ಭಾರತದಿಂದ ಅಮೆರಿಕಕ್ಕೆ 29 ಮಿಲಿಯನ್ ಡೋಸ್ ಔಷಧಿ ರಫ್ತು: ಮೋದಿ ಗ್ರೇಟ್ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕಕ್ಕೆ ಔಷಧಿ ಪೂರೈಕೆ ಮಾಡದಿದ್ದರೆ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಇದೀಗ ಭಾರತದಿಂದ 29 ಮಿಲಿಯನ್ ಡೋಸ್ ಔಷಧಿ ರಫ್ತಾದ ಬೆನ್ನಲ್ಲೇ ಪ್ರಧಾನಿ ಮೋದಿ ಗ್ರೇಟ್ ಎಂದು ಹೊಗಳಿದ್ದಾರೆ.
ಪ್ರಧಾನಿ ಮೋದಿ- ಡೊನಾಲ್ಡ್  ಟ್ರಂಪ್
ಪ್ರಧಾನಿ ಮೋದಿ- ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕಕ್ಕೆ ಔಷಧಿ ಪೂರೈಕೆ ಮಾಡದಿದ್ದರೆ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಇದೀಗ ಭಾರತದಿಂದ 29 ಮಿಲಿಯನ್ ಡೋಸ್ ಔಷಧಿ ರಫ್ತಾದ ಬೆನ್ನಲ್ಲೇ ಪ್ರಧಾನಿ ಮೋದಿ ಗ್ರೇಟ್ ಎಂದು ಹೊಗಳಿದ್ದಾರೆ.

ಮೂಲಗಳ ಪ್ರಕಾರ ಭಾರತದಿಂದ ಅಮೆರಿಕಕ್ಕೆ ಸುಮಾರು 29 ಮಿಲಿಯನ್ ಡೋಸ್ ಆ್ಯಂಟಿ ಮಲೇರಿಯಾ ಔಷಧಿ hydroxychloroquine ರಫ್ತಾಗಿದ್ದು, ಇದರ ಬೆನ್ನಲ್ಲೇ ಭಾರತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಡಿಹೊಗಳಿದ್ದಾರೆ. 

'ಭಾರತ ಅಮೆರಿಕಕ್ಕೆ 29 ಮಿಲಿಯನ್ ಗೂ ಅಧಿಕ ಡೋಸ್ ಔಷಧಿಗಳನ್ನು ರವಾನೆ ಮಾಡಿದ್ದು, ಇವಿಷ್ಟೇ ಅಲ್ಲ ಇನ್ನೂ ಸಾಕಷ್ಟು ಪ್ರಮಾಣದ ಔಷಧಿ ಭಾರತದಿಂದ ಅಮೆರಿಕಕ್ಕೆ ಬರಲಿದೆ. ನಾನು ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಮಾತನಾಡಿದ್ದು,  ಅವರೂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ನಿಜಕ್ಕೂ ಮೋದಿ ಗ್ರೇಟ್.. ನಿಜಕ್ಕೂ ಮೋದಿ ಒಳ್ಳೆಯವರು ಎಂದು ಹೇಳಿದ್ದಾರೆ.

ಈ ಹಿಂದೆ ಭಾರತ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದಿದ್ದರೆ, ಅಮೆರಿಕ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ. ಭಾರತ Hydroxychloroquine ಮೇಲಿನ ನಿರ್ಬಂಧವನ್ನು ತೆರವುಗೊಳಿಸದಿದ್ದರೆ ಪ್ರಧಾನಿ ಮೋದಿ ಅಮೆರಿಕದ ನಡೆಯಿಂದ ನಿಜಕ್ಕೂ  ಸರ್ಪೈಸ್ ಆಗುತ್ತಿದ್ದರು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ತನ್ನ ನಿಲುವು ಬದಲಿಸಿದ್ದ ಭಾರತ ಮಾನವೀಯ ನೆಲೆಗಟ್ಟಿನ ಮೇಲೆ ಕೊರೋನಾ ಪೀಡಿತ ದೇಶಗಳಿಗೆ ಔಷಧಿ ರವಾನಿಸುವುದಾಗಿ ಹೇಳಿತ್ತು. ಅದರಂತೆ ಇಂದು ಅಮೆರಿಕಕ್ಕೆ 29 ಮಿಲಿಯನ್ ಡೋಸ್ ಔಷಧಿಗಳನ್ನು ರವಾನೆ  ಮಾಡಿದೆ.

ಔಷಧಿಗಾಗಿ ಭಾರತಕ್ಕೆ ಅಮೆರಿಕ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳ ಮನವಿ
ಇನ್ನು ಭಾರತ ಸರ್ಕಾರ ರಫ್ತು ನಿಷೇಧಿಸಿರುವ Hydroxychloroquine ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳು ಭಾರತಕ್ಕೆ ದುಂಬಾಲು ಬೀಳುತ್ತಿವೆ. ಈ ಹಿಂದೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ  ಮಾಡಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಟ್ರಂಪ್ ಬಳಿಕ ಇದೀಗ 30 ರಾಷ್ಟ್ರಗಳ ಪ್ರಧಾನಿಗಳು ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಮನವಿ ಮಾಡಿವೆ. ಕೊರೋನಾ ವೈರಸ್ ಗೆ  ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿಷೇಧ ಹೇರಿತ್ತು.

ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಪಟ್ಟಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಮಲೇರಿಯಾ  ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು  ಯಾವುದೇ ವೈಜ್ಞಾನಿಕ ಸಂಶೋಧನೆ ಇದನ್ನು ಸಾಬೀತು ಮಾಡಿಲ್ಲ. ಆದರೆ ಫ್ರಾನ್ಲ್ ನಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆ್ಯಂಟಿ ಬಯಾಟಿಕ್ ಮಾದರಿಯಲ್ಲಿ ನೀಡಲಾಗಿದ್ದು, ಇದು ರೋಗಿಗಳಲ್ಲಿ ಗಮನಾರ್ಹ ಸಕಾರಾತ್ಮಕ  ಬದಲಾವಣೆ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ  ಕಾರ್ಯನಿರ್ವಹಿಸುತ್ತದೆ. ಅಮೆರಿಕ ಮಾತ್ರವಲ್ಲದೇ ದಕ್ಷಿಣ ಕೊರಿಯಾ ಕೂಡ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್ ಗೆ ಬದಲಿ ಔಷಧಿಯಾಗಿ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ವ್ಯಾಪಕ  ಬೇಡಿಕೆ ಸೃಷ್ಟಿಯಾಗಿದ್ದು, ಭಾರತ ಕೂಡ ಇದೇ ಕಾರಣಕ್ಕೆ ಈ ಔಷಧಿಯ ರಫ್ತು ನಿಷೇಧ ಮಾಡಿದೆ.

ಭಾರತದಲ್ಲಿಯೂ 550ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು ಇದೀಗ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತು ನಿಷೇಧಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com