ಅಮೆರಿಕ ಚುನಾವಣೆ: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ರನ್ನು ಆಯ್ಕೆ ಮಾಡಿದ ಜೊ ಬಿಡನ್

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್ ಅವರು ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷೆ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಜೊ ಬಿಡನ್ ಮತ್ತು ಕಮಲಾ ಹ್ಯಾರಿಸ್
ಜೊ ಬಿಡನ್ ಮತ್ತು ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬಿಡನ್ ಅವರು ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷೆ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಈ ಮೂಲಕ ಭಾರತೀಯ ಮೂಲದ ಮೊದಲ ಏಷ್ಯಾ ಅಮೆರಿಕನ್ ಕಪ್ಪು ವರ್ಣದ ಮಹಿಳೆ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ಜೊ ಬಿಡನ್ ಟ್ವೀಟ್ ಮೂಲಕ ಮತ್ತು ಬೆಂಬಲಿಗರಿಗೆ ಬರೆದ ಇ ಮೇಲ್ ನಲ್ಲಿ  ಕಮಲಾ ಹ್ಯಾರಿಸ್ ಅವರ ಸ್ಪರ್ಧೆಯನ್ನು ಘೋಷಿಸಿದ್ದು ಇದು ಮುಂದಿನ ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮೇಲೆ ಮಾತ್ರವಲ್ಲದೆ ಡೆಮಾಕ್ರಟಿಕ್ ಪಕ್ಷದ ಮೇಲೆ ಸಹ ಪರಿಣಾಮ ಬೀರಲಿದೆ.

78 ವರ್ಷದ ಜೊ ಬಿಡನ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅತ್ಯಂತ ಹಿರಿಯ ಅಭ್ಯರ್ಥಿ ಮಾತ್ರವಲ್ಲದೆ ತಮ್ಮನ್ನು ರೂಪಾಂತರದ ಅಭ್ಯರ್ಥಿ ಎಂದು ಪರಿಗಣಿಸಿಕೊಂಡಿದ್ದಾರೆ. ಅವರ ಪ್ರಚಾರದಲ್ಲಿ ಬಹಳ ಸಕ್ರಿಯವಾಗಿ ಮತ್ತು ಉತ್ಸಾಹದ, ಕ್ರಿಯಾಶೀಲ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿದ್ದ ಕಮಲಾ ಹ್ಯಾರಿಸ್ ಅವರು ಗೆದ್ದು ಬಂದರೆ ಕಪ್ಪು ವರ್ಣದ ಭಾರತೀಯ ಮೂಲದ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಲಿದ್ದಾರೆ. ವರ್ಣೀಯ ಸಂಘರ್ಷ ಎದುರಿಸುತ್ತಿರುವ ಅಮೆರಿಕದಲ್ಲಿ ಹ್ಯಾರಿಸ್ ಸ್ಪರ್ಧೆ ಬಹಳ ಮುಖ್ಯವಾಗಿದೆ.

ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಮೇಲೆ ಪ್ರಬಲ ಎದುರಾಳಿಯಾಗಿ ನಿಲ್ಲಲು, ಮಹಿಳೆಯರ ಸಶಕ್ತೀಕರಣಕ್ಕೆ ಕಮಲಾ ಹ್ಯಾರಿಸ್ ಅವರ ಆಯ್ಕೆ ಡೆಮಾಕ್ರಟಿಕ್ ಪಕ್ಷಕ್ಕೆ ಪ್ರಬಲ ಬಲ ಸಿಕ್ಕಿದಂತಾಗಿದೆ ಎನ್ನಬಹುದು.

ಕಮಾಲಾ ಹ್ಯಾರಿಸ್ ಯಾರು?:55 ವರ್ಷದ ಕಮಲಾ ಹ್ಯಾರಿಸ್ ಭಾರತೀಯ ಮತ್ತು ಜಮೈಕಾದ ವಲಸಿಗ ದಂಪತಿ ಮಗಳು. ಅಮೆರಿಕ ಸರ್ಕಾರದಲ್ಲಿ ಮೊದಲ ಬಾರಿಗೆ ಸೆನೆಟರ್ ಆಗಿದ್ದಾರೆ. ಇದಕ್ಕೂ ಮುನ್ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಮತ್ತು ಕ್ಯಾನಿಫೋರ್ನಿಯಾ ಅಟೊರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಜೊ ಬಿಡನ್ ಅವರ ದಿವಂಗತ ಪುತ್ರನೊಂದಿಗೆ ಹಿಂದೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು, ಅದುವೇ ಇಂದು ಜೊ ಬಿಡನ್ ಅವರು ಆಯ್ಕೆ ಮಾಡಲು ಸ್ವಲ್ಪ ಮಟ್ಟಿಗೆ ನೆರವು ಆಯಿತು. ಜೊ ಬಿಡನ್ ಅವರು ಪ್ರಚಾರ ಆರಂಭಿಸಿದಲ್ಲಿಂದ ಕಪ್ಪು ವರ್ಣದ ಕಾರ್ಯಕರ್ತರನ್ನು, ಅಥ್ಲೆಟ್ ಗಳನ್ನು ಅಥವಾ ನಟರನ್ನು ಉಪಾಧ್ಯಕ್ಷ ಹುದ್ದೆಗೆ ನಿಲ್ಲಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು.

ತಮ್ಮ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಲಾ ಹ್ಯಾರಿಸ್, ಇದೇ ಮೊದಲ ಬಾರಿಗೆ ಕಪ್ಪು ವರ್ಣದ ಮಹಿಳೆಯನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಅಮೆರಿಕದ ಮೇಲಿನ ನನ್ನ ನಂಬಿಕೆ ಉಳಿಯುವಂತೆ ಮಾಡಿದೆ. ಯಶಸ್ಸು ಸಾಧಿಸಲು ಇಲ್ಲಿ ಪ್ರತಿಯೊಬ್ಬರಿಗೆ ಸಹ ಜಾಗವಿದೆ, ಅವರು ಎಲ್ಲಿಂದ ಬಂದರು, ಯಾರು ಎಂಬುದು ಇಲ್ಲಿ ಮುಖ್ಯವಲ್ಲ ಎಂಬುದನ್ನು ನನ್ನ ಆಯ್ಕೆ ತೋರಿಸಿಕೊಟ್ಟಿದೆ ಎಂದಿದ್ದಾರೆ.

ಪಕ್ಷದ ನಾಯಕರಾದ 2016ರ ಚುನಾವಣೆಯ ಅಧ್ಯಕ್ಷೀಯ ಅಭ್ಯರ್ಥಿ ಹಿಲ್ಲರಿ ಕ್ಲಿಂಟನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಾರ್ವಜನಿಕವಾಗಿ ಜೊ ಬಿಡನ್-ಕಮಲಾ ಹ್ಯಾರಿಸ್ ಅವರ ಸ್ಪರ್ಧೆಯನ್ನು ಬೆಂಬಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com