2030 ರ ವೇಳೆಗೆ 26 ದಶಲಕ್ಷ ಹೆಕ್ಟೇರ್ ಬರಡು ಭೂಮಿಯ ಪುನಶ್ಚೇತನ: ಪ್ರಧಾನಿ ಮೋದಿ ಘೋಷಣೆ

ಮುಂದಿನ 10 ವರ್ಷದೊಳಗೆ 21 ರಿಂದ 26 ದಶಲಕ್ಷ ಹೆಕ್ಟೇರ್ ಅನುತ್ಪಾದಕ ಭೂಮಿಯನ್ನು ಪುನಶ್ಚೇತನಗೊಳಿಸುವ ಮಹತತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Published: 10th September 2019 10:58 AM  |   Last Updated: 10th September 2019 10:58 AM   |  A+A-


UN conference

ವಿಶ್ವಸಂಸ್ಥೆ ಸಮ್ಮೇಳನ

Posted By : Srinivasamurthy VN
Source : UNI

ನವದೆಹಲಿ: ಮುಂದಿನ 10 ವರ್ಷದೊಳಗೆ 21 ರಿಂದ 26 ದಶಲಕ್ಷ ಹೆಕ್ಟೇರ್ ಅನುತ್ಪಾದಕ ಭೂಮಿಯನ್ನು ಪುನಶ್ಚೇತನಗೊಳಿಸುವ ಮಹತತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ಕಾಪ್ 14 ಸಮ್ಮೇಳನದ ಉನ್ನತ ಮಟ್ಟದ ವಿಭಾಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ “ಉತ್ಪಾದನಾ ಸಾಮರ್ಥ್ಯ ಕಳೆದುಕೊಂಡಿರುವ 21 ರಿಂದ 26 ಹೆಕ್ಟೇರ್ ಭೂಮಿಯನ್ನು 2030 ರೊಳಗೆ ಫಲದಾಯಕವಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲು ಬಯಸುತ್ತೇನೆ" ಎಂದು ಹೇಳಿದರು. ಸೆಪ್ಟೆಂಬರ್ 2 ರಂದು ಪ್ರಾರಂಭವಾಗಿರುವ ಕಾಪ್ 14 ಸಮ್ಮೇಳನ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 13 ರಂದು ಕೊನೆಗೊಳ್ಳಲಿದೆ.

ಕಳೆದ 2 ವರ್ಷಗಳಿಂದ ಭಾರತದ ಅಧ್ಯಕ್ಷತೆಯಲ್ಲಿ ಕಾಪ್ 14 ಸಮ್ಮೇಳನ ನಡೆಯುತ್ತಿದೆ "ಎರಡು ವರ್ಷಗಳ ಅವಧಿಗೆ ಕಾಪ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಪರಿಣಾಮಕಾರಿ ಕೊಡುಗೆ ನೀಡಲು ಭಾರತ ಚಿಂತನೆ ನಡೆಸಿದೆ" ಎಂದು ಪ್ರಧಾನಿ ಹೇಳಿದರು. ಸಚಿವರು ಮತ್ತು ಸರ್ಕಾರಗಳು, ಸರ್ಕಾರೇತರ ಮತ್ತು ಅಂತರ ಸರ್ಕಾರಿ ಸಂಸ್ಥೆಗಳ ಪ್ರತಿನಿಧಿಗಳು, 197 ಸದಸ್ಯ ರಾಷ್ಟ್ರಗಳ ವಿಜ್ಞಾನಿಗಳು, ಮಹಿಳೆಯರು ಮತ್ತು ಯುವಕರನ್ನು ಒಳಗೊಂಡ ಅಂದಾಜು 7,200 ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ಇದು ಏಕ-ಬಳಕೆಯ ಪ್ಲಾಸ್ಟಿಕ್‌ಗೆ ವಿದಾಯ ಹೇಳುವ ಸಮಯ. ಮುಂಬರುವ ವರ್ಷಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗೆ ಅಂತ್ಯ ಹಾಡಲು ನಮ್ಮ ಸರ್ಕಾರ ಘೋಷಿಸಿದೆ” ಎಂದು ಹೇಳಿದರು. ಜಾಗತಿಕ ತಾಪಮಾನ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಮಸ್ಯೆಗಳನ್ನು ಉಲ್ಲೇಖಿಸಿದ ಮೋದಿ, "ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯತೆಯ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಸಹಕಾರಕ್ಕಾಗಿ ಉಪಕ್ರಮಗಳನ್ನು ಪ್ರಸ್ತಾಪಿಸಲು ಭಾರತ ಸಂತಸಪಡುತ್ತದೆ" ಎಂದು ಹೇಳಿದರು.

"ಹವಾಮಾನ ಬದಲಾವಣೆಯು ಭೂ ಕುಸಿತಕ್ಕೆ ಕಾರಣವಾಗಿದೆ. ಅನುತ್ಪಾದಕರ ಭೂಮಿಯನ್ನು ಪುನಶ್ಚೇತನಗೊಳಿಸುವ ಸಂದರ್ಭದಲ್ಲೇ ನೀರಿನ ಕೊರತೆಯನ್ನು ಸಹ ಪರಿಹರಿಸಲಾಗುವುದು ನೀರಿನ ಪುನರ್ಭರ್ತಿಯ ವರ್ಧನೆ, ನೀರಿನ ಹರಿವನ್ನು ನಿಧಾನಗೊಳಿಸುವುದು, ಮಣ್ಣಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಮತ್ತು ಸಮಗ್ರ ಭೂ ತಂತ್ರದ ಎಲ್ಲಾ ಭಾಗಗಳು ಈ ಯೋಜನೆಯ ಅಂಶಗಳಾಗಿವೆ”ಎಂದು ಮೋದಿ ಹೇಳಿದರು. ಶಾಂತಿ ಮಂತ್ರವನ್ನು ಉಲ್ಲೇಖಿಸಿದ ಮೋದಿ, "ಆಕಾಶ, ಭೂಮಿ, ನೀರಿಗಾಗಿ ಪ್ರಾರ್ಥಿಸಿ, ಇವುಗಳು ಸಮೃದ್ಧಿಯಾಗಿದ್ದರೆ ನಾವು ಏಳಿಗೆ ಹೊಂದುತ್ತೇವೆ" ಎಂದು ತಮ್ಮ ಭಾಷಣದ ಕೊನೆಯಲ್ಲಿ ತಿಳಿಸಿದರು. ಇದಕ್ಕೂ ಮುನ್ನ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಕಾಪ್ 14 ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp