ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಬೆಂಬಲಿಸಬೇಡಿ; ಚೀನಾಕ್ಕೆ ಸುಷ್ಮಾ ಸ್ವರಾಜ್ ಒತ್ತಾಯ

ಪುಲ್ವಾಮಾ ಭಯೋತ್ಪಾದಕ ದಾಳಿಯಂತಹ ಉಗ್ರ ದಾಳಿಗಳು ಭಯೋತ್ಪಾದನೆ ವಿರುದ್ಧ ವಿಶ್ವದ ಎಲ್ಲಾ ದೇಶಗಳು ಸಂಪೂರ್ಣವಾಗಿ ಅಸಹಿಷ್ಣುತೆಯನ್ನು ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ವುಜ್ಹೆನ್ (ಚೀನಾ): ಪುಲ್ವಾಮಾ ಭಯೋತ್ಪಾದಕ ದಾಳಿಯಂತಹ ಉಗ್ರ ದಾಳಿಗಳು ಭಯೋತ್ಪಾದನೆ ವಿರುದ್ಧ ವಿಶ್ವದ ಎಲ್ಲಾ ದೇಶಗಳು ಸಂಪೂರ್ಣವಾಗಿ ಅಸಹಿಷ್ಣುತೆಯನ್ನು ತೋರಿಸುವ ಕಾಲ ಬಂದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ನಿನ್ನೆ ಭಾರತೀಯ ವಾಯುಸೇನೆ ಪಾಕಿಸ್ತಾನದ ಒಳನುಗ್ಗಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಇಂದು ಚೀನಾಕ್ಕೆ ಭೇಟಿ ನೀಡಿರುವ ಸುಷ್ಮಾ ಸ್ವರಾಜ್ ಅವರು ಈ ಮಾತುಗಳನ್ನು ಹೇಳಿರುವುದು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ.
ರಷ್ಯಾ -ಭಾರತ-ಚೀನಾ(ಆರ್ ಐಸಿ)ಗಳ ವಿದೇಶಾಂಗ ಸಚಿವರುಗಳ 16ನೇ ಸಭೆಯಲ್ಲಿ ಭಾಗವಹಿಸಲು ಅವರು ಚೀನಾಕ್ಕೆ ತೆರಳಿದ್ದಾರೆ. ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ರಷ್ಯಾ ವಿದೇಶಾಂಗ ಸಚಿವ ಸರ್ಜಿ ಲವ್ರೊವ್ ಭಾಗವಹಿಸಿದ್ದಾರೆ. ಚೀನಾ ನೆಲದಲ್ಲಿ ಉಗ್ರರ ದಾಳಿ ಮತ್ತು ಅದಕ್ಕೆ ಪಾಕಿಸ್ತಾನ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ನೇರವಾಗಿ ಹೇಳಿದ ಅವರು, ಉಗ್ರಗಾಮಿಗಳಿಗೆ ಆಶ್ರಯ ನೀಡಿ ಅವರನ್ನು ಬೆಳೆಸುತ್ತಿರುವ ಪಾಕ್ ನ್ನು ಬೆಂಬಲಿಸಬೇಡಿ ಎಂದು ಚೀನಾಕ್ಕೆ ನೇರವಾಗಿಯೇ ಹೇಳಿದ್ದಾರೆ.
ವಿಶ್ವಸಂಸ್ಥೆ ಮತ್ತು ಬೇರೆ ದೇಶಗಳು ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಿದೆ. ಪುಲ್ವಾಮಾ ದಾಳಿ ನಂತರ ಇಡೀ ವಿಶ್ವವೇ ಒಕ್ಕೊರಲಿನಿಂದ ಭಯೋತ್ಪಾದನೆ ವಿರುದ್ಧ ಮಾತನಾಡುತ್ತಿದೆ. ಭಾರತದ ಸೇನೆ ಮೇಲಿನ ದಾಳಿ ಪಾಕಿಸ್ತಾನದ ಕುಮ್ಮಕ್ಕಿನಿಂದ ಆಗಿದೆ. ಪಾಕಿಸ್ತಾನ ಜೆಇಎಂ ಸಂಘಟನೆಯನ್ನು ಪೋಷಿಸಿ ಬೆಳೆಸುತ್ತಿದೆ, ಅಂತವರಿಗೆ ಬೆಂಬಲ ನೀಡಬೇಡಿ ಎಂದು ಚೀನಾ ವಿದೇಶಾಂಗ ಸಚಿವರಿಗೆ ಸುಷ್ಮಾ ಸ್ವರಾಜ್ ಹೇಳಿದರು.
ಭಾರತ ಇಂತಹ ಘಟನೆ ಮರುಕಳಿಸುವುದನ್ನು ಬಯಸುವುದಿಲ್ಲ. ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯಾಗಿ ಮುಂದುವರಿಯಲು ಬಯಸುತ್ತದೆ. ಪುಲ್ವಾಮಾ ದಾಳಿಯ ನಂತರ ಭಾರತೀಯರಲ್ಲಿ ಸಿಟ್ಟು, ಆಕ್ರೋಶ ಕುದಿಯುತ್ತಿದ್ದು ಈ ಸಂದರ್ಭದಲ್ಲಿ ಚೀನಾಕ್ಕೆ ಭೇಟಿ ನೀಡಿದ್ದೇನೆ. ಪುಲ್ವಾಮಾ ದಾಳಿ  ಭಾರತೀಯ ಸೇನೆ ಮೇಲೆ ನಡೆದ ಅತ್ಯಂತ ಘೋರ ದಾಳಿ ಎಂದು ಹೇಳಿದರು.
ತನ್ನ ಪ್ರಾಂತ್ಯದಲ್ಲಿ ಉಗ್ರರ ಗುಂಪು ಆಶ್ರಯ ಹೊಂದಿರುವುದನ್ನು ಒಪ್ಪಿಕೊಂಡು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ನಿರಾಕರಿಸುತ್ತಿದ್ದು ಮತ್ತು ಭಾರತದ ಹಲವು ಭಾಗಗಳಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆ ಇನ್ನೂ ಹಲವು ದಾಳಿಗಳನ್ನು ನಡೆಸಲು ಸಂಚು ನಡೆಸುತ್ತಿದೆ ಎಂಬ ನಿಖರ ಮಾಹಿತಿ ಸಿಕ್ಕಿದ ಹಿನ್ನಲೆಯಲ್ಲಿ ಭಾರತ ಸರ್ಕಾರ ಪೂರ್ವಸೂಚನೆ ಕ್ರಮವಾಗಿ ನಿನ್ನೆ ದಾಳಿ ನಡೆಸಿದೆ ಎಂದರು.
ಪುಲ್ವಾಮಾ ದಾಳಿ ನಂತರ ಅದನ್ನು ಅಂತಾರಾಷ್ಟ್ರೀಯ ಸಮುದಾಯಗಳು ಖಂಡಿಸಿ ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಜೆಇಎಂ ಸೇರಿದಂತೆ ಇತರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದರೂ ಪಾಕಿಸ್ತಾನ ಪುಲ್ವಾಮಾ ದಾಳಿ ಬಗ್ಗೆ ತನಗೆ ಅರಿವಿಲ್ಲವೆಂದು ಮತ್ತು ಭಯೋತ್ಪಾದನೆಗೆ ತಾನು ಆಶ್ರಯ ನೀಡುತ್ತಿಲ್ಲ ಎಂದು ಹೇಳಿಕೊಂಡು ಬರುತ್ತಿದೆ ಎಂದು ಸುಷ್ಮಾ ಸ್ವರಾಜ್ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com