ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: 9 ಭಾರತೀಯರು ನಾಪತ್ತೆ

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ.....
ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ
ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ಸಂಜೀವ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದಾರೆ.
ವಿವಿಧ ಮೂಲಗಳಿಂದ ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಭೀಕರ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ 9 ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಈ ಕುರಿತು ಅಧಿಕೃತ ಮಾಹಿತಿಯ ನಿರೀಕ್ಷೆಯಲ್ಲಿರುವುದಾಗಿ ಸಂಜಿವ್ ಕೊಹ್ಲಿ ಹೇಳಿದ್ದಾರೆ.
ಈ ಮಧ್ಯೆ, ಗುಂಡಿನ ದಾಳಿಯಲ್ಲಿ ಹೈದರಾಬಾದ್‌ ಮೂಲದ ಅಹ್ಮದ್‌ ಜಹಾಂಗೀರ್‌ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ  ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರು, ಗುಂಡಿನ ದಾಳಿಯಲ್ಲಿ ಅಹ್ಮದ್‌ ಜಹಾಂಗೀರ್‌ ಅವರು ಗಾಯಗೊಂಡಿದ್ದು, ಅವರ ಸಹೋದರ ಇಕ್ಬಾಲ್ ಜಹಾಂಗೀರ್‌ ಹೈದರಾಬಾದ್ ನಿವಾಸಿಯಾಗಿದ್ದು, ಅವರ ಕುಟುಂಬ ಸದಸ್ಯರು ನ್ಯೂಜಿಲ್ಯಾಂಡ್‌ಗೆ ತೆರಳಲು ಬಯಸಿದ್ದಾರೆ. ಅವರಿಗೆ ತುರ್ತು ವೀಸಾ ನೀಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ. 
ಇಂದು ಬೆಳಗ್ಗೆ ದಕ್ಷಿಣ ಐಲೆಂಡ್ ಮತ್ತು ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 49 ಮಂದಿ ಮೃತಪಟ್ಟಿದ್ದಾರೆ. 
ದಾಳಿಯಲ್ಲಿನ ಸಾವುನೋವಿನ ಬಗ್ಗೆ ನ್ಯೂಜಿಲೆಂಡ್ ಸರ್ಕಾರ ಅಧಿಕೃತ ಮಾಹಿತಿ ನೀಡಿದ್ದು, ಘಟನೆಯಲ್ಲಿ ಈ ವರೆಗೂ ಸತ್ತವರ ಸಂಖ್ಯೆ 49ಕ್ಕೆ ಏರಿಕೆಯಾಗಿದ್ದು, ಅಂತೆಯೇ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನ್ಯೂಜಿಲೆಂಡ್ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com