ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಫ್ಚ್; ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದು!

ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತ ಸರ್ಕಾರಕ್ಕೆ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಶಾಕ್ ನೀಡಿದ್ದು, ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್​: ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭಾರತ ಸರ್ಕಾರಕ್ಕೆ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಶಾಕ್ ನೀಡಿದ್ದು, ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಮಾನ್ಯತೆ ರದ್ದುಗೊಳಿಸಿದೆ.
ಭಾರತದ ಜತೆಗೆ ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು,  ಈ ಹಿಂದೆಯೇ ಅಂದರೆ ಕಳೆದ ಮಾರ್ಚ್ ತಿಂಗಳಲ್ಲೇ ಭಾರತಕ್ಕೆ ಅಮೆರಿಕ ನೋಟಿಸ್ ನೀಡಿದ್ದು, 60 ದಿನಗಳ ಅಂತಿಮ ಗಡುವು ಕೂಡ ನೀಡಿತ್ತು. ಅದಾಗ್ಯೂ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್ ಸರ್ಕಾರ ಹೇಳಿದೆ. ಈ ಸಂಬಂಧದ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿರುವುದಾಗಿ ವೈಟ್​ಹೌಸ್​ನ ಘೋಷಣೆ ತಿಳಿಸಿದೆ. ಜೂನ್​ 5ರಿಂದ ಈ ಆದೇಶ ಜಾರಿಗೆ ಬರುವುದಾಗಿ ಹೇಳಿದೆ.
ಪ್ರಸ್ತುತ ಈ ಒಪ್ಪಂದದಡಿ 560 ಕೋಟಿ ಡಾಲರ್‌ ಮೌಲ್ಯದ ಭಾರತದ ಸರಕುಗಳು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತಾಗುತ್ತಿದ್ದು, ಅಮೆರಿಕ ಸರ್ಕಾರದ ಕ್ರಮದಿಂದಾಗಿ ಈ ವಸ್ತುಗಳಿಗೂ ಇನ್ನುಮುಂದೆ ಸುಂಕ ಹೇರಲಾಗುತ್ತದೆ ಎಂದು  ಅಮೆರಿಕ ಹೇಳಿದೆ. 1975ರ ನವೆಂಬರ್​ 24ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶದ ಪ್ರಕಾರ ಅಮೆರಿಕ ಅಧ್ಯಕ್ಷರು ಸಾಮಾನ್ಯ ಪದ್ಧತಿಯ ಆದ್ಯತೆಗಳಿಗಾಗಿ (ಜಿಎಸ್​ಪಿ) ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಅಥವಾ ಆದ್ಯತೆಯ ವ್ಯಾಪಾರ ಮಾನ್ಯತೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಆದರೆ, ಈಗ ಅಮೆರಿಕದ ಉತ್ಪನ್ನಗಳಿಗೆ ಸಮಾನವಾದ ಮತ್ತು ಸುಲಭವಾದ ಮಾರುಕಟ್ಟೆ ಒದಗಿಸುವ ವಿಷಯದಲ್ಲಿ ಭಾರತದಿಂದ ಯಾವುದೇ ಭರವಸೆ ಬಂದಿಲ್ಲ. ಆದ್ದರಿಂದ, ಭಾರತಕ್ಕೆ ನೀಡಲಾಗಿರುವ ಮಾನ್ಯತೆಯನ್ನು 2019ರ ಜೂನ್​ 5ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.
ಚೀನಾ ಬಳಿಕ ಭಾರತವೇ ಅಮೆರಿಕ ಟಾರ್ಗೆಟ್
ಚೀನಾದೊಂದಿಗೆ ವಾಣಿಜ್ಯ ಸಮರ ಮುಂದುವರಿಸಿರುವಂತೆ ಅಮೆರಿಕ ಈಗ ಭಾರತದ ಜತೆಗೂ ವಾಣಿಜ್ಯ ಸಮರ ಮುಂದುವರಿಸಿದೆ. ಅಕ್ರಮ ವಲಸಿಗರ ಸಮಸ್ಯೆ ಹಿನ್ನೆಲೆಯಲ್ಲಿ ಮೆಕ್ಸಿಕೋದಿಂದ ಮಾಡಿಕೊಳ್ಳಲಾಗುವ ಆಮದಿನ ಮೇಲಿನ ಸುಂಕವನ್ನು ಟ್ರಂಪ್​ ಹೆಚ್ಚಿಸಿದ್ದರು. ಅಲ್ಲದೆ, ಪಾಕಿಸ್ತಾನಿ ರಾಜತಾಂತ್ರಿಕ ವರ್ಗದವರಿಗೆ ನೀಡಲಾಗುತ್ತಿದ್ದ ತೆರಿಗೆ ವಿನಾಯಿತಿಯನ್ನು ಶುಕ್ರವಾರವಷ್ಟೇ ಹಿಂಪಡೆದು ಆದೇಶಿಸಿದ್ದರು. ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ (ಜನರಲೈಸ್ಡ್‌ ಸಿಸ್ಟಂ ಆಫ್‌ ಬೆನಿಫಿಶಿಯರೀಸ್‌- ಜಿಎಸ್‌ಪಿ) ಯಿಂದ ಭಾರತವನ್ನು ತೆಗೆದು ಹಾಕಲಾಗುವುದು ಎಂದು ಕಳೆದ ಮಾರ್ಚ್ ತಿಂಗಳಿನಲ್ಲೇ ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ ತಿಳಿಸಿತ್ತು.  
ಭಾರತದ ಜತೆಗಿನ ವ್ಯಾಪಾರದಲ್ಲಿ 2017ರಲ್ಲಿ ಅಮೆರಿಕದ ವ್ಯಾಪಾರ ಕೊರತೆ 27.3 ಶತಕೋಟಿ ಡಾಲರ್ ಗಳಷ್ಟಿತ್ತು. ಅಮೆರಿಕ ಜತೆಗಿನ ವ್ಯಾಪಾರದಲ್ಲಿ ಭಾರತವೇ ಜಗತ್ತಿನ ಅತಿದೊಡ್ಡ ಜಿಎಸ್‌ಪಿ ಫಲಾನುಭವಿ ರಾಷ್ಟ್ರವಾಗಿದೆ. ಭಾರತದ ವಿರುದ್ಧ ದಂಡನಾ ಕ್ರಮವಾಗಿ ಟ್ರಂಪ್‌ ಆಡಳಿತ ಈ ನಿರ್ಣಯಕ್ಕೆ ಮುಂದಾಗಿದೆ. ಈ ಹಿಂದೆ ಅಮೆರಿಕ ಸರ್ಕಾರ ಭಾರತದೊಂದಿಗೆ ಜೆಎಸ್ ಪಿ ಮಾದರಿಯಲ್ಲಿ ತನ್ನ ವಸ್ತುಗಳಿಗೆ ತೆರಿಗೆ ವಿನಾಯಿತಿ ಬಯಸಿತ್ತು, ಈ ಕುರಿತಂತೆ ಭಾರತ ಯಾವುದೇ ರೀತಿಯ ಭರವಸೆ ನೀಡಿರಲಿಲ್ಲ. ಅಲ್ಲದೆ ಭಾರತ ನೂತನ ಇ-ಕಾಮರ್ಸ್‌ ನಿಯಮಗಳನ್ನು ಜಾರಿಗೊಳಿಸಿದ ಬಳಿಕ ಅಮೆರಿಕದ ಅಮೆಜಾನ್.ಕಾಮ್‌ ಮತ್ತು ಫ್ಲಿಪ್ ಕಾರ್ಟ್‌ ಮಾಲೀಕತ್ವ ಹೊಂದಿರುವ ವಾಲ್ ಮಾರ್ಟ್‌ಗಳ ವಹಿವಾಟಿಗೆ ಭಾರೀ ಹೊಡೆತ ಬಿದ್ದಿತ್ತು. 
ಇದೇ ನಿಯಮಗಳ ಅನ್ವಯ, ಜಾಗತಿಕ ಕಾರ್ಡ್‌ ಪೇಮೆಂಟ್‌ ಕಂಪನಿಗಳಾದ ಮಾಸ್ಟರ್‌ ಕಾರ್ಡ್‌, ವೀಸಾ ಕಾರ್ಡ್‌ಗಳು ತಮ್ಮ ದತ್ತಾಂಶ ಕೇಂದ್ರ (ಡೇಟಾ ಸೆಂಟರ್‌)ಗಳನ್ನು ಭಾರತದಲ್ಲೇ ನಿರ್ವಹಿಸಬೇಕು ಎಂದು ತಾಕೀತು ಮಾಡಲಾಗಿತ್ತು. ಅಲ್ಲದೆ ಅಮೆರಿಕದ ಇ-ಕಾಮರ್ಸ್‌ ಕಂಪನಿಗಳು ಮಾರಾಟ ಮಾಡುವ ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಸ್ಮಾರ್ಟ್ ಫೋನ್‌ಗಳ ಮೇಲೆ ಅಧಿಕ ತೆರಿಗೆ ವಿಧಿಸಲಾಗುತ್ತಿದೆ. ಇದು ಅಮೆರಿಕ ಅಸಮಾಧನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ  44 ವರ್ಷಗಳ ಬಳಿಕ ಭಾರತಕ್ಕೆ ನೀಡಿದ್ದ ಆದ್ಯತೆಯ ವ್ಯಾಪಾರ ಮಾನ್ಯತೆಯನ್ನು ಅಮೆರಿಕ ರದ್ದುಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com