ಪಾಕಿಸ್ತಾನಕ್ಕಾಗಿ ಚೀನಾದಿಂದ ಅತ್ಯಂತ ಶಕ್ತಿಶಾಲಿ, ಅತ್ಯಾಧುನಿಕ ಯುದ್ಧ ನೌಕೆ ನಿರ್ಮಾಣ: ವರದಿ

ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕಾಗಿ ಚೀನಾ ದೇಶ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿ ಯುದ್ಧನೌಕೆ ನಿರ್ಮಾಣ ಮಾಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕಾಗಿ ಚೀನಾ ದೇಶ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿ ಯುದ್ಧನೌಕೆ ನಿರ್ಮಾಣ ಮಾಡಲು ಮುಂದಾಗಿದೆ.
ಈ ಬಗ್ಗೆ ಚೀನಾ ಪತ್ರಿಕೆಗಳು ವರದಿ ಮಾಡಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಶನ್ (ಸಿಎಸ್ಎಸ್ ಸಿ) ಸಂಸ್ಥೆ ಈ ಶಕ್ತಿಶಾಲಿ ಯುದ್ಧನೌಕೆಯ ನಿರ್ಮಾಣದ ಹೊಣೆ ಹೊತ್ತಿದೆ. ಮೂಲಗಳ ಪ್ರಕಾರ ಚೀನಾ ದೇಶ ಪಾಕಿಸ್ತಾನಕ್ಕಾಗಿ ನಿರ್ಮಾಣ ಮಾಡುತ್ತಿರುವ ಯುದ್ಧ ನೌಕೆ ಎಲ್ಲ ರೀತಿಯ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಯುದ್ದನೌಕೆ ನಿಗ್ರಹ, ಜಲಾಂತರ್ಗಾಮಿ ನಿಗ್ರಹ ಮತ್ತು ವಾಯು ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ.
ನೌಕೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದ್ದು, ಶಕ್ತಿಶಾಲಿ ಕ್ಷಿಪಣಿಗಳು, ಶಕ್ತಿಶಾಲಿ ಗನ್ ಗಳನ್ನು ಅಳವಡಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಅತ್ಯಾಧುನಿಕ ವಿಚಕ್ಷಣ ವ್ಯವಸ್ಥೆ, ಅತ್ಯಾಧುನಿಕ ರಾಡಾರ್ ಮತ್ತು ಶಸ್ತ್ರ ವ್ಯವಸ್ಥೆಗಳನ್ನು ನೌಕೆ ಹೊಂದಿರಲಿದೆ. ಎಂತಹುದೇ ದಾಳಿಗಳಿಗೂ ನೌಕೆ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರಲಿದೆ. ಈ ಅತ್ಯಾಧುನಿಕ ನೌಕೆಯನ್ನು ಶಾಂಘೈನಲ್ಲಿರುವ ಹುಡೋಂಗ್-ಝೊಂಗ್ಹುಯಾ ಶಿಪ್ ಯಾರ್ಡ್ ನಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಚೀನಾ ಪಾಕಿಸ್ತಾನದ ಅತೀ ದೊಡ್ಡ ಶಸ್ತ್ರಾಸ್ತ್ರ ಸರಬರಾಜು ದೇಶವಾಗಿದ್ದು, ಉಭಯ ದೇಶಗಳು ಈಗಾಗಲೇ ಜೆಎಫ್ ಥಂಡರ್ ಸಿಂಗಲ್ ಎಂಜಿನ್ ಯುದ್ಧ ವಿಮಾನಗಳ ತಯಾರಿಕೆ ಮಾಡುತ್ತಿವೆ. ಇದೀಗ ಯುದ್ಧನೌಕೆ ನಿರ್ಮಾಣ ಸಂಬಂಧ ಒಪ್ಪಂದ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಚೀನಾ ಸರ್ಕಾರ ಮತ್ತು ಸಿಎಸ್ಎಸ್ ಸಿ ಪಾಕಿಸ್ತಾನಕ್ಕಾಗಿ ಯುದ್ದನೌಕೆ ಸಿದ್ದಪಡಿಸುತ್ತಿರುವುದಾಗಿ ಹೇಳಿಕೆ ನೀಡಿದೆಯಾದರೂ ನೌಕೆಯ ಕುರಿತಂತೆ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಕೆಲ ಮಾಧ್ಯಮಗಳು ಚೀನಾ ಪಾಕಿಸ್ತಾನಕ್ಕೆ ನಿರ್ಮಾಣ ಮಾಡುತ್ತಿರುವ ಯುದ್ಧ ನೌಕೆ 054AP ಕ್ಲಾಸ್ ಆಗಿರಲಿದೆ ಎಂದು ವರದಿ ಮಾಡಿವೆ.
ಕೇವಲ ನೌಕೆ ನಿರ್ಮಾಣ ಮಾತ್ರವಲ್ಲದೇ ಚೀನಾ ನೌಕಾಪಡೆ ಪಾಕಿಸ್ತಾನ ನೌಕಾ ಗಡಿ ರಕ್ಷಣೆಯಲ್ಲೂ ಪಾಕಿಸ್ತಾನದೊಂದಿಗೆ ಕೈ ಜೋಡಿಸಲಿದೆ. ಅಂತೆಯೇ ಪಾಕಿಸ್ತಾನ-ಚೀನಾ ಕಾರಿಡಾರ್ ಯೋಜನೆಗೂ ಇದು ಪೂರಕವಾಗಿರಲಿದೆ ಎಂದು ಈಗಾಗಲೇ ಘೋಷಣೆ ಮಾಡಿದೆ. ಆ ಮೂಲಕ ಭಾರತ ಮೇಲೆ ಕಣ್ಣಿಡಲು ಚೀನಾ ತಂತ್ರಗಾರಿಕೆ ರೂಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com