ಕಾಶ್ಮೀರಿಗಳು ಭಾರತದ ವಿರುದ್ಧ ತಿರುಗಿಬಿದ್ದರೆ ಉಗ್ರವಾದ ಮತ್ತಷ್ಟು ಹೆಚ್ಚಳ: ಇಮ್ರಾನ್ ಖಾನ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರಿಗಳಿಗೆ ನಿರಾಶೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರಿಗಳಿಗೆ ನಿರಾಶೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.

ಕಾಶ್ಮೀರಿಗಳಿಗೆ ಬೆಂಬಲ ನೀಡುವುದಕ್ಕಾಗಿ ಇಂದು  ಪಾಕ್ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಾಫರ್ ಬಾದ್ ನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಅಂತರಾಷ್ಟ್ರೀಕರಣಗೊಳಿಸಲಾಗುತ್ತಿದೆ. ಈ ವಿಚಾರವನ್ನು ಯೂರೋಪಿಯನ್ ಮತ್ತು ಬ್ರಿಟಿಷ್ ಸಂಸತ್ತಿನಲ್ಲೂ ಚರ್ಚೆಯಾಗಿದೆ ಎಂದರು.

ನಾನು ಮುಂದಿನ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಕಾಶ್ಮೀರಿಗಳಿಗೆ ನಿರಾಶೆಯಾಗಲು ಬಿಡುವುದಿಲ್ಲ. ಕಾಶ್ಮೀರಿಗಳ ಹಕ್ಕುಗಳ ಪರವಾಗಿ ನಾನು ನಿಲ್ಲುತ್ತೇನೆ ಎಂದರು. ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನು ಉದ್ದೇಶಿಸಿ ಇಮ್ರಾನ್​ ಮಾತನಾಡಲಿದ್ದಾರೆ.

ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು ಆಂತರಿಕ ವಿಚಾರ ಎನ್ನುತ್ತಿರುವ ಭಾರತ ವಿರುದ್ಧ ವಾಗ್ದಾಳಿ ನಡೆಸಿದ ಪಾಕ್ ಪ್ರಧಾನಿ, ಈ ವಿಚಾರದಲ್ಲಿ ಭಾರತ ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಟೀಕಿಸಿದರು.

ವಿಶ್ವಸಂಸ್ಥೆಯ ನಿರ್ಣಯಗಳಂತೆ ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಬೇಕು. ಇಸ್ಲಾಮಿಕ್ ಸಹಕಾರ ಸಂಘಟನೆ ಮತ್ತು ಇತರೆ 58 ರಾಷ್ಟ್ರಗಳು ಪಾಕಿಸ್ತಾನದ ಪರವಾಗಿದ್ದು, ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂ ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಶ್ಮೀರಿಗಳು ಭಾರತದ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದರೆ ಉಗ್ರವಾದ ಮತ್ತಷ್ಟು ಹೆಚ್ಚಾಗಲಿದೆ ಎಂದು ನಾನು ಈ ಮೂಲಕ ಎಚ್ಚರಿಸುತ್ತಿದ್ದೇನೆ. ಜನರು ಬೇಸರಗೊಂಡಾಗ, ಅವಮಾನಕ್ಕೆ ಒಳಗಾಗುವುದಕ್ಕಿಂತ ಸಾಯುವುದು ಉತ್ತಮ ಎಂದು ಅವರು ನಿರ್ಧರಿಸುತ್ತಾರೆ ಎಂದು ಪಾಕ್ ಪ್ರಧಾನಿ ಹೇಳಿದರು.

20 ವರ್ಷದ ಕಾಶ್ಮೀರಿ ಯುವಕ ತನ್ನಷ್ಟಕ್ಕೆ ತಾನೇ ಶಸ್ತ್ರಾಸ್ತ್ರ ಮತ್ತು ಬಾಂಬ್​ಗಳನ್ನು ತೆಗೆದುಕೊಂಡು ಪುಲ್ವಾಮದಲ್ಲಿ ದಾಳಿ ಮಾಡಿದ. ಆದರೆ, ಭಾರತ ನಮ್ಮ ವಿರುದ್ಧ ಆರೋಪ ಮಾಡಿ, ನಮ್ಮ ಮೇಲೆ ಬಾಲಾಕೋಟ್​ ವೈಮಾನಿಕ ದಾಳಿ ಮಾಡಿತು. ನಾವು ಅಭಿನಂದನ್​​​ ವರ್ಧಮಾನ್​ರನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಆದರೆ, ನಮಗೆ ಯುದ್ಧ ಬೇಕಿಲ್ಲ ಎಂಬ ಕಾರಣಕ್ಕೆ ಬಿಟ್ಟು ಕಳುಹಿಸಿದೆವು. ಆದರೆ, ಅಂತಾರಾಷ್ಟ್ರೀಯ ಒತ್ತಡದಿಂದ ಬಿಟ್ಟು ಕಳುಹಿಸದರು ಎಂದು ಮೋದಿ ತಮ್ಮ ದೇಶದ ಜನತೆಯ ಬಳಿ ಹೇಳಿಕೊಂಡಿದ್ದಾರೆ. ಆದರೆ, ಅದು ನಿಜವಲ್ಲ. ಪಾಕಿಸ್ತಾನ ಎಂದಿಗೂ ಸಾವಿಗೆ ಹೆದರುವುದಿಲ್ಲ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com