ಅಂಕ ಆಧಾರಿತ ವೀಸಾ ವ್ಯವಸ್ಥೆ ಜಾರಿಗೆ ಇಂಗ್ಲೆಂಡ್ ಸರ್ಕಾರ ಮುಂದು: ಏನಿದು, ಇದರ ಪರಿಣಾಮ ಏನು?

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಕೌಶಲ್ಯಭರಿತ ನೌಕರರನ್ನು ಸೆಳೆದು ದೇಶದ ಆರ್ಥಿಕತೆ ಮತ್ತು ಇತರ ಕ್ಷೇತ್ರಗಳ ಮತ್ತಷ್ಟು ಬಲವರ್ಧನೆಗೆ ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಕೌಶಲ್ಯಭರಿತ ನೌಕರರನ್ನು ಸೆಳೆದು ದೇಶದ ಆರ್ಥಿಕತೆ ಮತ್ತು ಇತರ ಕ್ಷೇತ್ರಗಳ ಮತ್ತಷ್ಟು ಬಲವರ್ಧನೆಗೆ ಇಂಗ್ಲೆಂಡ್ ಸರ್ಕಾರ ಮುಂದಾಗಿದೆ. ಇದರ ಮೂಲಕ ಕಳಪೆ ಗುಣಮಟ್ಟದ ನೌಕರರು ಹೊರದೇಶಗಳಿಂದ ಬರುವುದನ್ನು ಅದು ತಡೆಯಲಿದೆ. ಇದಕ್ಕಾಗಿ ಲಂಡನ್ ಸರ್ಕಾರ ಹೊಸ ಪಾಯಿಂಟ್ ಆಧಾರಿತ ವೀಸಾ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.


ಈ ನೂತನ ವ್ಯವಸ್ಥೆ ಮುಂದಿನ ವರ್ಷ 2021ರ ಜನವರಿ 1ರಂದು ಜಾರಿಗೆ ಬರಲಿದೆ. ಕಳೆದ ತಿಂಗಳು ಐರೋಪ್ಯ ಒಕ್ಕೂಟದಿಂದ(ಬ್ರೆಕ್ಸಿಟ್ ವ್ಯವಸ್ಥೆ) ಹೊರಬಂದ ಇಂಗ್ಲೆಂಡ್ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದರಿಂದ ಆ ದೇಶದ ಆರ್ಥಿಕ ಗುಂಪಿನೊಳಗೆ ಸದಸ್ಯೇತರರಾಗಿ ಜನರು ಮುಕ್ತವಾಗಿ ಓಡಾಡುವುದನ್ನು ತಡೆಯುತ್ತದೆ.


ಈ ವ್ಯವಸ್ಥೆ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮತ್ತು ಸದಸ್ಯೇತರ ಭಾರತದಂತಹ ದೇಶಗಳಿಗೂ ಅನ್ವಯವಾಗುತ್ತದೆ. ಪಾಯಿಂಟ್ ಆಧಾರಿತ ವೀಸಾ ವ್ಯವಸ್ಥೆಯಡಿ ಹೊರ ದೇಶಗಳಿಂದ ಉದ್ಯೋಗಕ್ಕೆಂದು ಬರುವವರಿಗೆ ನಿಗದಿತ ಕೌಶಲ್ಯ, ಅರ್ಹತೆಗಳು, ವೇತನ ಮತ್ತು ಉದ್ಯೋಗಗಳಡಿ ಪರೀಕ್ಷೆಗೊಳಪಡಿಸಿ ಮಾನದಂಡದಂತೆ ಅಂಕಗಳನ್ನು ನೀಡಲಾಗುತ್ತದೆ. ಸಾಕಷ್ಟು ಅಂಕಗಳು ಸಿಕ್ಕಿದರೆ ಮಾತ್ರ ಇಂಗ್ಲೆಂಡ್ ನ ವೀಸಾ ದೊರೆತು ಅಲ್ಲಿಗೆ ವಲಸೆ ಹೋಗಬಹುದು. 


''ಇಂದು ಇಂಗ್ಲೆಂಡ್ ಪಾಲಿಗೆ ಐತಿಹಾಸಿಕ ದಿನ. ಇನ್ನು ಮುಂದೆ ಗಡಿಭಾಗದಿಂದ, ಹೊರ ದೇಶಗಳಿಂದ ಜನರು ಮುಕ್ತವಾಗಿ ಬರುವುದಕ್ಕೆ ತಡೆ ನೀಡುತ್ತಿದ್ದೇವೆ. ಪಾಯಿಂಟ್ ಆಧಾರಿತ ವಲಸೆ ವ್ಯವಸ್ಥೆಯಡಿ ಜನರ ಆದ್ಯತೆಗಳು, ಪ್ರತಿಭೆ, ಕೌಶಲ್ಯಗಳನ್ನು ಪರಿಗಣಿಸಿ ವೀಸಾ ನೀಡಲಾಗುವುದು. ಇದರಿಂದ ನಮ್ಮ ದೇಶಕ್ಕೆ ಸಿಕ್ಕಾಪಟ್ಟೆ ಜನರು ವಲಸೆ ಬರುವವರನ್ನು ತಡೆಯಲಾಗುವುದು'' ಎಂದು ಭಾರತ ಮೂಲದ ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.


ಅಗ್ಗದ ವಲಸೆ ಕಾರ್ಮಿಕರ ಮೇಲೆ ದೇಶದ ಅವಲಂಬನೆಯನ್ನು ಕೊನೆಗೊಳಿಸಲು ಮತ್ತು ಕಠಿಣ ಭದ್ರತೆಯೊಂದಿಗೆ ಒಟ್ಟಾರೆ ವಲಸೆಯ ಮಟ್ಟವನ್ನು ಕಡಿಮೆ ಮಾಡುವ ಬ್ರೆಕ್ಸಿಟ್ ಪರವಾಗಿ 2016 ರ ಜನಮತ ಸಂಗ್ರಹದ ಭಾಗವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಇಲ್ಲಿ ಐರೋಪ್ಯ ಒಕ್ಕೂಟ ಸದಸ್ಯ ರಾಷ್ಟ್ರಗಳು ಮತ್ತು ಒಕ್ಕೂಟೇತರ ರಾಷ್ಟ್ರಗಳ ನಾಗರಿಕರನ್ನು ಸಮಾನವಾಗಿ ಪರಿಗಣಿಸಲಾಗುವುದು. ಶಿಕ್ಷಣ ತಜ್ಞರು, ವಿಜ್ಞಾನಿಗಳು, ಎಂಜಿನಿಯರ್ ಗಳು, ವೈದ್ಯರು ಸೇರಿದಂತೆ ಅತಿ ಪ್ರತಿಭಾವಂತರು ಮತ್ತು ಕೌಶಲ್ಯಭರಿತ ನೌಕರರಿಗೆ ಪ್ರಮುಖ ಪ್ರಾಧ್ಯಾನ್ಯತೆ ನೀಡುತ್ತೇವೆ. ಇದು ಕೇವಲ ಉದ್ಯೋಗಿಗಳಿಗೆ ಮಾತ್ರವಲ್ಲದೆ ಇಂಗ್ಲೆಂಡ್ ಗೆ ಕಲಿಕೆಗೆ ಬರುವ ವಿದ್ಯಾರ್ಥಿಗಳಿಗೆ ಸಹ ಅನ್ವಯಿಸಲಾಗುತ್ತದೆ ಎಂದರು. 


ಪಾಯಿಂಟ್ ಆಧಾರಿತ ವೀಸಾ ವ್ಯವಸ್ಥೆಯ ಪ್ರಮುಖಾಂಶಗಳು:
-ಇಂಗ್ಲೆಂಡ್ ದೇಶದ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸಲು, ಆರ್ಥಿಕತೆಗೆ ಮತ್ತು ಸಮುದಾಯಗಳ ಉತ್ತೇಜನಕ್ಕೆ ಕ್ರಮ. 


-ಗ್ಲೋಬಲ್ ಟಾಲೆಂಟ್ ಸ್ಕೀಮ್ ಇದೇ ಶುಕ್ರವಾರ ಜಾರಿಗೆ ಬರುತ್ತಿದ್ದು, ಮುಂದಿನ ವರ್ಷದಿಂದ ಐರೋಪ್ಯ ಸದಸ್ಯ ರಾಷ್ಟ್ರಗಳಿಗೆ ಅನ್ವಯ. ಯಾವುದೇ ಉದ್ಯೋಗದ ಅವಕಾಶವಿಲ್ಲದೆ ಅತಿ ಕೌಶಲ್ಯ ಹೊಂದಿರುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಇಂಗ್ಲೆಂಡ್ ನಲ್ಲಿ ಅವಕಾಶ.


-ಕೌಶಲ್ಯಭರಿತ ನೌಕರರು ಹಲವು ಅರ್ಹತೆಗಳನ್ನು ಹೊಂದಿರಬೇಕು, ವಲಸೆ ಸಲಹಾ ಸಮಿತಿಯ ಶಿಫಾರಸು ಮೇರೆಗೆ ಉದ್ಯೋಗದ ಅವಕಾಶ ಪಡೆದಿರಬೇಕು. ಕನಿಷ್ಠ ವೇತನ 25, 600 ಪೌಂಡ್ ನ ಉದ್ಯೋಗ ಅವಕಾಶವನ್ನು ಎರಡನೇ ದರ್ಜೆಯ ಕೆಲಸದ ವೀಸಾಕ್ಕೆ ಅರ್ಜಿ ಸಲ್ಲಿಸುವವರು ಹೊಂದಿರಬೇಕು.  


-ಇಂಗ್ಲೆಂಡ್ ನಲ್ಲಿ ನೆಲೆಸಿ ಅಲ್ಲಿ ಕೆಲಸ ಮಾಡಬೇಕೆಂದರೆ ಎ ಮಟ್ಟವನ್ನು ಅಥವಾ ಅದಕ್ಕೆ ಸಮನಾಗಿ ಅರ್ಹತೆ ಪಡೆದಿರಬೇಕು.


-ಇಂಗ್ಲೆಂಡಿನಲ್ಲಿ ಅಧ್ಯಯನ ನಡೆಸಬೇಕೆಂದರೆ ಹೊರದೇಶದ ವಿದ್ಯಾರ್ಥಿಗಳು ಅಲ್ಲಿನ ಶಿಕ್ಷಣ ಸಂಸ್ಥೆಗಳಿಂದ ಅವಕಾಶ ಪಡೆದಿರಬೇಕು. ಆರ್ಥಿಕವಾಗಿ ತಮ್ಮ ಶಿಕ್ಷಣದ ಖರ್ಚನ್ನು ತಾವೇ ನೋಡಿಕೊಳ್ಳುವಷ್ಟು ಮತ್ತು ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಬರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com