ಉಗ್ರ ಹಫೀಜ್ ಸಯ್ಯೀದ್ ಬಂಧನ: 2 ವರ್ಷದಿಂದ ಪಾಕ್ ಮೇಲೆ ಒತ್ತಡ ಹೇರಲಾಗಿತ್ತು ಎಂದ ಡೊನಾಲ್ಡ್ ಟ್ರಂಪ್

ಪಾಕಿಸ್ತಾನದಲ್ಲಿ ಜುಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಮುಂಬೈ ಉಗ್ರ ದಾಳಿ ರೂವಾರಿ ಹಫೀಜ್ ಸಯ್ಯೀದ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಜುಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಮುಂಬೈ ಉಗ್ರ ದಾಳಿ ರೂವಾರಿ ಹಫೀಜ್ ಸಯ್ಯೀದ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆಯಷ್ಟೇ ಮುಂಬೈ ದಾಳಿ ರೂವಾರಿ ಮತ್ತು ಲಷ್ಕರ್ ಇ ತೊಯ್ಬಾ, ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ನನ್ನು ಬಂಧಿಸಲಾಗಿತ್ತು. ಹಫೀಜ್ ಸಯ್ಯೀದ್ ಮತ್ತು ಆತನ ನೇತೃತ್ವದ ಲಷ್ಕರ್ ಸಂಘಟನೆಗಳ ವಿರುದ್ಧ ದಾಖಲಾಗಿರುವ ಸುಮಾರು 23 ಉಗ್ರ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಿನ್ನೆಯಷ್ಟೇ ಉಗ್ರರಿಗೆ ನೆರವು ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, 'ಹತ್ತು ವರ್ಷಗಳ ಹುಡುಕಾಟದ ನಂತರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ಕರೆಯಲ್ಪಡುವವರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಅವನನ್ನು ಹುಡುಕಲು ಕಳೆದ ಎರಡು ವರ್ಷಗಳಿಂದ ಅಮೆರಿಕ ಸರ್ಕಾರದಿಂದ ಪಾಕಿಸ್ತಾನದ ಮೇಲೆ ಹೆಚ್ಚಿನ ಒತ್ತಡ ಹೇರಲಾಗಿತ್ತು ಎಂದು ಹೇಳಿದ್ದಾರೆ. 
ಆ ಮೂಲಕ ಹಫೀಜ್ ಸಯ್ಯೀದ್ ಬಂಧನದ ಹಿಂದೆ ತಮ್ಮ ಪಾತ್ರವೂ ಇದೆ ಎಂದು ಪರೋಕ್ಷವಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. 
ನವೆಂಬರ್ 26, 2008ರಲ್ಲಿ ಮುಂಬೈ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ 180ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದರು. ನಂತರದ ತನಿಖೆಯಲ್ಲಿ ಈ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್​ಐ ಮತ್ತು ಹಫೀಜ್​ ಸಯೀದ್ ಕೈವಾಡ ಇರೋದು ಬಹಿರಂಗವಾಗಿತ್ತು. ಈ ಪ್ರಕರಣದಲ್ಲಿ ಹಫೀಜ್​ ಸಯೀದ್​​ನ್ನ ಮೊಸ್ಟ್​ ವಾಂಟೆಡ್​  ಉಗ್ರರ ಪಟ್ಟಿಗೆ ಸೇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com