ಬ್ಲೂಮ್ ಬರ್ಗ್ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿರುವುದು
ಬ್ಲೂಮ್ ಬರ್ಗ್ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿರುವುದು

ಜಾಗತಿಕ ಉದ್ಯಮಿಗಳೇ ನಿಮಗಿದೋ ಸುವರ್ಣಾವಕಾಶ, ಭಾರತದಲ್ಲಿ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ

ಜಾಗತಿಕ ಮಟ್ಟದ ಹೂಡಿಕೆದಾರರು ಭಾರತ ದೇಶದಲ್ಲಿ ಉದ್ಯಮ ವಲಯದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನ್ಯೂಯಾರ್ಕ್: ಜಾಗತಿಕ ಮಟ್ಟದ ಹೂಡಿಕೆದಾರರು ಭಾರತ ದೇಶದಲ್ಲಿ ಉದ್ಯಮ ವಲಯದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.


ಇತ್ತೀಚೆಗೆ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ದರವನ್ನು ಇಳಿಕೆ ಮಾಡಿದ್ದು, ಇದರಿಂದ ಉದ್ಯಮ ವಲಯದಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶಗಳು ಮತ್ತು ಉದ್ಯಮ ಸ್ನೇಹಿ ವಾತಾವರಣ ಭಾರತದಲ್ಲಿ ಸೃಷ್ಟಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.


ಅವರು ನಿನ್ನೆ ಅಮೆರಿಕಾದ ನ್ಯೂಯಾರ್ಕ್ ನ ಬ್ಲೂಮ್ ಬರ್ಗ್ ಬ್ಯುಸಿನೆಸ್ ಫೋರಂನಲ್ಲಿ ಮಾತನಾಡಿ, ಉದ್ಯಮದಲ್ಲಿ ಹೂಡಿಕೆ ಮಾಡಲು ಭಾರತ ಸುವರ್ಣಾವಕಾಶಗಳನ್ನು ತೆರೆದಿದೆ. ಹೆಚ್ಚು ಆದಾಯ ಮತ್ತು ಲಾಭ ಬರುವ ಮಾರುಕಟ್ಟೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದ ಉದ್ಯಮಿಗಳು ಬಯಸುತ್ತಿರುವಿರಾದರೆ ಭಾರತಕ್ಕೆ ಬನ್ನಿ, ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಯಸುತ್ತೀರೋ ಅದಕ್ಕೆ ಕೂಡ ಭಾರತದಲ್ಲಿ ಅವಕಾಶವಿದೆ, ವಿಶ್ವದ ಅತಿದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುತ್ತೀರೋ ಅದಕ್ಕೆ ಕೂಡ ಭಾರತ ಉತ್ತಮ ವೇದಿಕೆಯಾಗಿದೆ ಎಂದು ಕರೆ ನೀಡಿದರು.


ಭಾರತ ದೇಶದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಶಮನಗೊಳಿಸಲು, ಹೆಚ್ಚು ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 35ರಿಂದ ಶೇಕಡಾ 25.17ಕ್ಕೆ ಇಳಿಸಿತ್ತು. ಈ ಮೂಲಕ ತೆರಿಗೆ ರಂಗದಲ್ಲಿ ವಿಶ್ವದ ಪ್ರಮುಖ ಆರ್ಥಿಕ ದೇಶಗಳ ಸಮಕ್ಕೆ ಭಾರತ ಕೂಡ ಬಂದಂತಾಗಿದೆ.

ಭಾರತದಲ್ಲಿ ನಗರಗಳು ಕ್ಷಿಪ್ರವಾಗಿ ಆಧುನೀಕರಣಗೊಳ್ಳುತ್ತಿದ್ದು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುತ್ತಿದೆ, ನಾಗರಿಕ ಸ್ನೇಹಿ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ., ಹೀಗಾಗಿ ನಗರೀಕರಣದಲ್ಲಿ ಹೂಡಿಕೆ ಮಾಡಬೇಕೆಂದರು ಕೂಡ ಭಾರತದಲ್ಲಿ ಹಲವು ಅವಕಾಶಗಳಿವೆ. ಭಾರತ ಹಿಂದೆಂದಿಗಿಂತಲೂ ಹೆಚ್ಚಾಗಿ ರಕ್ಷಣಾ ಇಲಾಖೆಯಲ್ಲಿ ಹೂಡಿಕೆ ಮಾಡುತ್ತಿದ್ದು ಅದರಲ್ಲಿ ಕೂಡ ಹೂಡಿಕೆ ಮಾಡುವವರಿಗೆ ಅವಕಾಶಗಳಿವೆ, ಉದ್ಯಮವನ್ನು ಸುಲಭ ಮತ್ತು ಸರಳೀಕರಣಗೊಳಿಸಲು ತಮ್ಮ ಸರ್ಕಾರ 50 ಕಾನೂನುಗಳನ್ನು ರದ್ದುಪಡಿಸಿದೆ ಎಂದರು.


ನಮ್ಮ ಹೊಸ ಎನ್ ಡಿಎ-2 ಸರ್ಕಾರ ಬಂದು ಮೂರು ತಿಂಗಳಾಗಿದೆಯಷ್ಟೆ. ಇದು ಕೇವಲ ಆರಂಭ ಮಾತ್ರ. ಇನ್ನೂ ಮಾಡುವ ಕೆಲಸಗಳು ಸಾಕಷ್ಟಿದೆ. ಈ ಪಯಣದಲ್ಲಿ ಜಾಗತಿಕ ಉದ್ಯಮ ಅವಕಾಶಗಳ ಜೊತೆ ಸಹಭಾಗಿತ್ವ ವಹಿಸುತ್ತೇವೆ, ಇದು ನಿಮಗೊಂದು ಸುವರ್ಣಾವಕಾಶ ಎಂದು ಸಾರಿದರು.


2024-25ರ ವೇಳೆಗೆ ಭಾರತ ಆರ್ಥಿಕತೆಯಲ್ಲಿ 5 ಟ್ರಿಲಿಯನ್ ಡಾಲರ್ ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕಳೆದ 5 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸೇರ್ಪಡೆಯಾಗಿದೆ. ಇನ್ನೂ 4 ಟ್ರಿಲಿಯನ್ ಡಾಲರ್ ಗುರಿಯನ್ನು ಮುಟ್ಟಬೇಕಿದೆ. 


ನವೀಕರಣ ಇಂಧನ ಗುರಿಯಿರುವ 175 ಗಿಗಾ ವ್ಯಾಟ್ ನಲ್ಲಿ 120 ಗಿಗಾ ವ್ಯಾಟನ್ನು ಸಾಧಿಸಲಾಗಿದ್ದು ಭವಿಷ್ಯದಲ್ಲಿ 450 ಗಿಗಾ ವ್ಯಾಟ್ ಇಂಧನ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ ಭಾರತಕ್ಕೆ ವಿದೇಶಿ ನೇರ ಹೂಡಿಕೆಯಿಂದ 286 ಶತಕೋಟಿ ಡಾಲರ್ ಬಂದಿದೆ. ಅದು ಹಿಂದಿನ 20 ವರ್ಷಗಳಲ್ಲಿ ಸಿಕ್ಕಿರುವುದಕ್ಕಿಂತ ಅರ್ಧದಷ್ಟಾಗಿದೆ. ಅಷ್ಟರ ಮಟ್ಟಿಗೆ ಭಾರತದ ಆರ್ಥಿಕತೆ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಮಾತನಾಡುತ್ತಾ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com