ರಾಫೆಲ್ ಕಚೇರಿಗೆ 'ಅನಾಮಿಕರ ಅತಿಕ್ರಮ ಪ್ರವೇಶ'; ಯುದ್ಧ ವಿಮಾನದ ಮಹತ್ವದ ಮಾಹಿತಿ ಕಳವು ಶಂಕೆ!

ಫ್ರಾನ್ಸ್ ನಲ್ಲಿರುವ ಭಾರತದ ರಾಫೆಲ್ ಯೋಜನೆ ಕಚೇರಿಗೆ 'ಅನಾಮಿಕರ ಗುಂಪೊಂದು ಅತಿಕ್ರಮ ಪ್ರವೇಶ ಮಾಡಿ ಮಹತ್ವದ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

Published: 23rd May 2019 12:00 PM  |   Last Updated: 23rd May 2019 12:00 PM   |  A+A-


Break-in attempted at IAF's Rafale facility in Paris: Sources

ಸಂಗ್ರಹ ಚಿತ್ರ

Posted By : SVN SVN
Source : ANI
ಪ್ಯಾರಿಸ್: ಭಾರತ ಮತ್ತು ಫ್ರಾನ್ಸ್ ನಡುವಿನ ರಾಫೆಲ್ ಯುದ್ಧ ವಿಮಾನ ಯೋಜನೆ ಕುರಿತಂತೆ ಹಲವು ವಿವಾದಗಳು ಸುತ್ತಿಕೊಂಡಿರುವಂತೆಯೇ ಅತ್ತ ಫ್ರಾನ್ಸ್ ನಲ್ಲಿರುವ ಭಾರತದ ರಾಫೆಲ್ ಯೋಜನೆ ಕಚೇರಿಗೆ 'ಅನಾಮಿಕರ ಗುಂಪೊಂದು ಅತಿಕ್ರಮ ಪ್ರವೇಶ ಮಾಡಿ ಮಹತ್ವದ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿರುವ ಭಾರತೀಯ ವಾಯಪಡೆಯ ರಾಫೇಲ್‌ ಪ್ರಾಜೆಕ್ಟ್‌ ಮ್ಯಾನೇಜ್ ಮೆಂಟ್‌ ಕಚೇರಿಯೊಳಗೆ ಕೆಲ ಗುರುತು ಸಿಗದ ಅನಾಮಿಕರ ತಂಡ ಅತಿಕ್ರಮ ಪ್ರವೇಶ ಮಾಡಿ ಮಾಹಿತಿ ಕಲೆಹಾಕುವ ಯತ್ನ ನಡೆಸಿದೆ. ಈ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಪ್ರಸ್ತುತ ಕಚೆೇರಿಯ ಸುತಮುತ್ತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಪ್ಯಾರಿಸ್ ನಲ್ಲಿರುವ ಭಾರತದ ರಾಫೆಲ್ ಯೋಜನೆ ಕಚೇರಿಗೆ ನುಗ್ಗಿದ್ದ ಅನಾಮಿಕರು ರಾಫೆಲ್ ಯುದ್ಧ ವಿಮಾನದ ತಾಂತ್ರಿಕ ಅಂಶಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಭಾರತದ ಗ್ರೂಪ್ ಕ್ಯಾಪ್ಟನ್ ವೇಷೇದಲ್ಲಿ ಬಂದಿದ್ದ ಅನಾಮಿಕರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವಾಲಯ ಈ ವರೆಗೂ ಮಾಹಿತಿ ನೀಡಿಲ್ಲವಾದರೂ, ಕಚೇರಿಗೆ ನುಗ್ಗಿದ್ದ ಅನಾಮಿಕರು ಯುದ್ಧ ವಿಮಾನದ ಮಹತ್ವದ ತಾಂತ್ರಿಕ ಅಂಶಗಳನ್ನು ಸಂಗ್ರಹಿಸಿರುವ ಶಂಕೆ ಇದೆ. ಈ ಬಗ್ಗೆ ಅಲ್ಲಿ ತನಿಖೆ ನಡೆಸುತ್ತಿರುವ ಭದ್ರತಾ ಅಧಿಕಾರಿಗಳೂ ಕೂಡ ಅಲ್ಲಗಳೆಯದೇ ಇರುವುದು ಪ್ರಕರಣದ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ. 

ಇನ್ನು ಭಾರತದ ಶತ್ರು ರಾಷ್ಚ್ರ ಪಾಕಿಸ್ತಾನ ಮತ್ತು ಚೀನಾ ದೇಶದ ಕೆಲ ಪೈಲಟ್ ಗಳು ಸೌದಿಯಲ್ಲಿ ಈಗಾಗಲೇ ರಾಫೆಲ್ ಯುದ್ಧ ವಿಮಾನದ ತರಬೇತಿ ಪಡೆದಿದ್ದು, ಯುದ್ಧ ವಿಮಾನದ ತಾಂತ್ರಿಕತೆಯ ಕುರಿತು ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ ಈ ಘಟನೆ ಕೂಡ ಭಾರತಕ್ಕೆ ಮತ್ತಷ್ಟು ಆಂತಕವನ್ನು ತಂದೊಡ್ಡಿದೆ. ಭಾರತಕ್ಕಾಗಿಯೇ ರಾಫೆಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ನ ಡಸ್ಸಾಲ್ಟ್ ಏವಿಯೇಯಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಯುದ್ಧ ವಿಮಾನದ ತಾಂತ್ರಿಕ ಅಂಶಗಳು ಸೋರಿಕೆಯಾದರೆ ಭಾರತದ ಆಂತರಿಕ ಭದ್ರತೆ ವಿಚಾರದಲ್ಲಿ ರಾಜಿಯಾದಂತೆ. ಆಗ ರಾಫೆಲ್ ಯುದ್ದ ವಿಮಾನವನ್ನು ಸೇನೆಗೆ ಸೇರ್ಪಡೆ ಮಾಡಿಕೊಂಡರೂ ಪ್ರಯೋಜನವಿರುವುದಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ.

ಈ ಕುರಿತಂತೆ ಇನ್ನಷ್ಟೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp