ಪಾಕಿಸ್ತಾನ ಎಂದಿಗೂ ಭಾರತದೊಂದಿಗೆ ಯುದ್ಧ ಪ್ರಾರಂಭಿಸುವುದಿಲ್ಲ-ಇಮ್ರಾನ್ ಖಾನ್ 

ಕಾಶ್ಮೀರ ವಿಚಾರವಾಗಿ ಪರಮಾಣು ಶಕ್ತ ರಾಷ್ಟ್ರಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿರುವಂತೆ ಪಾಕಿಸ್ತಾನ ಎಂದಿಗೂ ಭಾರತದೊಂದಿಗೆ ಯುದ್ಧ ಆರಂಭಿಸುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಲಾಹೋರ್ : ಕಾಶ್ಮೀರ ವಿಚಾರವಾಗಿ ಪರಮಾಣು ಶಕ್ತ ರಾಷ್ಟ್ರಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿರುವಂತೆ ಪಾಕಿಸ್ತಾನ ಎಂದಿಗೂ ಭಾರತದೊಂದಿಗೆ ಯುದ್ಧ ಆರಂಭಿಸುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಗೌರ್ವನರ್ ಹೌಸ್ ನಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಹಾಗೂ ಪಾಕಿಸ್ತಾನ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳಾಗಿದ್ದು, ನಾವು ಎಂದಿಗೂ ಯುದ್ಧ ಪ್ರಾರಂಭಿಸುವುದಿಲ್ಲ. ಒಂದು ವೇಳೆ ಪರಿಸ್ಥಿತಿ  ಕೈ ಮೀರಿದರೆ ವಿಶ್ವವೇ ಅಪಾಯವನ್ನು ಎದುರಿಸಬೇಕಾಗುತ್ತದೆ. ಯಾವುದೇ ತೊಂದರೆಗೂ ಯುದ್ದವೇ ಪರಿಹಾರವಲ್ಲಾ ಎಂದರು.

ಯಾವುದೇ ಸಮಸ್ಯೆಗೂ ಯುದ್ದವೇ ಪರಿಹಾರವಲ್ಲಾ ಎಂಬುದನ್ನು ಭಾರತಕ್ಕೆ ಹೇಳುತ್ತೇನೆ. ಯುದ್ದದಿಂದ ಗೆದ್ದವರು, ಸೋತವರು ಇಬ್ಬರು ಕಳೆದುಕೊಳ್ಳುತ್ತಾರೆ. ಯುದ್ದದಿಂದ ಇನ್ನಿತರ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.

ಜನವರಿ 2016ರಲ್ಲಿ ಪಠಾಣ್ ಕೋಟ್  ವಾಯುನೆಲೆ ಮೇಲೆ ದಾಳಿ ನಂತರ ಪಾಕಿಸ್ತಾನದ ಜೊತೆಗೆ ಭಾರತ ಸಂಪರ್ಕದಲ್ಲಿ ಇಲ್ಲ, ಮಾತುಕತೆ, ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಸ್ಥಗಿತಗೊಳಿಸಿದೆ. 

ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಭಾರತದ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಉದ್ಬವಿಸಿತ್ತು. ಇದರ ಪ್ರತೀಕಾರ ಎಂಬಂತೆ ಫೆಬ್ರವರಿ 26 ರಂದು ಬಾಲಕೋಟ್ ನಲ್ಲಿ ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿತ್ತು. ಮಾರನೇ ದಿನ ನಡೆದ ಬಾಹ್ಯಾಕಾಶ ಕಾದಾಟದಲ್ಲಿ ಭಾರತದ ಮಿಗ್ -21 ಯುದ್ದ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು.ಅದರ ಪೈಲಟ್ ನನ್ನು ಸೆರೆ ಹಿಡಿಯಲಾಗಿತ್ತು. 

ಪ್ರಧಾನಿ ನರೇಂದ್ರಮೋದಿ ಅವರೊಂದಿಗಿನ ಈ ಹಿಂದಿನ ದೂರವಾಣಿ ಸಂಭಾಷಣೆಯನ್ನು ನೆನಪು ಮಾಡಿಕೊಂಡ ಇಮ್ರಾನ್ ಖಾನ್, ಭಾರತ ಹಾಗೂ ಪಾಕಿಸ್ತಾನದ ನಡುವಣ ಪರಿಸ್ಥಿತಿಯನ್ನು ಬದಲಾವಣೆ ಮಾಡಬೇಕಾಗಿದೆ. ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದೆ. ಆದರೆ ಮಾತುಕತೆಗೆ ಭಾರತದಿಂದ ಯಾವುದೇ ಪ್ರಯತ್ನ ನಡೆಯಲಿಲ್ಲ ಎಂದು ಹೇಳಿದರು. 

ಪಾಕಿಸ್ತಾನದಲ್ಲಿರುವ ಸಿಖ್ ಸಮುದಾಯದ ಧಾರ್ಮಿಕ ಸ್ಥಳಗಳಿಗೆ ಆಗಮಿಸುವವರಿಗೆ ಬಹುಹಂತದ ವೀಸಾ ನೀಡುವುದಾಗಿ ಇಮ್ರಾನ್ ಖಾನ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com