'ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ': ಡೊನಾಲ್ಡ್ ಟ್ರಂಪ್ 

ಈ ತಿಂಗಳಾಂತ್ಯದಲ್ಲಿ ಭಾರತ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಈ ತಿಂಗಳಾಂತ್ಯದಲ್ಲಿ ಭಾರತ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ಫೆಬ್ರವರಿ 24 ಮತ್ತು 25ರಂದು ದೆಹಲಿ ಮತ್ತು ಗುಜರಾತ್ ನ ಅಹಮದಾಬಾದ್ ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿರುವುದಾಗಿ ನಿನ್ನೆ ಅಮೆರಿಕಾದ ಶ್ವೇತಭವನ ಪ್ರಕಟಿಸಿತ್ತು. ಈ ಬಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ. ಅಲ್ಲಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರು ಮಹಾನ್ ಸಂಭಾವಿತ ವ್ಯಕ್ತಿ ಎಂದು ಹೇಳಿದ್ದಾರೆ.


ಕಳೆದ ವಾರಾಂತ್ಯ ನಾನು ಮೋದಿಯವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಸಂದರ್ಭದಲ್ಲಿ ನನ್ನನ್ನು ಸ್ವಾಗತಿಸಲು ಭಾರತದಲ್ಲಿ ಲಕ್ಷಾಂತರ ಜನರು ಕಾಯುತ್ತಿದ್ದಾರೆ ಎಂದು ಹೇಳಿದರು ಎಂದಿದ್ದಾರೆ ಟ್ರಂಪ್. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಸಾಧ್ಯತೆ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ, ನಾವು ಸರಿಯಾದ ನಿಟ್ಟಿನಲ್ಲಿ ಒಪ್ಪಂದ ಮಾಡಲು ಸಾಧ್ಯವಾದರೆ ಈ ವಿಷಯದಲ್ಲಿ ಮುಂದುವರಿಯುವುದಾಗಿ ಹೇಳಿದರು. 

ವ್ಯಾಪಾರ ಒಪ್ಪಂದ: ಈ ವರ್ಷ ನವೆಂಬರ್ ನಲ್ಲಿ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಅಮೆರಿಕಾ ಮುಂದಾಗುತ್ತಿದೆ ಎನ್ನಲಾಗುತ್ತಿದೆ. ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಭಾರತದ ಜೊತೆಗಿನ ವ್ಯಾಪಾರ ಕೊರತೆಯನ್ನು ನೀಗಿಸಿ ಮಿಲಿಟರಿ, ನೌಕಾ ಹೆಲಿಕಾಪ್ಟರ್ ಸೇರಿದಂತೆ ರಕ್ಷಣಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಸಾಧಿಸುವುದು ಅಮೆರಿಕಾದ ಬಯಕೆಯಾಗಿದೆ. ಅಮೆರಿಕಾ ಅಧ್ಯಕ್ಷರ ಇದೇ ತಿಂಗಳ ಭೇಟಿ ಸಂದರ್ಭದಲ್ಲಿ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ. 


ಅಮೆರಿಕಾದಿಂದ ಆಮದು ಮಾಡಿಕೊಳ್ಳುವ 40ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಭಾರತ ತೆರಿಗೆ ಕಡಿತ ಮಾಡುವ ಸಾಧ್ಯತೆಯಿದೆ. ಅದು ಸೇಬು, ಬಾದಾಮಿ ಬೀಜದಿಂದ ಹಿಡಿದು ಮೊಬೈಲ್, ಸ್ಮಾರ್ಟ್ ವಾಚ್ ಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಗಳಿಂದ ತೆರಿಗೆ ಕಡಿತ ಮಾಡುವ ಸಾಧ್ಯತೆಯಿದೆ. 


ಭಾರತದ ಲಿಕ್ಕರ್ ಮತ್ತು ವೈನ್ ತಯಾರಕರ ವಿರೋಧದ ನಡುವೆಯೂ ಅಮೆರಿಕಾದಿಂದ ವೈನ್ ಮತ್ತು ವಿಸ್ಕಿಗಳು ನಮ್ಮ ದೇಶಕ್ಕೆ ಕಡಿಮೆ ದರದಲ್ಲಿ  ಸುಲಭವಾಗಿ ಬರುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಾರತದಲ್ಲಿ ಪಾಶ್ಚಾತ್ಯ ಶೈಲಿಯ ಲಿಕ್ಕರ್ ಸುಮಾರು 50 ಸಾವಿರ ಕೋಟಿಗಳಷ್ಟು ವ್ಯಾಪಾರವಾಗುತ್ತಿದ್ದು ಅದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.


ಈ ವ್ಯಾಪಾರ ಒಪ್ಪಂದದಲ್ಲಿ ನಿರತರಾಗಿರುವ ಅಧಿಕಾರಿಗಳು ಹೇಳುವ ಪ್ರಕಾರ, ಮಾಂಸಹಾರ ಸೇವಿಸುವ ಪ್ರಾಣಿಗಳಿಂದ ತಯಾರಾಗುವ ಡೈರಿ ಉತ್ಪನ್ನಗಳನ್ನು ಖರೀದಿಸಲು ಭಾರತೀಯರು ಇಚ್ಛೆ ಹೊಂದದಿರುವುದರಿಂದ ಸಂಸ್ಕೃತಿಯ ವಿಷಯಗಳು ಬೆರೆತಿರುವುದರಿಂದ ಅಮೆರಿಕಾದಿಂದ ಡೈರಿ ಉತ್ಪನ್ನಗಳನ್ನು ಭಾರತ ಸ್ವೀಕರಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.


ಅಮೆರಿಕಾ ಅಧ್ಯಕ್ಷರು ಭಾರತಕ್ಕೆ ಬರುವ ಮುನ್ನವೇ ಅಲ್ಲಿಂದ ವ್ಯಾಪಾರ ತಂಡವೊಂದು ಭಾರತಕ್ಕೆ ಆಗಮಿಸಿ ಮುಂದಿನ ವಾರವೇ ಒಪ್ಪಂದ ಏರ್ಪಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಭಾರತ-ಪಾಕಿಸ್ತಾನ ನಡುವೆ ಜಮ್ಮು-ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ದರಿರುವುದಾಗಿ ಹೇಳಿಕೊಂಡು ಬರುತ್ತಿದ್ದ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ವಿವಾದ ಪ್ರಸ್ತಾಪವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com