ಕಾಶ್ಮೀರ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡುಕೊಳ್ಳಿ: ಭಾರತ-ಪಾಕ್ ಗೆ ಡೊನಾಲ್ಡ್ ಟ್ರಂಪ್ ಸಲಹೆ 

ಎರಡು ಪರಮಾಣು ಶಸ್ತ್ರಸಜ್ಜಿತ ನೆರೆ ದೇಶಗಳಿಗೆ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ, ಆದರೆ ಎರಡೂ ದೇಶಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. 
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಕಾಶ್ಮೀರ ವಿವಾದ ಕುರಿತು ಭಾರತ ಮತ್ತು ಪಾಕಿಸ್ತಾನದ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಎರಡು ಪರಮಾಣು ಶಸ್ತ್ರಸಜ್ಜಿತ ನೆರೆ ದೇಶಗಳಿಗೆ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ, ಆದರೆ ಎರಡೂ ದೇಶಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.


ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಹೊರಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಉಭಯ ನಾಯಕರು ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹೊಡೆದೋಡಿಸುವ ಬಗ್ಗೆ ಮತ್ತು ಭಾರತ-ಅಮೆರಿಕಾ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಬಗ್ಗೆ ಮಾತುಕತೆ ನಡೆಸಿದ್ದರು.


ಕಾಶ್ಮೀರದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ್ದನ್ನು ಪಾಕಿಸ್ತಾನ ವಿರೋಧಿಸುತ್ತಿದ್ದು,  ಅದನ್ನು ಅಂತಾರಾಷ್ಟ್ರೀಯಗೊಳಿಸಿ ಅಂತಾರಾಷ್ಟ್ರೀಯ ವೇದಿಕೆ ಮೂಲಕ ಸಮಸ್ಯೆ ಬಗೆಹರಿಸಲು ಒತ್ತಾಯಿಸುತ್ತಿದೆ. ಆದರೆ ಭಾರತ, ಇದು ಸಂಪೂರ್ಣವಾಗಿ ಆಂತರಿಕ ವಿಚಾರ, ಇದರಲ್ಲಿ ಬೇರೆ ರಾಷ್ಟ್ರಗಳ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಹೇಳುತ್ತಿದೆ.


ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಮುನ್ನ ಭಾರತ ಮತ್ತು ಪಾಕಿಸ್ತಾನ ದೇಶಗಳ ನಾಯಕರೊಂದಿಗೆ ತಾನು ನಡೆಸಿದ ಮಾತುಕತೆ ಅತ್ಯಂತ ಫಲಪ್ರದದಾಯಕವಾಗಿತ್ತು. ಎರಡೂ ದೇಶಗಳೊಂದಿಗೆ ಕಾಶ್ಮೀರ ವಿವಾದ ಕುರಿತು ಚರ್ಚಿಸಿದ್ದೇನೆ, ನನ್ನಿಂದಾದ ಸಹಾಯ ಮಾಡಲು, ಅದು ನಿರ್ಣಯವಾಗಿರಲಿ ಅಥವಾ ಮಧ್ಯಸ್ಥಿಕೆಯಾಗಿರಲಿ ಯಾವುದೇ ಸಹಾಯ ಮಾಡಲು ಸಾಧ್ಯ ಎಂದು ಹೇಳಿದ್ದೇನೆ, ಎರಡೂ ದೇಶಗಳ ಮುಖ್ಯಸ್ಥರು ನನಗೆ ಆತ್ಮೀಯ ಸ್ನೇಹಿತರು, ಎರಡು ಪ್ರಬಲ ಪರಮಾಣು ಸಜ್ಜಿತ ದೇಶಗಳು ಕುಳಿತು ಚರ್ಚೆ ಮಾಡಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದರು.


ಡೊನಾಲ್ಡ್ ಟ್ರಂಪ್ ಮಾತಿಗೆ ಭಾರತದ ನಿಲುವೇನು ಎಂದು ಕೇಳಲು ಇಲ್ಲಿನ ಅಧಿಕಾರಿಗಳನ್ನು ಸುದ್ದಿಗಾರರು ಸಂಪರ್ಕಿಸಿದರು.ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಪಾಕಿಸ್ತಾನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಯಾವಾಗಲೂ ಸಿದ್ಧವಿದೆ, ಆದರೆ ಅದು ಭಯೋತ್ಪಾದಕರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದಾಗ ಮಾತ್ರ, ಅಂತಹ ಯಾವುದೇ ದಿಟ್ಟ ಕ್ರಮ ಪಾಕಿಸ್ತಾನ ತೆಗೆದುಕೊಳ್ಳುತ್ತಿರುವುದು ನಮಗೆ ಕಾಣುತ್ತಿಲ್ಲ ಎಂದರು.


ಭಾರತ-ಪಾಕ್ ಮಧ್ಯೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ನಾಲ್ಕನೇ ಬಾರಿಗೆ ಹೇಳುತ್ತಿದ್ದಾರೆ. ನಾಳೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮೋದಿ ಮತ್ತು ಇಮ್ರಾನ್ ಖಾನ್ ಮಾತನಾಡಲಿದ್ದು ಅಲ್ಲಿ ಏನು ಹೇಳಲಿದ್ದಾರೆ ಎಂಬುದು ಕುತೂಹಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com