ಇಸ್ರೇಲ್ ಸರ್ಕಾರ ಮತ್ತೆ ಪತನ: ರಾತ್ರೋ ರಾತ್ರಿ ಸಂಸತ್ ವಿಸರ್ಜನೆ, ಎರಡು ವರ್ಷದಲ್ಲಿ ನಾಲ್ಕನೇ ಬಾರಿ ಚುನಾವಣೆ!

ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್‌ ಸರ್ಕಾರ ಮತ್ತೆ ಪತನವಾಗಿದ್ದು,  ರಾತ್ರೋ ರಾತ್ರಿ ಇಸ್ರೇಲ್ ಸಂಸತ್ ವಿಸರ್ಜನೆಯಾಗಿದೆ.
ನೆತನ್ಯಹು
ನೆತನ್ಯಹು

ಜೆರುಸಲೆಮ್: ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್‌ ಸರ್ಕಾರ ಮತ್ತೆ ಪತನವಾಗಿದ್ದು,  ರಾತ್ರೋ ರಾತ್ರಿ ಇಸ್ರೇಲ್ ಸಂಸತ್ ವಿಸರ್ಜನೆಯಾಗಿದೆ.

ಹೌದು...ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್ ಧಿಡೀರ್ ಪತನವಾಗಿದ್ದು, ಮತ್ತೊಮ್ಮೆ ಇಸ್ರೇಲ್ ನಲ್ಲಿ ಅವಧಿಗೂ ಮುನ್ನವೇ ಚುನಾವಣೆ ಎದುರಾಗಿದೆ. ಆ ಮೂಲಕ ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಸರ್ಕಾರ ಪತನವಾಗಿದ್ದು, ನಾಲ್ಕನೇ ಬಾರಿಗೆ ಇಸ್ರೇಲ್‌ನಲ್ಲಿ ಚುನಾವಣೆ ನಡೆಯುತ್ತಿದೆ.

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ನೆತನ್ಯಾಹು ಅವರ ಲಿಕುಡ್‌ ಪಾರ್ಟಿ ಮತ್ತು ಗಾಂಟ್ಜ್ ನೇತೃತ್ವದ ಬ್ಲೂ ಆ್ಯಂಡ್‌ ವೈಟ್‌ ಪಾರ್ಟಿ ಮೈತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದಿಂದಾಗಿ ಕೊನೆಯಾಗಿದೆ.  ಮಂಗಳವಾರ ಮಧ್ಯರಾತ್ರಿ ಇಸ್ರೇಲ್‌ ಸಂಸತ್ತು ತಾನಾಗಿಯೇ ವಿಸರ್ಜನೆಗೊಂಡಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದ್ದು, ಮಾರ್ಚ್‌ 23ಕ್ಕೆ ಮತದಾನ ನಿಗದಿಯಾಗಿದೆ ಎಂದು ತಿಳಿದುಬಂದಿದೆ.

ಸಂಸತ್‌ ವಿಸರ್ಜನೆ ಮುಂದೂಡುವ ಪ್ರಯತ್ನದ ಭಾಗವಾಗಿ ನೆತನ್ಯಾಹು ಮಂಗಳವಾರ ಸಂಸತ್ತಿನಲ್ಲಿ ಮಾತನಾಡುತ್ತ, 'ಪ್ರಸ್ತುತ ಅನಗತ್ಯವಾಗಿರುವ ಚುನಾವಣೆಯನ್ನು ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಮಾರ್ಗ ಕಂಡುಕೊಳ್ಳಬೇಕಿದೆ' ಎಂದು ಹೇಳಿದ್ದರು. ಆದರೆ 2020ರ ಬಜೆಟ್‌ ಅನುಮೋದನೆಗೆ ನೀಡಲಾಗಿದ್ದ  ಕಾನೂನಾತ್ಮಕ ಗಡುವು ಮುಕ್ತಾಯವಾದ ಬೆನ್ನಲ್ಲೇ ಸಂಸತ್ ತಾನಾಗಿಯೇ ವಿಸರ್ಜಿಸಲ್ಪಟ್ಟಿದೆ. ಹಣಕಾಸು ಖಾತೆಯನ್ನು ನೆತನ್ಯಾಹು ಪಕ್ಷವೇ ನಿರ್ವಹಿಸುತ್ತಿತ್ತು, ಆದರೆ ಬಜೆಟ್‌ ಮಂಡಿಸಲು ನಿರಾಕರಿಸಿತ್ತು. ಗಾಂಟ್ಜ್ ಪಕ್ಷದೊಂದಿಗಿನ ಮೈತ್ರಿ ಒಪ್ಪಂದ ಉಲ್ಲಂಘನೆ ಸರ್ಕಾರದ ಪತನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಇನ್ನು ಪ್ರಧಾನಿ ನೆತನ್ಯಾಹು ವಿರುದ್ಧ ಭ್ರಷ್ಟಾಚಾರ, ಲಂಚ, ಮೋಸ ಹಾಗೂ ನಂಬಿಕೆ ದ್ರೋಹದ ಪ್ರಕರಣಗಳು ದಾಖಲಾಗಿದ್ದು, ವಿಚಾರಣಗಳಿಗೆ ನೆತನ್ಯಾಹು ಕೋರ್ಟ್‌ಗೆ ಹಾಜರಾಗಬೇಕಿದೆ. ಇಸ್ರೇಲ್ ರಾಜಕೀಯ ತಜ್ಞರ ಪ್ರಕಾರ ಮುಂಬರುವ ಚುನಾವಣೆಯಲ್ಲಿ ನೆತನ್ಯಾಹು ಬಲಪಂಥೀಯ, ಧಾರ್ಮಿಕ ಸರ್ಕಾರ ರಚಿಸುವ  ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com