ಚೀನಾದ ಜೆ-20ಗೆ ರಾಫೆಲ್ ಸಮ ಅಲ್ಲವೇ ಅಲ್ಲ: ಬೆನ್ನು ತಟ್ಟಿಕೊಂಡ ಗ್ಲೋಬಲ್ ಟೈಮ್ಸ್

ಭಾರತದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಯುದ್ಧ ವಿಮಾನ ಚೀನಾದ ಜೆ-20 ಫೈಟರ್ ಜೆಟ್ ಗೆ ಸಮ ಅಲ್ಲವೇ ಅಲ್ಲ ಎಂದು ಚೀನಾ ಹೇಳಿಕೊಂಡಿದೆ.
ರಾಫೆಲ್ ವರ್ಸಸ್ ಜೆ-20
ರಾಫೆಲ್ ವರ್ಸಸ್ ಜೆ-20

ನವದೆಹಲಿ: ಭಾರತದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಯುದ್ಧ ವಿಮಾನ ಚೀನಾದ ಜೆ-20 ಫೈಟರ್ ಜೆಟ್ ಗೆ ಸಮ ಅಲ್ಲವೇ ಅಲ್ಲ ಎಂದು ಚೀನಾ ಹೇಳಿಕೊಂಡಿದೆ.

ಈ ಬಗ್ಗೆ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಬರೆದುಕೊಂಡಿದ್ದು, ಯಾವುದೇ ಹಂತದಲ್ಲೂ ಚೀನಾದ ಜೆ-20 ಫ್ರಾನ್ಸ್ ನಿರ್ಮಿತ ರಾಫೆಲ್ ಸಮ ಅಲ್ಲ ಎಂದು ಹೇಳಿದೆ. ಇತ್ತೀಚೆಗಷ್ಟೇ ಭಾರತದ ಅಂಬಾಲಾ ಏರ್ ಬೇಸ್ ಗೆ 5 ರಾಫೆಲ್ ಯುದ್ಧ ವಿಮಾನಗಳು ಆಗಮಿಸಿದ್ದವು.  ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತ ಯುದ್ಧ ಸಾಮರ್ಥ್ಯಗಳ ಕುರಿತು ಮತ್ತು ಪರಸ್ಪರ ಬಲಾಬಲದ ಕುರಿತು ಸುದ್ದಿಗಳು ಹರಿದಾಡುತ್ತಿವೆ. 

ಇದೇ ವಿಚಾರವಾಗಿ ಗ್ಲೋಬಲ್ ಟೈಮ್ಸ್ ಕೂಡ ಚರ್ಚೆ ಆರಂಭಿಸಿದ್ದು, ಭಾರತಕ್ಕೆ ರಾಫೆಲ್ ಯುದ್ಧ ವಿಮಾನ ಬಂದಿಳಿದಿದೆ. ಅದರ ಸಾಮರ್ಥ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲಾಗುತ್ತಿದೆ. ರಾಫೆಲ್ ಯುದ್ಧ ವಿಮಾನ ಚೀನಾದ ಜೆ-20 ಫೈಟರ್ ಜೆಟ್ ಗೆ ಸಮ ಎಂದು ಹೇಳಲಾಗುತ್ತಿದೆ. ಆದರೆ ಅದರ ಸಾಮರ್ಥ್ಯವೇ ಬೇರೆ. ಜೆ20 ಸಾಮರ್ಥ್ಯವೇ ಬೇರೆ. ರಾಫೆಲ್ ಎಂದಿಗೂ ಜೆ-20ಗೆ ಸಮನಾಗಲು ಸಾಧ್ಯವಿಲ್ಲ, ರಾಫೆಲ್ ಕೇವಲ 3ನೇ ಪೀಳಿಗೆ ಫೈಟರ್ ಜೆಟ್ ಆಗಿದ್ದು, ಜೆ-20 ನಾಲ್ಕನೇ ಪೀಳಿಗೆಯ ಯುದ್ಧ ವಿಮಾನವಾಗಿದೆ. ರಾಫೆಲ್ ಸುಖೋಯ್ 30 ಎಂಕೆಐಗಿಂತ ಆಧುನಿಕ ವಿಮಾನವಾಗಿದೆಯಷ್ಟೇ ಎಂದು ಹೇಳಿದೆ.

ಇನ್ನು ಚೀನಾ ಹೇಳಿಕೆಯನ್ನು ಭಾರತದ ನಿವೃತ್ತ ಏರ್ ಕಮಾಂಡರ್ ಪ್ರಶಾಂತ್ ದೀಕ್ಷಿತ್ ಅವರು ತಳ್ಳಿ ಹಾಕಿದ್ದು, ಜೆ-20 ಯುದ್ದ ವಿಮಾನದ ಆಕಾರವೇ ಅದು ಯಾವ ಪೀಳಿಗೆಯ ವಿಮಾನವೆಂದು ಹೇಳುತ್ತದೆ. ಚೀನಾ ಹೇಳಿಕೊಳ್ಳುತ್ತಿರುವಂತೆ ಅದು ನಾಲ್ಕನೇ ಪೀಳಿಗೆ ಯುದ್ಧ ವಿಮಾನವೆನ್ನಲು ಯಾವುದೇ ರೀತಿಯ ಪುರಾವೆಗಳಿಲ್ಸ. ಆದರೆ ರಾಫೆಲ್ ಕುರಿತ ತಾಂತ್ರಿಕ ಸವಲತ್ತುಗಳಿಗೆ ಎಲ್ಲ ರೀತಿಯ ಪುರಾವೆಗಳಿವೆ. ರಾಫೆಲ್ ನಲ್ಲಿ ಬಳಕೆ ಮಾಡುವ ಶಸ್ತ್ರಾಸ್ತ್ರ ಮತ್ತು ಮಿಸೈಲ್ ಗಳು ಸಾಬೀತು ಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಈ ಶಸ್ತ್ರಾಸ್ತ್ರಗಳು ಎಂತಹುದೇ ಬಲಿಷ್ಛ ಎದುರಾಳಿಯನ್ನೂ ಕಂಗೆಡಿಸುತ್ತದೆ ಎಂದು ಹೇಳಿದ್ದಾರೆ.

ಜಾಗತಿಕ ಸಮುದಾಯದ ಮೊರೆ ಹೋದ ಪಾಕಿಸ್ತಾನ
ಇನ್ನು ಭಾರತಕ್ಕೆ ರಾಫೆಲ್ ಆಗಿಸುತ್ತಿದ್ದಂತೆಯೇ ಈ ಬಗ್ಗೆ ಪರೋಕ್ಷ ಚಕಾರವೆತ್ತಿರುವ ಪಾಕಿಸ್ತಾನ, 'ಯುದ್ಧ ಶಸ್ತ್ರಾಸ್ತ್ರ ಸಾಮರ್ಥ್ಯ ವೃದ್ಧಿ ಮೂಲಕ ಭಾರತ ಜಗತ್ತಿಗೆ ಪರೋಕ್ಷ ಬೆದರಿಕೆಯಾಗುತ್ತಿದೆ. ಮೇಲ್ನೋಟಕ್ಕೆ ಭಾರತ ಚೀನಾ ವಿರುದ್ಧ ಶಸ್ತ್ರಾಸ್ತ್ರ ಪ್ರತಿಸ್ಪರ್ಧೆ ಮಾಡುತ್ತಿರುವಂತೆ ಕಾಣುತ್ತಿದೆಯಾದರೂ, ಭಾರತ ಅವುಗಳನ್ನು ಪಾಕಿಸ್ತಾನದ ವಿರುದ್ಧ ಬಳಕೆ ಮಾಡಲಿದೆ. ಹೀಗಾಗಿ ಜಾಗತಿಕ ಸಮುದಾಯ ಈ ಬಗ್ಗೆ ಗಂಭೀರ ಗಮನ ಹರಿಸಿ ಭಾರತವನ್ನು ನಿಯಂತ್ರಿಸಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com