ಹಾಲಿ ಭಾರತ ಸರ್ಕಾರದ ಜೊತೆಗಿನ ಚರ್ಚೆ 'ವೇಸ್ಟ್', ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ: ಪಾಕಿಸ್ತಾನ

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಸಂಬಂಧ ಹಾಲಿ ಭಾರತ ಸರ್ಕಾರದ ಜೊತೆಗಿನ ಯಾವುದೇ ರೀತಿಯ ಚರ್ಚೆ ವ್ಯರ್ಥ.. ನಾವು ಮುಂದಿನ ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಸಂಬಂಧ ಹಾಲಿ ಭಾರತ ಸರ್ಕಾರದ ಜೊತೆಗಿನ ಯಾವುದೇ ರೀತಿಯ ಚರ್ಚೆ ವ್ಯರ್ಥ.. ನಾವು ಮುಂದಿನ ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌದರಿ ಈ ಬಗ್ಗೆ ಹೇಳಿಕೆ ನೀಡಿದ್ದು, 'ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆ ಪುನಾರಂಭಕ್ಕೆ ಪಾಕಿಸ್ತಾನ ಶತ ಪ್ರಯತ್ನ ಮಾಡುತ್ತಿದೆಯಾದರೂ, ಹಾಲಿ ಮೋದಿ ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿಲ್ಲ. ಹೀಗಾಗಿ ಪ್ರಸ್ತುತ ಭಾರತದೊಂದಿಗೆ ಚರ್ಚೆ ನಡೆಸುವುದು ವ್ಯರ್ಥ. ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಸರ್ಕಾರ ರಚನೆಯಾಗುವ ಆಶಾಭಾವ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಸಚಿವರ ಹೇಳಿಕೆ ಕುರಿತು ಗಲ್ಫ್ ನ್ಯೂಸ್ ವರದಿ ಮಾಡಿದ್ದು, ನಾವು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕವಷ್ಟೇ ಭಾರತದೊಂದಿಗೆ ಮಾತುಕತೆ ನಡೆಸುತ್ತೇವೆ. ಹಾಲಿ ಸರ್ಕಾರದೊಂದಿಗಿನ ಯಾವುದೇ ರೀತಿಯ ಮಾತುಕತೆ ಸಮಯ ವ್ಯರ್ಥವಷ್ಟೇ.. ಹಾಲಿ ಸರ್ಕಾರ ಯಾವುದೇ ರೀತಿಯ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ನಮ್ಮ ಶ್ರಮವೆಲ್ಲ ವ್ಯರ್ಥವಾಗುತ್ತಿದೆ. ಹಾಲಿ ಸರ್ಕಾರದ ಮೇಲಿದ್ದ ನಮ್ಮ ನಿರೀಕ್ಷೆಗಳೂ ಸುಳ್ಳಾಗಿವೆ ಎಂದು ಫವಾದ್ ಚೌದರಿ ಹೇಳಿದ್ದಾರೆ ಎಂದು ವರದಿ ಮಾಡಲಾಗಿದೆ.
'ನಮ್ಮ ಹಿಂದಿನ ಪ್ರಯತ್ನಗಳೆಲ್ಲಾ ವಿಫಲವಾಗಿದ್ದು, ಈಗ ಉದ್ದೇಶಪೂರ್ವಕವಾಗಿಯೇ ಭಾರತದೊಂದಿಗಿನ ಶಾಂತಿ ಮಾತುಕತೆಯನ್ನು ಸ್ಥಗಿತಗೊಳಿಸಿದ್ದೇವೆ. ಹಾಲಿ ಸರ್ಕಾರ ನಮ್ಮ ಭಾವನೆಗಳಿಗೆ ನಮ್ಮ ಪ್ರಯತ್ನಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆ ಬಳಿಕ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಅಧಿಕಾರಕ್ಕೆ ಬಂದರೂ ಪಾಕಿಸ್ತಾನಕ್ಕೆ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ. ಮುಂದಿನ ಬಾರಿ ಯಾರೇ ಅಧಿಕಾರಕ್ಕೆ ಬಂದರೂ ಪಾಕಿಸ್ತಾನ ಅವರೊಂದಿಗೆ ಶಾಂತಿ ಮಾತುಕತೆಗೆ ಸದಾ ಸಿದ್ದ. ಆದರೆ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬರಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com