ಕಳಪೆ ಗುಣಮಟ್ಟದ ಕಿಟ್ ರಫ್ತು ಆರೋಪ; ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸಿ: ಚೀನಾ ಮನವಿ

ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸುವಂತೆ ಚೀನಾ ಸರ್ಕಾರ ಇತರೆ ದೇಶಗಳಿಗೆ ಮನವಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸುವಂತೆ ಚೀನಾ ಸರ್ಕಾರ ಇತರೆ ದೇಶಗಳಿಗೆ ಮನವಿ ಮಾಡಿದೆ.

ಮಾರಕ ಕೊರೋನಾ ವೈರಸ್ ಗೆ ವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳು ಬಲಿಯಾಗುತ್ತಿದ್ದು, ಇದರ ನಡುವೆಯೇ ಚೀನಾದಲ್ಲಿ ಮೆಡಿಕಲ್ ಟೆಸ್ಟಿಂಗ್ ಕಿಟ್ ಗಳು ಮತ್ತು ಇತರೆ ವೈದ್ಯಕೀಯ ಪರಿಕರಗಳ ವ್ಯಾಪಾರ ಜೊರಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಅಲ್ಲಿನ ಕೆಲ ವ್ಯಾಪಾರಿಗಳು  ಭಾರತ ಸೇರಿದಂತೆ ವಿಶ್ವದ ಇತರೆ ಕೊರೋನಾ ಬಾಧಿತ ರಾಷ್ಟ್ರಗಳಿಗೆ ನಕಲಿ ಕಿಟ್ ಗಳನ್ನು ಸರಬರಾಜು ಮಾಡಿ ಲಾಭ ಮಾಡಿ ಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ಝಾವೋ ಲಿಜಿಯಾನ್ ಅವರು, ದೇಶದ ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸಿ ಎಂದು ಇತರೆ ದೇಶಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ ದೇಶದಿಂದ ವಿದೇಶಗಳಿಗೆ ರಫ್ತಾಗುವ ಪ್ರತೀಯೊಂದು  ವೈದ್ಯಕೀಯ ಪರಿಕರಗಳನ್ನು ಚೀನಾದ ಕಸ್ಟಮ್ಸ್ ಕಡ್ಡಾಯವಾಗಿ ಗುಣಮುಟ್ಟ ಪರೀಕ್ಷೆಗೆ ಒಳಪಡಿಸಬೇಕು ಎಂದು ಚೀನಾ ಸರ್ಕಾರ ಆದೇಶಿಸಿದೆ. ಅಲ್ಲದೆ ಒಂದು ವೇಳೆ ಕಳಪೆ ಗುಣಮಟ್ಟದ ಪರಿಕರಗಳು ಕಂಡುಬಂದರೆ ಅಂತಹ ಪರಿಕರ ತಯಾರಿಕಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ  ಜರುಗಿಸುವಂತೆ ಚೀನಾ ಸರ್ಕಾರ ನಿರ್ದೇಶನ ನೀಡಿದೆ. 

ವಿಶ್ವಾದ್ಯಂತ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿರುವಂತೆಯೇ ಇತ್ತ ಚೀನಾದ ವೈದ್ಯಕೀಯ ಪರಿಕರಗಳಿಗೂ ವಿಶ್ವಾದ್ಯಂತ ವ್ಯಾಪಕ ಬೇಡಿಕೆ ಹೆಚ್ಚಾಗಿದೆ. 

ಕಳಪೆ ಕಿಟ್‌ಗಳನ್ನು ನೀಡುತ್ತಿದೆಯಾ ಚೀನಾ?
ಚೀನಾ ದೇಶ ಪ್ರಸ್ತುತ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ವಿಶ್ವದ ಮುಖ್ಯ ಪೂರೈಕೆದಾರನಾಗಿದ್ದು, ಆದರೆ, ಈ ದೇಶ ಭಾರತಕ್ಕೆ ಕೆಲವು ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಳುಹಿಸಿದೆ, ಅದು ನಿರುಪಯುಕ್ತವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಆಂಗ್ಲ  ಮಾಧ್ಯಮವೊಂದು ವರದಿ ಮಾಡಿದ್ದು, ಭಾರತದ ದೊಡ್ಡ ಖಾಸಗಿ ಕಂಪನಿಗಳಿಂದ ದೇಣಿಗೆಯಾಗಿ ಸ್ವೀಕರಿಸಲ್ಪಟ್ಟ ಕಿಟ್ ಗಳ ಗುಣಮಟ್ಟ ಕಳಪೆಯಾಗಿದ್ದು, ಉಪಯೋಗಕ್ಕೆ ಬಾರದ್ದು ಎನ್ನಲಾಗಿದೆ. ಅಲ್ಲದೆ ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾದ ಸರಕುಗಳು ಎಂದು ವರದಿಯಲ್ಲಿ  ಹೇಳಲಾಗಿದೆ, ಚೀನಾ ಈ ಕಿಟ್‌ಗಳನ್ನು ಭಾರತ ಸರ್ಕಾರಕ್ಕೆ ದಾನವಾಗಿ ನೀಡಿದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ಏಪ್ರಿಲ್ 5 ರಂದು ಚೀನಾದಿಂದ ಭಾರತಕ್ಕೆ ಆಗಮಿಸಿದ 1,70,000 ಪಿಪಿಇ ಕಿಟ್‌ಗಳಲ್ಲಿ ಸುಮಾರು 50,000 ಕಿಟ್ ಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ. 30,000 ಮತ್ತು 10,000 ಪಿಪಿಇ ಕಿಟ್‌ಗಳನ್ನು ಹೊಂದಿರುವ ಎರಡು ಸಣ್ಣ ಸರಕುಗಳು ಸಹ ಪರೀಕ್ಷೆಗಳಲ್ಲಿ  ವಿಫಲವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಿಟ್‌ಗಳನ್ನು ನಮ್ಮ ದೇಶದ ವೈದ್ಯರಿಗೆ ಪೂರೈಕೆ ಮಾಡುವುದು ಸರಿಯಲ್ಲ. ಇದರಿಂದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರೂ ಸಹ ಸೋಂಕಿಗೆ ಒಳಗಾಗುವ ಸಾಧ್ಯತೆ  ಇದೆ ಎಂದು ಹಲವರು ಎಚ್ಚರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com