ಪ್ರಿನ್ಸ್ ಹ್ಯಾರಿ-ಮೇಘನ್ ಮಾರ್ಕೆಲ್ ಇಂಗ್ಲೆಂಡ್ ರಾಜಮನೆತನದಿಂದ ಮಾರ್ಚ್ 31ಕ್ಕೆ ಅಧಿಕೃತ ನಿರ್ಗಮನ 

ರಾಜಮನೆತನ ವೈಭೋಗ ಬೇಡ, ಅಲ್ಲಿನ ಯಾವ ಸೌಲಭ್ಯ, ಸೌಲತ್ತುಗಳು ಕೂಡ ತಮಗೆ ಬೇಡ ಎಂದು ಹೇಳಿದ್ದ ಬ್ರಿಟನ್ ಯುವರಾಜ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅಧಿಕೃತವಾಗಿ ಮಾರ್ಚ್ 31ರಂದು ಹೊರಬರಲಿದ್ದಾರೆ. ಈ ಕುರಿತು ದಂಪತಿಯ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಿನ್ಸ್ ಹ್ಯಾರಿ-ಮೇಘನ್ ಮಾರ್ಕೆಲ್
ಪ್ರಿನ್ಸ್ ಹ್ಯಾರಿ-ಮೇಘನ್ ಮಾರ್ಕೆಲ್

ಲಂಡನ್: ರಾಜಮನೆತನ ವೈಭೋಗ ಬೇಡ, ಅಲ್ಲಿನ ಯಾವ ಸೌಲಭ್ಯ, ಸೌಲತ್ತುಗಳು ಕೂಡ ತಮಗೆ ಬೇಡ ಎಂದು ಹೇಳಿದ್ದ ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅಧಿಕೃತವಾಗಿ ಮಾರ್ಚ್ 31ರಂದು ಹೊರಬರಲಿದ್ದಾರೆ. ಈ ಕುರಿತು ದಂಪತಿಯ ಅಧಿಕೃತ ಕಚೇರಿ ಪ್ರಕಟಣೆ ತಿಳಿಸಿದೆ.


ರಾಜಮನೆತನ ಕರ್ತವ್ಯಗಳು, ವೈಭೋಗಗಳಿಂದ ಹೊರಬರುವ ತೀರ್ಮಾನ ಕೈಗೊಂಡ ನಂತರ ತಮ್ಮ ಹೆಸರಿನ ಜೊತೆಗೆ ಸಸ್ಸೆಕ್ಸ್ ರಾಯಲ್ ಎಂಬ ಪದನಾಮವನ್ನು ಹೊಂದಿರುವ ಬಗ್ಗೆ ಇಂಗ್ಲೆಂಡಿನ ಬಕಿಂಗ್ ಹ್ಯಾಂ ಪ್ಯಾಲೆಸ್ ಪರಾಮರ್ಶೆ ನಡೆಸುತ್ತಿದೆ. ಈ ಬಗ್ಗೆ ದಂಪತಿ ಹಿರಿಯ ಅಧಿಕಾರಿಗಳಲ್ಲಿ ಚರ್ಚೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರೇತರ ಸಂಘಟನೆ ಆರಂಭಿಸುವ ಸಂದರ್ಭದಲ್ಲಿ ಪದನಾಮ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. 


ಅರಮನೆಯ ವೈಭೋಗ ಮತ್ತು ಜವಾಬ್ದಾರಿಗಳಿಂದ ಹೊರಬರುತ್ತಿರುವುದಾಗಿ ಕಳೆದ ಜನವರಿಯಲ್ಲಿ ಈ ಜೋಡಿ ದಿಢೀರನೆ ನಿರ್ಧಾರ ಪ್ರಕಟಿಸಿದಾಗ ಬ್ರಿಟನ್ ಜನತೆ ಅಚ್ಚರಿಗೊಂಡಿದ್ದರು. ಮುಂದಿನ ದಿನಗಳಲ್ಲಿ ಶಾಂತಿಯ ಜೀವನ ನಡೆಸಲು ಅಚಲವಾದ ನಂಬಿಕೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಿನ್ಸ್ ಹ್ಯಾರಿ ಹೇಳಿದ್ದರು. 

ಅರಮನೆಯ ಜವಾಬ್ದಾರಿ, ವೈಭೋಗಗಳಿಂದ ಹೊರಬಂದರೆ ಏನಾಗುತ್ತದೆ?:

-ಅರಮನೆಯ ವೈಭೋಗದಿಂದ ಹೊರಬಂದ ಹ್ಯಾರಿ ಮತ್ತು ಮೇಘನ್ ದಂಪತಿಯ ಹೆಸರಿನ ಮುಂದೆ ಇನ್ನು ಹಿಸ್ ರಾಯಲ್ ಹೈನೆಸ್ ಮತ್ತು ಹರ್ ರಾಯಲ್ ಹೈನೆಸ್ ಎಂಬ ಬಿರುದು ಇರುವುದಿಲ್ಲ. ಈ ಹಿಂದೆ ಹ್ಯಾರಿ ಅವರ ತಾಯಿ ಡಯಾನಾ ಅವರು ಪ್ರಿನ್ಸ್ ಚಾರ್ಲ್ಸ್ ಜೊತೆ ವಿಚ್ಛೇದನ ಪಡೆದುಕೊಂಡ ನಂತರ ತಮ್ಮ ಹೆಸರಿನ ಮುಂದಿದ್ದ ಹರ್ ರಾಯಲ್ ಹೈನೆಸ್ ಬಿರುದನ್ನು ತೆಗೆದುಹಾಕಿದ್ದರು.

-ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ರಾಜಮನೆತನದ ಕರ್ತವ್ಯ, ಜವಾಬ್ದಾರಿಗಳಿಂದ ಹೊರಬಂದ ನಂತರ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ. ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ.

-ತಮ್ಮ ವಿವಾಹ ದಿನ ಡ್ಯೂಕ್ ಮತ್ತು ಡಚೆಸ್ಸ್ ಆಫ್ ಸಸ್ಸೆಕ್ಸ್ ಎಂದು ಹೆಸರು ಪಡೆದುಕೊಂಡಿದ್ದ ದಂಪತಿ ಇನ್ನು ಮುಂದೆ ತಮ್ಮ ಜೀವನದ ಹೆಚ್ಚಿನ ಸಮಯವನ್ನು ಕೆನಡಾದಲ್ಲಿ ಕಳೆಯಲಿದ್ದಾರೆ. ಒಂದು ಮನೆ ಇಂಗ್ಲೆಂಡಿನ ವಿಂಡ್ಸರ್ ಕ್ಯಾಸ್ಲಲ್ ನಲ್ಲಿರುತ್ತದೆ.

-ಈ ಜೋಡಿ ಅರಮನೆ ತೊರೆದು ಹೊರಬರುತ್ತಿರುವುದು ಹಿರಿಯ ಜೀವ ರಾಜಮನೆತನದ ಎಲಿಜಬೆತ್ 2 ಅವರಿಗೆ ನಿಜಕ್ಕೂ ನೋವುಂಟು ಮಾಡಿದೆ. ಈ ದಂಪತಿ ತಮ್ಮ ಜೀವನವಿಡೀ ಅರಮನೆಯ ರಾಜ-ರಾಣಿಯಾಗಿ ಬದುಕಬೇಕೆಂದು ಕನಸು ಕಂಡಿದ್ದವರು ಅವರು.

-ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅರಮನೆಯ ಜವಾಬ್ದಾರಿಗಳಿಂದ ಹೊರಬಂದರೂ ಕೂಡ ತಮ್ಮ ಸಾರ್ವಜನಿಕ ಕೆಲಸಗಳಾದ ಕಾಮನ್ ವೆಲ್ತ್, ಸಮುದಾಯಪರ ಕೆಲಸಗಳು, ಯುವ ಸಬಲೀಕರಣ, ಮಾನಸಿಕ ಆರೋಗ್ಯ, ಸೇವಾ ಮತ್ತು ಮಹಿಳೆಯರ ಸಬಲೀಕರಣ, ಹೆಚ್ ಐವಿ ವಿರುದ್ಧ ಹೋರಾಟ, ಲಿಂಗ ಸಮಾನತೆ, ಶಿಕ್ಷಣ, ಕ್ರೀಡೆ, ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಮುಂದುವರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com