ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿತ್ತು: ಜ.ಪರ್ವೇಜ್ ಮುಷರಫ್ 

ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬ ಸತ್ಯವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. 
ಪಾಕಿಸ್ತಾನ ಮಾಜಿ ಅಧ್ಯಕ್ಷ ನಿವೃತ್ತ ಜ.ಪರ್ವೇಜ್ ಮುಷರಫ್
ಪಾಕಿಸ್ತಾನ ಮಾಜಿ ಅಧ್ಯಕ್ಷ ನಿವೃತ್ತ ಜ.ಪರ್ವೇಜ್ ಮುಷರಫ್

ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ವ್ಯಾಪಕ ವೈರಲ್ 

ಇಸ್ಲಾಮಾಬಾದ್: ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬ ಸತ್ಯವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ. 


ಅಂತಾರಾಷ್ಟ್ರೀಯ ಮಟ್ಟದ ಒಸಮಾ ಬಿನ್ ಲಾಡೆನ್ ಮತ್ತು ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರನ್ನು ಪಾಕಿಸ್ತಾನದ ಹೀರೋಗಳಂತೆ ಕಂಡು ಬಳಸಲಾಗುತ್ತಿತ್ತು ಎಂಬ ಭಯಾನಕ ಸ್ಫೋಟಕ ಮಾಹಿತಿಯನ್ನು ಕೂಡ ಬಹಿರಂಗಪಡಿಸಿದ್ದಾರೆ.


ಪಾಕಿಸ್ತಾನದ ರಾಜಕೀಯ ನಾಯಕ ಫರ್ಹತುಲ್ಲಾ ಬಾಬರ್ ನಿನ್ನೆ ಟ್ವಿಟ್ಟರ್ ನಲ್ಲಿ ಸಂದರ್ಶನದ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಪರ್ವೇಜ್ ಮುಷರಫ್ ಮಾತನಾಡಿರುವ ವಿಷಯಗಳು ಇದೀಗ ಸಾಕಷ್ಟು ವೈರಲ್ ಆಗಿದೆ.  

ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಮತ್ತು ಸೋವಿಯತ್ ಅನ್ನು ದೇಶದಿಂದ ಹೊರಹಾಕಲು 1979ರಲ್ಲಿ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಉಗ್ರಗಾಮಿತ್ವವನ್ನು ತಂದೆವು. ಜಗತ್ತಿನ ಹಲವು ಭಾಗಗಳಲ್ಲಿರುವ ಮುಜಾಹಿದ್ದೀನ್ಗಳನ್ನು ಕರೆತಂದೆವು. ಅವರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಿ ಶಸ್ತ್ರಾಸ್ತ್ರಗಳನ್ನು ಪೂರೈಸಿದೆವು. ಅವರೆಲ್ಲಾ ನಮ್ಮ ವೀರರು, ನಮಗೆ ಬೇಕಾದವರಾಗಿದ್ದರು. ಹಕ್ಕಾನಿ, ಒಸಮಾ ಬಿನ್ ಲಾಡೆನ್ ನಮ್ಮ ಹೀರೋಗಳಂತೆ ಕಂಡೆವು. ಅಂದಿನ ಪರಿಸ್ಥಿತಿ ಭಿನ್ನವಾಗಿತ್ತು, ಇಂದು ಪರಿಸ್ಥಿತಿ ಬದಲಾಗಿದೆ. ಹೀರೋಗಳು ಇಂದು ವಿಲನ್ ಆಗಿದ್ದಾರೆ ಎಂದು ಮುಷರಫ್ ಹೇಳಿದ್ದಾರೆ.

ಕಾಶ್ಮೀರದ ಅನಿಶ್ಚಿತತೆ ಬಗ್ಗೆ ಮಾತನಾಡಿದ್ದ ಮುಷರಫ್, ಪಾಕಿಸ್ತಾನಕ್ಕೆ ಬಂದ ಕಾಶ್ಮೀರಿಗಳಿಗೆ ಇಲ್ಲಿ ಭವ್ಯ ಸ್ವಾಗತ ದೊರಕುತ್ತಿತ್ತು. ನಾವು ಅವರಿಗೆ ತರಬೇತಿ ನೀಡಿ ಬೆಂಬಲ ಕೊಡುತ್ತಿದ್ದೆವು. ಅವರನ್ನು ನಾವು ಮುಜಾಹಿದ್ದೀನ್ ಗಳೆಂದು ಪರಿಗಣಿಸುತ್ತಿದ್ದೆವು. ಅವರು ಭಾರತೀಯ ಸೇನೆ ವಿರುದ್ಧ ಹೋರಾಡುತ್ತಿದ್ದರು. ಲಷ್ಕರ್ ಇ ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳು ಈ ಸಮಯದಲ್ಲಿ ಬೆಳೆದವು. ಆ ಸಮಯದಲ್ಲಿ ಅವರು ನಮಗೆ ಹೀರೋಗಳಂತೆ ಕಂಡುಬರುತ್ತಿದ್ದರು ಎಂದು ಮನಸ್ಸು ಬಿಚ್ಚಿ ಮುಷರಫ್ ಹೇಳಿಕೊಂಡಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ನಾವು ಮಧ್ಯ ಪ್ರವೇಶಿಸುತ್ತಿಲ್ಲ, ನಮ್ಮ ಕಡೆಯಿಂದ ಯಾವುದು ನಡೆಯುತ್ತಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನಕ್ಕೆ ಮುಷರಫ್ ಅವರು ಬಾಯ್ಬಿಟ್ಟಿರುವ ಭಯಾನಕ ಸತ್ಯ ನುಂಗಲಾರದ ಬಿಸಿ ತುಪ್ಪವಾಗುವುದಂತೂ ಸತ್ಯ. ಕಾಶ್ಮೀರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು, ಭಯೋತ್ಪಾದಕರನ್ನು ಬೆಳೆಸಲು ಪಾಕಿಸ್ತಾನ ಸಹಾಯ ಮಾಡುತ್ತಿದೆ ಎಂಬ ಭಾರತದ ಆರೋಪಕ್ಕೆ ಇದು ಸಾಕ್ಷಿಯಾಗಿದೆ.

ನೆರೆ ರಾಷ್ಟ್ರಗಳಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಿಸಲು ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರವಾದಿ ಸಂಘಟನೆಗಳಿಗೆ ಸಹಾಯ ಮಾಡುತ್ತಾ ಬಂದಿದೆ ಎಂದು ಭಾರತ ಪದೇ ಪದೇ ಆರೋಪಿಸುತ್ತಾ ಬಂದಿದೆ. ಉಗ್ರಗಾಮಿಗಳಿಗೆ ಸಹಾಯ ಮಾಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯಗಳು ಕೂಡ ಕರೆ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com