ಪುಲ್ವಾಮಾ ದಾಳಿ :ಭಾರತದಲ್ಲಿನ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡ ಪಾಕ್

ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಭಾರತ-ಪಾಕಿಸ್ತಾನಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಸ್ಲಾಮಾಬಾದ್ ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು
ಸೊಹೈಲ್ ಮಹಮೂದ್
ಸೊಹೈಲ್ ಮಹಮೂದ್
ಇಸ್ಲಾಮಾಬಾದ್: ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಭಾರತ-ಪಾಕಿಸ್ತಾನಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಸ್ಲಾಮಾಬಾದ್ ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು ಇದರ ಬೆನ್ನಲ್ಲೇ ಪಾಕ್, ದೆಹಲಿಯಲ್ಲಿರುವ ತನ್ನ ಹೈಕಮಿಷನರ್ ಅನ್ನು ಪಾಕಿಸ್ತಾನಕ್ಕೆ ಹಿಂತಿರುಗಿ ಬರಲು ಆದೇಶಿಸಿದೆ.
ದೆಹಲಿಯಲ್ಲಿದ್ದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ಸೋಮವಾರ ಬೆಳಿಗ್ಗೆ ನವದೆಹಲಿಯಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ ಎಂದು ಪಾಕ್ ವಿದೇಶಾಂಗ ಕಛೇರಿಯ  ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದರು.
"ನಾವು ಭಾರತದಲ್ಲಿರುವ ನಮ್ಮ ಹೈಕಮಿಷನರ್ ಅವರನ್ನು  ಸಮಾಲೋಚನೆಗಳಿಗಾಗಿ ಹಿಂದಕ್ಕೆ ಕರೆಸಿಕೊಂಡಿದ್ದೇವೆ, ಅವರು ಈ ಬೆಳಿಗ್ಗೆ ನವದೆಹಲಿಯಿಂದ ಹೊರಟಿದ್ದಾರೆ." ಪಾಕ್ ವಿದೇಶಾಂಗ ಕಛೇರಿ ವಕ್ತಾರರು ಟ್ವೀಟ್ ಮೂಲಕ ಹೇಳಿದ್ದಾರೆ.
ಅವರು ಪಾಕಿಸ್ತಾನದಲ್ಲಿ ಎಷ್ಟು ದಿನಗಳವರೆಗೆ ಉಳಿಯಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸೊಹೈಲ್ ಅವರನ್ನು ಶುಕ್ರವಾರ ಅವರ ನವದೆಹಲಿಯ ಕಛೇರಿಯಲ್ಲಿ ಭೇಟಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ  ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಪಾಕಿಸ್ತಾನದ ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಅವರನ್ನು ದಾಳಿಯ ಹಿನ್ನೆಲೆಯಲ್ಲಿ ಇದಾಗಲೇ ಸಮಾಲೋಚನೆಗಳಿಗಾಗಿ ನವದೆಹಲಿಗೆ ಆಹ್ವಾನಿಸಲಾಗಿದೆ.
ಗುರುವಾರ ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಕಾರಣವಾಗಿದೆ.  ದಾಳಿಯ ನಂತರ ಇಸ್ಲಾಮಾಬಾದ್ ವಿರುದ್ಧದ ರಾಜತಾಂತ್ರಿಕ ಆಕ್ರಮಣದಲ್ಲಿ,ಭಯೋತ್ಪಾದನೆಗೆ ಬೆಂಬಲ ಪಾಕಿಸ್ತಾನದ ಮೂಲ ನೀತಿ ಎನ್ನುವುದನ್ನು ಭಾರತ ಎತ್ತಿ ತೋರಿಸಿದೆ. ಅಲ್ಲದೆ ಪಾಕಿಸ್ತಾನ ತನ್ನ ನಿಯಂತ್ರಣದಲ್ಲಿನ ಭೂಮಿಯಲ್ಲಿ ಇಂತಹಾ ಭಯೋತ್ಪಾದನಾ ಚಟುವಟಿಕೆಯನ್ನು ಬೆಂಬಲಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ/
ಪಾಕಿಸ್ತಾನಕ್ಕೆ ಹೆಚ್ಚು ಅನುಕೂಲಕರ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವಿಕೆ, ಪಾಕಿಸ್ತಾನದಿಂದ ಆಮದಾಗುವ ಸರಕುಗಳ ಮೇಲೆ 200 ರಷ್ಟು ಕಸ್ಟಮ್ಸ್ ತೆರಿಗೆ ಹೆಚ್ಚಳ ಸೇರಿ ಅನೇಕ ಕಠಿಣ ಕ್ರಮಗಳನ್ನು ಭಾರತ ಇದಾಗಲೇ ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com