ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತ ಹಾಲು ದುಬಾರಿ, ಲೀಟರ್ ಗೆ ಬರೋಬ್ಬರಿ 140 ರೂ.

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ತಾರಕಕ್ಕೇರಿದ್ದು, ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಇದೀಗ ಕುಡಿಯುವ ಹಾಲಿನ ದರ ಪೆಟ್ರೋಲ್ ದರವನ್ನೇ ಮೀರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರಾಚಿ: ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ತಾರಕಕ್ಕೇರಿದ್ದು, ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು, ಇದೀಗ ಕುಡಿಯುವ ಹಾಲಿನ ದರ ಪೆಟ್ರೋಲ್ ದರವನ್ನೇ ಮೀರಿಸಿದೆ.

ಭಾರತದಲ್ಲಿ ಒಂದು ಲೀಟರ್ ಹಾಲು ಗರಿಷ್ಠ ಎಂದರೂ 35 ರಿಂದ 40 ರೂ ಗಳಿರಬಹುದು. ಆದರೆ ಭಾರತದ ವಿರುದ್ಧ ಸದಾ ಕಾಲ ಕಾಲು ಕೆರೆಯುವ ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲು ಬರೊಬ್ಬರಿ 140 ರೂ. ಗಳಾಗಿದೆ.

ಇತ್ತೀಚೆಗಷ್ಟೇ ಕರಾಚಿಯಲ್ಲಿ ನಡೆದ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಹಾಲಿಗೆ ತೀವ್ರ ಬೇಡಿಕೆ ಮತ್ತು ಕೊರತೆ ಸೃಷ್ಟಿಯಾಗಿತ್ತು. ಹೀಗಾಗಿ ಪಾಕಿಸ್ತಾನದ ಕರಾಚಿ ಮತ್ತು ಸಿಂಧ್​ ಪ್ರಾಂತ್ಯದಲ್ಲಿ ಹಾಲಿನ ಬೆಲೆ 140 ರೂ.ಗೆ ತಲುಪಿತ್ತು. ಅಚ್ಚರಿ ಎಂದರೆ ಇಲ್ಲಿ ಒಂದು ಲೀಟರ್ ಪೆಟ್ರೋಲ್​ 113 ರೂ. ಗೆ ಮತ್ತು ಒಂದು ಲೀಟರ್ ಡೀಸೆಲ್​ 91 ರೂ.ಗೆ ಮಾರಾಟವಾಗುತ್ತಿದೆ.

ಮೊಹರಂ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವವರಿಗೆ ಹಾಲು, ಜ್ಯೂಸ್​ ಮತ್ತು ತಣ್ಣನೆಯ ನೀರನ್ನು ಒದಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ 120 ರಿಂದ 140 ರೂ.ವರೆಗೆ ತಲುಪಿತ್ತು. ಈ ಕುರಿತಂತೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದ್ದು, ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಾಲಿನ ಬೆಲೆ ಇಷ್ಟು ದುಬಾರಿಯಾಗಿದೆ ಎಂದು ಹೇಳಲಾಗಿದೆ.

ಇನ್ನು ಕರಾಚಿ ಆಯುಕ್ತ ಇಫ್ತಿಕಾರ್ ಶಲ್ಲ್ವಾನಿ ಅವರು ಹಾಲಿನ ದರ ನಿಗದಿ ಮಾಡುವ ಅಧಿಕಾರ ಹೊಂದಿದ್ದು, ಮೊಹರಂ ಆಚರಣೆ ವೇಳೆ ಹಾಲಿನ ದರ 140 ರೂ ಗಡಿ ದಾಟಿದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದೆ. ಪ್ರಸ್ತುತ ಕರಾಚಿಯಲ್ಲಿ ಹಾಲಿನ ದರವನ್ನು ಸ್ಥಳೀಯ ಜಿಲ್ಲಾಡಳಿತವೇ 94 ರೂ. ಗಳೆಂದು ನಿಗದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com