ಸೌದಿ ಅರೇಬಿಯಾದಿಂದ ಇದೇ ಮೊದಲ ಬಾರಿಗೆ ಟೂರಿಸ್ಟ್ ವೀಸಾ

ಮಹತ್ವದ ಬೆಳವಣಿಗೆಯಲ್ಲಿ ಮೂಲಭೂತವಾದಿ ರಾಷ್ಟ್ರ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಸಾ ವಿತರಣೆಗೆ ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಿಯಾದ್: ಮಹತ್ವದ ಬೆಳವಣಿಗೆಯಲ್ಲಿ ಮೂಲಭೂತವಾದಿ ರಾಷ್ಟ್ರ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಸಾ ವಿತರಣೆಗೆ ಮುಂದಾಗಿದೆ. 

ಕಟ್ಟಾ ಮುಸ್ಲಿಂ ಮೂಲಭೂತವಾದಿ ರಾಷ್ಟ್ರವೆಂದೇ ಕರೆಯಲಾಗುತ್ತಿದ್ದ ಸೌದಿ ಅರೇಬಿಯಾ ಬದಲಾದ ಪರಿಸ್ಥಿತಿಯಲ್ಲಿ ಪ್ರಮುಖ ನಿರ್ಣಯ ಕೈಗೊಂಡಿದ್ದು, ಇದೇ ಮೊದಲ ಬಾರಿಗೆ ತನ್ನ ದೇಶದಿಂದ ಪ್ರವಾಸಿಗರ ವೀಸಾ ವಿತರಣೆ ಮಾಡುವುದಾಗಿ ಶುಕ್ರವಾರ ಘೋಷಣೆ ಮಾಡಿದೆ. 

ಇತ್ತೀಚೆಗೆ ತನ್ನ ದೇಶದ ತೈಲ ಸ್ಥಾವರಗಳ ಮೇಲೆ ಆದ ದಾಳಿ ಬೆನ್ನಲ್ಲೇ, ತೈಲದ ಆರ್ಥಿಕತೆ ಅವಲಂಬನೆ ಮುಗಿದ ನಂತರ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ರಾಜ ಮೊಹ್ಮದ್ ಬಿನ್ ಸಲ್ಮಾನ್ ಆಲೋಚನೆ ಮಾಡಿದ್ದು, ಪ್ರವಾಸೋದ್ಯಮದತ್ತ ಚಿತ್ತ ನೆಟ್ಟಿದ್ದಾರೆ. 

ಪ್ರವಾಸೋಧ್ಯಮ ಮುಖ್ಯ ಆರ್ಥಿಕ ಮೂಲವಾಗಬೇಕು ಎಂದು ಹೇಳಿರುವ ಅವರು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ, "ಸೌದಿ ಅರೇಬಿಯಾವನ್ನು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತಗೊಳಿಸುವುದು ನಮ್ಮ ದೇಶಕ್ಕೆ ಐತಿಹಾಸಿಕ ಕ್ಷಣ" ಎಂದು ಪ್ರವಾಸೋದ್ಯಮ ಇಲಾಖೆ ಮುಖ್ಯಸ್ಥ ಅಹ್ಮದ್ ಅಲ್- ಖತೀಬ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಲವತ್ತೊಂಬತ್ತು ದೇಶಗಳ ನಾಗರಿಕರಿಗೆ ಆನ್ ಲೈನ್ ವೀಸಾ ಅರ್ಜಿಗಳನ್ನು ಶನಿವಾರದಿಂದ ಸೌದಿ ಅರೇಬಿಯಾ ಆರಂಭಿಸಲಿದೆ. ಪ್ರವಾಸಿಗರು ಅಚ್ಚರಿಗೊಳ್ಳುತ್ತಾರೆ. ನಮ್ಮಲ್ಲಿ ಅಂಥ ಅದ್ಭುತ ಸ್ಥಳಗಳಿವೆ. ಐದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿವೆ. ಸ್ಥಳೀಯವಾದ ಸಂಸ್ಕೃತಿ ಹಾಗೂ ಪ್ರಾಕೃತಿಕ ಸೌಂದರ್ಯ ತಾಣಗಳಿವೆ ಎಂದು ಪ್ರವಾಸೋದ್ಯಮ ಮುಖ್ಯಸ್ಥರು ತಿಳಿಸಿದ್ದಾರೆ. ಇನ್ನು ವಿದೇಶಿ ಮಹಿಳೆಯರಿಗೆ ಸೌದಿ ಅರೇಬಿಯಾದ ಕಠಿಣ ವಸ್ತ್ರಸಂಹಿತೆಯಿಂದ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ. 

ಇನ್ನು ಪ್ರವಾಸಿಗರಿಗೆ ಪ್ರವೇಶವಿದೆಯಾದರೂ, ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರೆಯಲಿದೆ. ಇನ್ನೂ ಕೆಲ ಸಾಮಾಜಿಕ ಕಟ್ಟುಪಾಡುಗಳು ಪ್ರವಾಸಿಗರಿಗೆ ಕಠಿಣ ಎನಿಸುತ್ತದೆ. ಆದರೆ ರಾಜ ಮೊಹ್ಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾಗೆ ಬದಲಾವಣೆ ತರುವ ಪ್ರಯತ್ನದಲ್ಲಿ ಇದ್ದಾರೆ ಎಂದು ಅಹ್ಮದ್ ಅಲ್- ಖತೀಬ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com