ಪಾಕ್ ಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದಿಂದ 5.976 ಶತಕೋಟಿ ಡಾಲರ್ ದಂಡ

2011ರಲ್ಲಿ ಗಣಿಗಾರಿಕೆ ಗುತ್ತಿಗೆಯೊಂದನ್ನು ಕಾನೂನು ಬಾಹಿರವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್‍: 2011ರಲ್ಲಿ ಗಣಿಗಾರಿಕೆ ಗುತ್ತಿಗೆಯೊಂದನ್ನು ಕಾನೂನು ಬಾಹಿರವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ಪಾಕಿಸ್ತಾನಕ್ಕೆ ತನ್ನ ಇತಿಹಾಸದಲ್ಲೇ ದೊಡ್ಡ ಮೊತ್ತವೆನಿಸಿದ 5.976 ಶತಕೋಟಿ ಡಾಲರ್ ದಂಡ ವಿಧಿಸಿದೆ ಎಂದು ಎಕ್ಸ್ ಪ್ರೆಸ್‍ ಟ್ರಿಬ್ಯೂನಲ್‍ ವರದಿ ಮಾಡಿದೆ. 
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ರೆಕೊ ಡಿಕ್‍ ಯೋಜನೆಗೆ 2012ರಲ್ಲಿ ತಾನು ಸಲ್ಲಿಸಿದ್ದ ಗಣಿಗಾರಿಕೆ ಗುತ್ತಿಗೆ ಮನವಿಯನ್ನು ಅಲ್ಲಿನ ಸ್ಥಳೀಯ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಚಿಲಿ ದೇಶದ ಅಂಟೊಫಗಸ್ತ ಮತ್ತು ಕೆನಡಾದ ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್‍ ನ ಜಂಟಿ ಉದ್ಯಮವಾದ ಟೆತ್ಯಾನ್‍ ಕಾಪರ್ ಕಂಪೆನಿ(ಟಿಸಿಸಿ) ವಿಶ್ವಬ್ಯಾಂಕ್‍ನ ಹೂಡಿಕೆಗಳ ವ್ಯಾಜ್ಯಗಳ ಇತ್ಯರ್ಥ ಕೋರಿ ಕೋರ್ಟ್ ಮೊರೆ ಹೋಗಿತ್ತು. 
ಪಾಕಿಸ್ತಾನ ಸರ್ಕಾರ ಮತ್ತು ಕಂಪೆನಿ ನಡುವಿನ ಈ ಪ್ರಕರಣ ಏಳು ವರ್ಷಗಳ ಕಾಲ ಮುಂದುವರೆದಿತ್ತು.
ಪಾಕಿಸ್ತಾನದ ವಿರುದ್ಧದ 700 ಪುಟಗಳ ತೀರ್ಪಿನಲ್ಲಿ, ನ್ಯಾಯಮಂಡಳಿ, ಶುಕ್ರವಾರ 4.08 ಶತಕೋಟಿ ಡಾಲರ್ ದಂಡ ಹಾಗೂ 1.87 ಶತಕೋಟಿ ಡಾಲರ್ ಬಡ್ಡಿ ವಿಧಿಸಿದೆ ಎಂದು ಡಾನ್ ವರದಿ ಮಾಡಿದೆ.
ಗುತ್ತಿಗೆ ನಿರಾಕರಣೆಯಿಂದ ತನಗೆ 11.43 ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಕಂಪೆನಿ ವಾದಿಸಿತ್ತು.
ರೆಕೊ ಡಿಕ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಆಗಿರುವ ಭಾರಿ ನಷ್ಟದ ಬಗ್ಗೆ ತನಿಖೆಗೆ ಹಾಗೂ ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಲು ಆಯೋಗವನ್ನು ರಚಿಸುವಂತೆ ಪ್ರಧಾನಿ ಇಮ್ರಾನ್ ಖಾನ್  ಭಾನುವಾರ ಆದೇಶ ಹೊರಡಿಸಿದ್ದಾರೆ.
ರೆಕೊ ಡಿಕ್, ಬಲೂಚಿಸ್ತಾನದ ಚಾಗೈ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದ್ದು, ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಗೆ ಹತ್ತಿರದಲ್ಲಿದೆ. ರೆಕೊ ಡಿಕ್ ಗಣಿ ತನ್ನ ವಿಶಾಲವಾದ ಚಿನ್ನ ಮತ್ತು ತಾಮ್ರ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದ ಐದನೇ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಹೊಂದಿದೆ ಎಂದು ನಂಬಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com