ವಿದ್ಯಾರ್ಥಿಗಳ ರಕ್ಷಣೆಗೆ ವಿಶೇಷ ವಿಮಾನ; ಭಾರತ ನೋಡಿ ಕಲಿಯಿರಿ, ನಮ್ಮ ಜೀವ ಉಳಿಸಿ ಎಂದ ಪಾಕ್ ವಿದ್ಯಾರ್ಥಿಗಳು!

ಚೀನಾದಲ್ಲಿ ಕರೋನಾ ವೈರಸ್ ತನ್ನ ಮರಣ ಮೃದಂಗ ಮುಂದುವರೆಸಿರುವಂತೆಯೇ ಇತ್ತ ತಮ್ಮ ಜೀವ ಉಳಿಸುವಂತೆ ಅಲ್ಲಿನ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶದ ಸರ್ಕಾರಗಳಿಗೆ ಮೊರೆ ಇಡುತ್ತಿದ್ದಾರೆ.
ಪಾಕ್ ವಿದ್ಯಾರ್ಥಿಗಳು
ಪಾಕ್ ವಿದ್ಯಾರ್ಥಿಗಳು

ಬೀಜಿಂಗ್: ಚೀನಾದಲ್ಲಿ ಕರೋನಾ ವೈರಸ್ ತನ್ನ ಮರಣ ಮೃದಂಗ ಮುಂದುವರೆಸಿರುವಂತೆಯೇ ಇತ್ತ ತಮ್ಮ ಜೀವ ಉಳಿಸುವಂತೆ ಅಲ್ಲಿನ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶದ ಸರ್ಕಾರಗಳಿಗೆ ಮೊರೆ ಇಡುತ್ತಿದ್ದಾರೆ.

ಹೌದು.. ಕರೋನಾ ವೈರಸ್ ಪೀಡಿತ ಚೀನಾಕ್ಕೆ ವಿಶೇಷ ವಿಮಾನ ರವಾನೆ ಮಾಡಿ ಭಾರತ ತನ್ನ ದೇಶದ ಪ್ರಜೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುತ್ತಿದೆ. ಇದೇ ವಿಚಾರವಾಗಿ ಪಾಕಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

'ಭಾರತ ತನ್ನ ರಾಯಭಾರ ಕಚೇರಿಯಿಂದ ವಾಹನಗಳನ್ನು ರವಾನಿಸಿ ತನ್ನ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಅಭಯ ನೀಡಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪೇನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್...’ ಎಂದು ಪಾಕ್ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಮತ್ತೋರ್ವ ವಿದ್ಯಾರ್ಥಿ, 'ವಿದೇಶಕ್ಕೆ ಹೋಗಿ, ಓದಿ, ದುಡಿದು ಸ್ವದೇಶಕ್ಕೆ ಹಣ ಕಳಿಸಿ. ಪಾಕಿಸ್ತಾನವನ್ನು ಸಂಪದ್ಭರಿತ ದೇಶ ಮಾಡಿ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅವರ ಮಾತನ್ನು ನಾವು ಗೌರವಿಸಿದೆವು. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಹೋಯಿತು' ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 

ಪಾಕ್ ವಿದ್ಯಾರ್ಥಿಗಳ ಈ ಅಗ್ರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪಾಕಿಸ್ತಾನದ ದಿನಪತ್ರಿಕೆ ‘ಡಾನ್’ ಸಹ ಚೀನಾದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಸಂಪಾದಕೀಯ ಪ್ರಕಟಿಸಿದ್ದು, ಪಾಕ್ ಪ್ರಜೆಗಳ ರಕ್ಷಣೆಗೆ ಧಾವಿಸುವಂತೆ ಇಮ್ರಾನ್ ಖಾನ್ ಸರ್ಕಾರಕ್ಕೆ ಮನವಿ ಮಾಡಿದೆ. 

ಚೀನಾದಲ್ಲಿ ಸುಮಾರು 30 ಸಾವಿರ ಪಾಕಿಸ್ತಾನ ಪ್ರಜೆಗಳಿದ್ದು, ವೈರಸ್ ಭೀತಿಯ ಕೇಂದ್ರ ನೆಲೆಯಾಗಿರುವ ವುಹಾನ್‌ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com