ಮಸೂದ್ ಅಜರ್ ಗೆ ಜಾಗತಿಕ ಉಗ್ರ ಪಟ್ಟಕ್ಕೆ ಪ್ರತೀಕಾರ? 4 ಭಾರತೀಯರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಪಾಕ್ ಯತ್ನ

ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯಿಂದ ಘೋಷಿಸಲು ಭಾರತ ಯಶಸ್ವಿಯಾದ ನಂತರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯಿಂದ ಘೋಷಿಸಲು ಭಾರತ ಯಶಸ್ವಿಯಾದ ನಂತರ ಪಾಕಿಸ್ತಾನ ಈಗ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದು, ನಾಲ್ವರು ಭಾರತೀಯರಿಗೆ ಜಾಗತಿಕ ಉಗ್ರರ ಪಟ್ಟ ಕಟ್ಟಲು ಯತ್ನಿಸುತ್ತಿದೆ.

ಈ ಸಂಬಂಧ ಕಳೆದ ಕೆಲವು ತಿಂಗಳುಗಳಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ '1267 ಅಲ್ ಖೈದಾ ನಿರ್ಬಂಧಗಳ ಸಮಿತಿ' ಅಡಿಯಲ್ಲಿ ನಾಲ್ಕು ಭಾರತೀಯರನ್ನು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ನೆರೆಯ ರಾಷ್ಟ್ರ '1267 ಅಲ್ ಖೈದಾ ನಿರ್ಬಂಧಗಳ ಸಮಿತಿ'ಯನ್ನು ಬಳಸಿಕೊಂಡು ನಾಲ್ವರು  ಭಾರತೀಯರಾದ ವೇಣು ಮಾಧವ್ ಡೊಂಗ್ರ, ಅಜೋಯ್ ಮಿಸ್ತ್ರಿ, ಗೋಬಿಂದ್ ಪಟ್ನಾಯಕ್ ಹಾಗೂ ಅಪ್ಪಾಜಿ ಅಂಗಾರ ಅವರಿಗೆ ಜಾಗತಿಕ ಉಗ್ರ ಪಟ್ಟ ಕಟ್ಟಲು ಯತ್ನಿಸುತ್ತಿದೆ.

ಒಡಿಶಾ ಮೂಲದ ಗೋಬಿಂದ್ ಪಟ್ನಾಯಕ್ ಅವರು 2018 ರ ಭಯೋತ್ಪಾದಕ ದಾಳಿಯ ಭಾಗವೆಂದು ಪಾಕಿಸ್ತಾನ ಆರೋಪಿಸಿದೆ. ಪಟ್ನಾಯಕ್ ಅಫ್ಘಾನಿಸ್ತಾನದಲ್ಲಿ ಸಾಮರ್ಥ್ಯ ವೃದ್ಧಿಸುವ ಯೋಜನೆಗಳಲ್ಲಿ ತೊಡಗಿಸಿಕೊಂಡ ಕಂಪನಿಯ ಅಧ್ಯಕ್ಷರಾಗಿದ್ದರು. 1267 ಸಮಿತಿಗೆ ಸಲ್ಲಿಸಿದ ದಾಖಲೆಯಲ್ಲಿ, ಪಾಕಿಸ್ತಾನದ ರಾಜಕಾರಣಿ ಸಿರಾಜ್ ರೈಸಾನಿಯ ಮೇಲೆ ಜುಲೈ 13, 2018 ರಂದು ಬಲೂಚಿಸ್ತಾನದ ಮಾಸ್ತುಂಗ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಟ್ನಾಯಕ್ ಪಾತ್ರ ಇದೆ ಆರೋಪಿಸಿದೆ. ಈ ದಾಳಿಯಲ್ಲಿ 160 ಜನ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ದೂರಿದೆ.

ನಂತರ ಪಾಕಿಸ್ತಾನ, ಚೀನಾದೊಂದಿಗೆ ಸೇರಿ ಅಪ್ಪಾಜಿ ಅಂಗರಾ ವಿರುದ್ಧ '1267 ಅಲ್ ಖೈದಾ ನಿರ್ಬಂಧಗಳ ಸಮಿತಿ' ದೂರು ನೀಡಿದ್ದು,  ಸಾಫ್ಟ್‌ವೇರ್ ಡೆವಲಪರ್ ಅಪ್ಪಾಜಿ ಅಂಗರಾ ಅವರು 2017 ರ ಭಯೋತ್ಪಾದಕ ದಾಳಿಯ ಆರೋಪಿಯಾಗಿದ್ದಾರೆ. ಸಮಿತಿಗೆ ಸಲ್ಲಿಸಿದ ದಾಖಲೆಯಲ್ಲಿ, ಅಫ್ಘಾನಿಸ್ತಾನದ ಕಾಬೂಲ್‌ನ ಬ್ಯಾಂಕಿನಲ್ಲಿ ಸಾಫ್ಟ್‌ವೇರ್ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದ ಅಂಗಾರ, ಜುವಾ ಸಹಯೋಗದೊಂದಿಗೆ 2014 ರ ಡಿಸೆಂಬರ್ 16 ರಂದು ಪೇಶಾವರದಲ್ಲಿರುವ ಸೇನಾ ಶಾಲೆಯ ಮೇಲೆ ದಾಳಿ ನಡೆಸಿದ ಆರೋಪವಿದೆ. ಸೆಪ್ಟೆಂಬರ್ 2, 2016 ರಂದು ಪೇಶಾವರದ ವಾರ್ಸಾಕ್ ಕಾಲೋನಿಯಲ್ಲಿ ಬಾಂಬ್ ದಾಳಿ ನಡೆದಿತ್ತು. ಹೀಗೆ ಪಾಕಿಸ್ತಾನ, ನಾಲ್ವರು ಭಾರತೀಯ ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಯತ್ನಿಸುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com