ಬ್ರಿಟನ್: ರೂಪಾಂತರಗೊಂಡ ಕೊರೋನಾ ವೈರಸ್‌ ವಿರುದ್ಧ ಫಿಜರ್, ಮಾಡರ್ನಾ ಲಸಿಕೆ ಪರೀಕ್ಷೆ

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಮೇಲೆ ಫಿಜರ್ ಮತ್ತು ಮಾಡರ್ನಾ ಲಸಿಕೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 
ಕೋವಿಡ್ ಲಸಿಕೆ
ಕೋವಿಡ್ ಲಸಿಕೆ

ಲಂಡನ್: ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಮೇಲೆ ಫಿಜರ್ ಮತ್ತು ಮಾಡರ್ನಾ ಲಸಿಕೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

ಮಾರಕ ಕೊರೋನಾ ವೈರಸ್ ಗೆ ಈಗಾಗಲೇ ವಿಶ್ವಾದ್ಯಂತ ಹತ್ತಾರು ಔಷಧ ತಯಾರಿಕಾ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿದ್ದು, ಈ ಪೈಕಿ ಬಹುತೇಕ ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿ ತೊಡಗಿವೆ. ಇದರ ನಡುವೆಯೇ ಬ್ರಿಟನ್ ನಲ್ಲಿ ಕೊರೋನಾ  ರೂಪಾಂತರ ವೈರಸ್ ಬ್ರಿಟನ್ ನಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಬ್ರಿಟನ್ ನಲ್ಲಿ ಹಾಲಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳ ಪೈಕಿ ಶೇ.70ರಷ್ಟು ಸೋಂಕಿತರಲ್ಲಿ ರೂಪಾಂತರ ವೈರಸ್ ಸೋಂಕು ಕಂಡುಬರುತ್ತಿದೆ.

ಇನ್ನು ಈ ಹೊಸ ರೂಪಾಂತರಿತ ಕೊರೋನಾ ವೈರಸ್ ನ ಪ್ರಸರಣ ಹಾಲಿ ವೈರಸ್ ಗಿಂತ ಶೇ.70ರಷ್ಟು ಹೆಚ್ಚಿದೆ ಎಂಬ ತಜ್ಞರ ಎಚ್ಚರಿಕೆ ವಿಶ್ವಾದ್ಯಂತ ಭಾರಿ ಆತಂಕ ಸೃಷ್ಟಿಸಿದೆ. ಅಲ್ಲದೆ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ನಿರುಪಯೋಗವಾಗಲಿವೆಯೇ ಎಂಬ ಆತಂಕ ಕೂಡ  ಕಾಡತೊಡಗಿದೆ.

ಹೀಗಾಗಿ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ಈ ಹೊಸ ರೂಪಾಂತರಿತ ವೈರಸ್ ಮೇಲೆ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಪರೀಕ್ಷೆ ಮಾಡಬೇಕಿದ್ದು, ಈ ಸಂಬಂಧ ಇದೀಗ ಫಿಜರ್ ಮತ್ತು ಮಾಡರ್ನಾ ಸಂಸ್ಥೆಗಳು ಈ ವೈರಸ್ ಮೇಲೆ ತಮ್ಮ ಲಸಿಕೆಯ ಪ್ರಯೋಗಕ್ಕೆ  ಮುಂದಾಗಿವೆ. ಈ ಕುರಿತಂತೆ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ಎನ್ ವರದಿ ಮಾಡಿದ್ದು, ಕೊರೋನಾ ವೈರಸ್‌ನ ಹೊಸ ಸ್ವರೂಪಗಳ ವಿರುದ್ಧವೂ ಮಾಡರ್ನಾ ಲಸಿಕೆ ಪ್ರತಿಕಾಯಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮುಂದಿನ ವಾರಗಳಲ್ಲಿ  ಮತ್ತಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಂತೆಯೇ ಮಾಡರ್ನಾ ಬೆನ್ನಲ್ಲೇ ಈಗಾಗಲೇ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಕೂಡ ರೂಪಾಂತರಿತ ಕೊರೋನಾ ವೈರಸ್ ಮೇಲೆ ಪರಿಣಾಮಕಾರಿ ಎಂದು ಹೇಳಲಾಗುತ್ತಿದ್ದು, ಫಿಜರ್ ಕೋವಿಡ್ ಲಸಿಕೆ ವೈರಸ್‌ನ ಹೊಸ ಸ್ವರೂಪವನ್ನೂ ನಿಷ್ಕ್ರಿಯಗೊಳಿಸಬಹುದು. ಈಗಾಗಲೇ  ಲಸಿಕೆ ಹಾಕಿಸಿಕೊಂಡಿರುವವರ ರಕ್ತದ ಮಾದರಿಗಳ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಫಿಜರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಆದರೆ ಈ ವಿಚಾರವಾಗಿ ಫೈಜರ್ ಮತ್ತು ಮಾಡರ್ನಾ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಹೊಸ ಸ್ವರೂಪ ಶೇ 40ರಿಂದ 70ರಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ. ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಗಳು ವೈರಸ್‌ನ  ಹೊಸ ಸ್ವರೂಪದ ವಿರುದ್ಧ ಕಾರ್ಯನಿರ್ವಹಿಸದು ಎನ್ನಲು ಪುರಾವೆಗಳಿಲ್ಲ ಎಂದು ಈಗಾಗಲೇ ವಿಜ್ಞಾನಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com