ಕೊರೋನಾ ವೈರಸ್ ಗಿಂತ ಪಾಕ್ ನಲ್ಲಿ ಜನ ಹೆಚ್ಚಾಗಿ ಹಸಿವಿನಿಂದ ಸಾಯುತ್ತಿದ್ದಾರೆ, ಸಹಾಯ ಮಾಡಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಕೊರೋನಾ ವೈರಸ್ ನಿಂದಾಗಿ ವಿಶ್ವಾದ್ಯಂತ ಆರ್ಥಿಕತೆ ಸ್ಥಗಿತಗೊಂಡಿದ್ದು, ಪಾಕಿಸ್ತಾನದಲ್ಲಿ ಜನ ವೈರಸ್ ಗಿಂತ ಹೆಚ್ಚಾಗಿ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಕೊರೋನಾ ವೈರಸ್ ನಿಂದಾಗಿ ವಿಶ್ವಾದ್ಯಂತ ಆರ್ಥಿಕತೆ ಸ್ಥಗಿತಗೊಂಡಿದ್ದು, ಪಾಕಿಸ್ತಾನದಲ್ಲಿ ಜನ ವೈರಸ್ ಗಿಂತ ಹೆಚ್ಚಾಗಿ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಇಮ್ರಾನ್ ಖಾನ್ ಅವರು, 'ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತದ ಆರ್ಥಿಕತೆಯು ಸ್ಥಗಿತಗೊಂಡಿದೆ. ಒಂದು ಕಡೆ ಕೊರೊನಾವೈರಸ್ ವಿರುದ್ಧ ಹೋರಾಡುವ ಸವಾಲುಗಳು ಎದುರಾಗಿದ್ದರೆ, ಇನ್ನೊಂದು  ಕಡೆ ಆರ್ಥಿಕತೆಯನ್ನು ನಿರ್ವಹಿಸುವುದು ಕಠಿಣವಾಗಿದೆ. ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಜನರು ಹಸಿವಿನಿಂದ ಸಾಯುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ. ಸಾಲದ ರೂಪದಲ್ಲಿ ಪರಿಹಾರ ನೀಡಿ ಎಂದು ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

'ಪಾಕಿಸ್ತಾನದಲ್ಲಿ ಕೋವಿಡ್-19 ವಿರುದ್ಧದ ಹೊರಾಟದಲ್ಲಿ ನಾವು ಎರಡು ರೀತಿಯ ಪರಿಣಾಮಗಳನ್ನು ಎದುರು ನೋಡುತ್ತಿದ್ದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ಒಂದು ರೀತಿಯಾಗಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮತ್ತೊಂದು ರೀತಿಯಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು  ಮೊದಲು ಲಾಕ್‌ಡೌನ್ ಜಾರಿಗೊಳಿಸುವ ಮೂಲಕ ಕೊರೋನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ನಂತರ ಅದರಿಂದ ಪ್ರಭಾವಿತವಾದ ಆರ್ಥಿಕತೆಯನ್ನು ನಿರ್ವಹಿಸುತ್ತಿವೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮತ್ತು ಆರ್ಥಿಕ ಸವಾಲನ್ನು ಎದುರಿಸುವುದರ  ಜೊತೆಗಿನ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಅದು ಜನರ ಹಸಿವು ನೀಗಿಸುವುದು. ಪಾಕಿಸ್ತಾನದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಮೊದಲು ವೈರಸ್‌ನಿಂದ ಜನರು ಸಾಯುವುದನ್ನು ತಡೆಯುವುದು ಇಲ್ಲಿನ ಸವಾಲು, ಮತ್ತೊಂದೆಡೆ ಲಾಕ್​​ಡೌನ್ (Lockdown)  ನಂತರ  ಉದ್ಭವಿಸಿದ ಪರಿಸ್ಥಿತಿಗಳು ಅಂದರೆ ಹಸಿವಿನಿಂದ ಅವರನ್ನು ರಕ್ಷಿಸಬೇಕು. ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಲಭ್ಯವಿರುವ ಸಂಪನ್ಮೂಲಗಳಲ್ಲಿ ಭಾರಿ ಅಸಮಾನತೆಯಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಅಂತೆಯೇ ತಮ್ಮ ಸರ್ಕಾರವು ಪಾಕಿಸ್ತಾನದ ನಿರ್ಗತಿಕ ಜನರಿಗೆ ಹಸಿವನ್ನು ನೀಗಿಸಲು 8 ಬಿಲಿಯನ್ ಡಾಲರ್ ಪ್ಯಾಕೇಜ್ ನೀಡಿದೆ. ಈ ವಿಚಾರದಲ್ಲಿ ವಿವಿಧ ದೇಶಗಳ ಹೆಚ್ಚಿನ ಪ್ರಮಾಣದಲ್ಲಿ ಪ್ಯಾಕೇಜ್ ಘೋಷಣೆ ಮಾಡಿದೆ. ಆರೋಗ್ಯ ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು  ಅಭಿವೃದ್ಧಿಶೀಲ ರಾಷ್ಟ್ರಗಳು ಸಾಕಷ್ಟು ಹಣವನ್ನು ಹೊಂದಿಲ್ಲ ಮತ್ತು ಮತ್ತೊಂದೆಡೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಸಾವುಗಳನ್ನು ತಡೆಯುವ ಉಪಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಹಣಕಾಸು ಸಂಸ್ಥೆಗಳು  ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ವಿನಂತಿಸುತ್ತೇನೆ. ಪಾಕಿಸ್ತಾನ ಇದೀಗ ಕೊರೋನಾ ಮತ್ತು ಹಸಿವು ಎಂಬ ಎರಡು ವೈರಿಗಳೊಂದಿಗೆ ಸೆಣುಸುತ್ತಿದೆ. ಪಾಕಿಸ್ತಾನಕ್ಕೆ ಇದೀಗ ವಿಶ್ವ ಸಮುದಾಯ ಮತ್ತು ಅಂತಾರಾಷ್ಟ್ರೀಯ ವಿತ್ತ ಸಂಸ್ಥೆಗಳ ನೆರವು ಬೇಕಿದೆ ಎಂದು ಇಮ್ರಾನ್  ಹೇಳಿದ್ದಾರೆ.

ಇನ್ನು ಪಾಕಿಸ್ತಾನದಲ್ಲೂ ಮಾರಕ ಕೊರೋನಾ ವೈರಸ್ ಹಾವಳಿ ಜೋರಾಗಿದ್ದು, ಇಲ್ಲಿಯವರೆಗೆ ದೇಶದಲ್ಲಿ 5,183 ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಪ್ರಮುಖವಾಗಿ ಅದರಲ್ಲಿ ಅರ್ಧದಷ್ಟು ಪ್ರಕರಣಗಳು ಪಂಜಾಬ್ ಪ್ರಾಂತ್ಯದಿಂದಲೇ ದಾಖಲಾಗಿವೆ. ಇನ್ನು  ಪಾಕಿಸ್ತಾನದಲ್ಲಿ ಕೊರೋನಾ ವೈರಸ್ ಗೆ 86 ಮಂದಿ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com