ನಮ್ಮ ದೇಶದಲ್ಲಿ ಜೈಶ್ ಉಗ್ರ ಸಂಘಟನೆ ಅಸ್ತಿತ್ವದಲ್ಲೇ ಇಲ್ಲ: ಪಾಕ್ ಸೇನೆ

ಪುಲ್ವಾಮ ಉಗ್ರ ದಾಳಿಯ ಹೊಣೆಹೊತ್ತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಯೂಟರ್ನ್ ಹೊಡೆದಿರುವ ಪಾಕಿಸ್ತಾನ...
ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್
ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್
ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿಯ ಹೊಣೆಹೊತ್ತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಯೂಟರ್ನ್ ಹೊಡೆದಿರುವ ಪಾಕಿಸ್ತಾನ, ಅದು ನಮ್ಮ ದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದು ಬುಧವಾರ ಹೇಳಿದೆ.
ಫೆಬ್ರವರಿ 28ರಂದು ಸಿಎನ್ಎನ್ ಗೆ ನೀಡಿದ ಸಂದರ್ಶದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮಹಮ್ಮೂದ್ ಖುರೇಷಿ ಅವರು, ಜೈಶ್ ಮುಖ್ಯಸ್ಥ ತಮ್ಮ ದೇಶದಲ್ಲೇ ಇರುವುದಾಗಿ ಹೇಳಿದ್ದರು. ಈಗ ಖುರೇಷಿ ಹೇಳಿಕೆಯನ್ನು ತಳ್ಳಿಹಾಕಿರುವ ಪಾಕ್ ಸೇನೆಯ ವಕ್ತಾರ ಮೇಜರ್​ ಜನರಲ್​ ಆಸಿಫ್​ ಗಫೂರ್​ ಅವರು, ಜೈಶ್ - ಇ-ಮೊಹಮ್ಮದ್ ಸಂಘಟನೆ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲ ಎಂದಿದ್ದಾರೆ.
ಜೈಶ್ ಉಗ್ರ ಸಂಘಟನೆ ಪುಲ್ವಾಮ ಉಗ್ರ ದಾಳಿಯ ಹೊಣೆ ಹೊತ್ತಿರುವುದಾಗಿ ನಮ್ಮ ದೇಶದಿಂದ ಹೇಳಿಲ್ಲ. ಆ ಸಂಘಟನೆಯನ್ನು ಪಾಕಿಸ್ತಾನ ಮತ್ತು ವಿಶ್ವಸಂಸ್ಥೆ ಸಹ ನಿಷೇಧಿಸಿವೆ ಎಂದು ಗಫೂರ್ ಅವರು ಹೇಳಿದ್ದಾರೆ.
ಬಾಲಕೋಟ್ ವೈಮಾನಿಕ ದಾಳಿಯ ನಂತರ ಭಾರತ-ಪಾಕ್ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಸಿಎನ್ಎನ್ ಗೆ ಪ್ರತಿಕ್ರಿಯಿಸಿದ ಗಫೂರ್ ಅವರು, ಭಾರತ ಆಕ್ರಮಣಶೀಲತೆ ಪ್ರದರ್ಶಿಸಿದ್ದರಿಂದ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅದಕ್ಕೆ ನಾವು ತಕ್ಕ ಪ್ರತ್ಯುತ್ತರ ಸಹ ನೀಡಿದ್ದೇವೆ ಎಂದರು.
ಎಲ್ಒಸಿ ಬಳಿ ದಶಕದಿಂದಲೂ ಉಭಯ ದೇಶಗಳ ಸೇನಾಪಡೆಗಳಿವೆ. ಆದರೆ ಅವರು ನಮ್ಮ ವಾಯುಗಡಿಯನ್ನು ಉಲ್ಲಂಘಿಸಿದ್ದರಿಂದ ನಾವು ಪ್ರತಿದಾಳಿ ನಡೆಸಿ ಮಿಗ್-21 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಅದರ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದಿದ್ದೇವು. ಬಳಿಕ ಭಾರತಕ್ಕೆ ಒಪ್ಪಿಸಲಾಯಿತು ಎಂದರು.
ಬಾಲಕೋಟ್ ವೈಮಾನಿಕ ದಾಳಿ ನಡೆದ ಸ್ಥಳದಲ್ಲಿ ಒಂದೇ ಒಂದು ಇಟ್ಟಿಗೆ ಸಹ ಪತ್ತೆಯಾಗಿಲ್ಲ ಮತ್ತು ಯಾವುದೇ ಜೀವಹಾನಿಯಾಗಿಲ್ಲ. ಈ ಕುರಿತು ಭಾರತ ಸುಳ್ಳು ಹೇಳುತ್ತಿದೆ ಎಂದು ಪಾಕ್ ಸೇನಾ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com