'ಸುರಕ್ಷಿತ ಸ್ವರ್ಗ'ದಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಇಬ್ರಾಹಿಂ ಅಪಾಯಕಾರಿ: ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ

ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಮತ್ತೆ ಭಾರತ ವಾಗ್ದಾಳಿ ನಡೆಸಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ...
ದಾವೂದ್ ಇಬ್ರಾಹಿಂ(ಸಂಗ್ರಹ ಚಿತ್ರ)
ದಾವೂದ್ ಇಬ್ರಾಹಿಂ(ಸಂಗ್ರಹ ಚಿತ್ರ)
ಯುನೈಟೆಡ್ ನೇಷನ್ಸ್: ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಮತ್ತೆ ಭಾರತ ವಾಗ್ದಾಳಿ ನಡೆಸಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ಸಂಗಡಿಗರು, ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾದಂತಹ ಸಂಘಟನೆಗಳ ಅಕ್ರಮ ಚಟುವಟಿಕೆಗಳಿಗೆ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ನೆಲೆ ಕಂಡುಕೊಂಡಿದ್ದರೂ ಕೂಡ ಪಾಕಿಸ್ತಾನ ಮಾತ್ರ ಅವುಗಳ ಇರುವಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಈ ಬಗ್ಗೆ ಪಾಕಿಸ್ತಾನದ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೇಳಿದೆ. 
ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ವ್ಯಾಪಾರ, ಮಾನವ ಕಳ್ಳಸಾಗಣೆಗೆ ಹಣ ಒದಗಿಸುವಂತಹ ತಮ್ಮ ಲಾಭದಾಯಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರಾತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಇದೇ ರೀತಿ, ಕ್ರಿಮಿನಲ್ ಗುಂಪುಗಳು ಭಯೋತ್ಪಾದಕರ ಜೊತೆ ಕೈಜೋಡಿಸಿ ನಕಲಿ, ಅಕ್ರಮ ಹಣಕಾಸು, ಶಸ್ತ್ರಾಸ್ತ್ರ ವ್ಯವಹಾರ, ಮಾದಕವಸ್ತು ಕಳ್ಳಸಾಗಣೆ ಮತ್ತು ಗಡಿಗಳಲ್ಲಿ ಭಯೋತ್ಪಾದಕರನ್ನು ಕಳ್ಳಸಾಗಣೆ ಮಾಡುವಂತಹ ಕೆಲಸಗಳನ್ನು ಮಾಡುತ್ತಿವೆ ಎಂದು ಸೈಯದ್ ಅಕ್ಬರುದ್ದೀನ್ ನಿನ್ನೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ: ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಡುವಿನ ಸಂಬಂಧ ಚರ್ಚೆಯಲ್ಲಿ ಹೇಳಿದರು.
ಭಾರತದಲ್ಲಿ ದಾವೂದ್ ಇಬ್ರಾಹಿಂ ಅವರ ಕ್ರಿಮಿನಲ್ ಚಟುವಟಿಕೆಯ ಸಂಪರ್ಕಜಾಲ ಡಿ -ಕಂಪೆನಿಯಾಗಿದ್ದು, ಅದರ ಚಟುವಟಿಕೆಗಳು ಬಾಹ್ಯಜಗತ್ತಿಗೆ ಅಷ್ಟು ಬೆಳಕಿಗೆ ಬಂದಿರಲಿಕ್ಕಿಲ್ಲ. ಆದರೆ ಭಾರತದಲ್ಲಿ ಚಿನ್ನದ ಕಳ್ಳಸಾಗಣೆ, ನಕಲಿ ಕರೆನ್ಸಿ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಪ್ರಸ್ತುತ ಅಪಾಯವಾಗಿದೆ ಎಂದು ಅಕ್ಬರುದ್ದೀನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com