಲೈಂಗಿಕ ಕಿರುಕುಳ; ಬಹಿರಂಗವಾಗಿ ಒಪ್ಪಿಕೊಂಡ ಪೋಪ್ ಫ್ರಾನ್ಸಿಸ್

ಪಾದ್ರಿಗಳು ಮತ್ತು ಬಿಷಪ್ ಗಳು ನನ್ಸ್ (ಕ್ರೈಸ್ತ ಸನ್ಯಾಸಿನಿ)ಗಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ...
ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್

ಎಬೊರ್ಡ್ ದ ಪಪಲ್ ಪ್ಲೇನ್: ಪಾದ್ರಿಗಳು ಮತ್ತು ಬಿಷಪ್ ಗಳು ನನ್ಸ್ (ಕ್ರೈಸ್ತ ಸನ್ಯಾಸಿನಿ)ಗಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ ಆರೋಪವನ್ನು ಪೋಪ್ ಫ್ರಾನ್ಸಿಸ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಕ್ರೈಸ್ತ ಧರ್ಮದಲ್ಲಿ ಚರ್ಚ್ ಗಳಲ್ಲಿ ಪಾದ್ರಿಗಳು, ಬಿಷಪ್ ಗಳು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಈ ಮಾತನ್ನು ಇದೀಗ ಸ್ವತಃ ಪೋಪ್ ಫ್ರಾನ್ಸಿಸ್ ಅವರೇ ಒಪ್ಪಿಕೊಂಡಿದ್ದು ಈ ಸಮಸ್ಯೆ ವಿರುದ್ಧ ಹೋರಾಟ ನಡೆಸಲು ತಾವು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಲವು ಪಾದ್ರಿಗಳು ಸಿಸ್ಟರ್ ಗಳನ್ನು ಲೈಂಗಿಕ ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಫ್ರಾನ್ಸ್ ಮೂಲದ ಆದೇಶ ಬಂದ ಹಿನ್ನಲೆಯಲ್ಲಿ ಪೋಪ್ ಬೆನೆಡಿಕ್ಟ್ 16 ಕ್ರಮ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಾವು ಈಗಾಗಲೇ ಮುಂದಾಗಿದ್ದೇವೆ ಸರಿಯಾದ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದ್ದೇವೆ ಎಂದರು.

ಪ್ರತಿಯೊಬ್ಬ ಪಾದ್ರಿ ಅಥವಾ ಬಿಷಪ್ ಇಂತಹ ಕೆಟ್ಟ ಕೆಲಸ ಮಾಡುತ್ತಾರೆ ಎಂದೇನಿಲ್ಲ. ಕೆಲವರು ತಪ್ಪು ಕೆಲಸದಲ್ಲಿ ತೊಡಗಿದ್ದಾರೆ. ಇದನ್ನು ಹೀಗೆಯೇ ಬಿಟ್ಟರೆ ಅದು ಮುಂದುವರಿದುಕೊಂಡು ಹೋಗುತ್ತದೆ. ಅದನ್ನು ನಿಲ್ಲಿಸಬೇಕಾದ ಅವಶ್ಯಕತೆಯಿದೆ ಎಂದರು.
ಹಿಂದಿನ ವರ್ಷಗಳಲ್ಲಿ ಮಾಧ್ಯಮಗಳಲ್ಲಿ ಭಾರತ, ಆಫ್ರಿಕಾ, ಯುರೋಪ್ ಮತ್ತು ದಕ್ಷಿಣ ಅಮೆರಿಕಾ ಮೊದಲಾದ ದೇಶಗಳಲ್ಲಿ ಕ್ರೈಸ್ತ ಸನ್ಯಾಸಿನಿಗಳ ಮೇಲೆ ಬಿಷಪ್ ಮತ್ತು ಪಾದ್ರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದ್ದವು.
 
ಸಿಸ್ಟರ್ ಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕೆಲವು ಪಾದ್ರಿಗಳನ್ನು ಅಮಾನತು ಮಾಡಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ಇಂದು ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿಯೇ ಬೆಳೆದಿದೆ. ಮಹಿಳೆಯರನ್ನು ಇಂದಿಗೂ ಎರಡನೇ ದರ್ಜೆಯ ಪ್ರಜೆಗಳನ್ನಾಗಿಯೇ ಪರಿಗಣಿಸಲಾಗುತ್ತದೆ. ಇದೊಂದು ಸಾಂಸ್ಕೃತಿಕ ಸಮಸ್ಯೆಯಾಗಿದೆ. ಮಾನವೀಯತೆಯಲ್ಲಿ ಪಕ್ವತೆಯಿಲ್ಲವಾಗಿದೆ. ಹೆಣ್ಣು ಭ್ರೂಣಹತ್ಯೆ ಕೂಡ ಇದರ ಒಂದು ಭಾಗವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com