ಭಾರತದೊಂದಿಗೆ ರಕ್ಷಣಾ ಒಪ್ಪಂದವೇ ಏಕೆ..? ಟ್ರಂಪ್ ನಡೆ ಟೀಕಿಸಿದ ಅಮೆರಿಕ ಸೆನೆಟರ್

ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಬರೊಬ್ಬರಿ 3 ಬಿಲಿಯನ್ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೇ ವಿಚಾರವಾಗಿ ಅಮೆರಿಕ ಸೆನೆಟರ್ ಒಬ್ಬರು ಟ್ರಂಪ್ ವಿರುದ್ಧ ಕಿಡಿಕಾರಿದ್ದಾರೆ.
ಬರ್ನಿ ಸ್ಯಾಂಡರ್ಸ್(ಸಂಗ್ರಹ ಚಿತ್ರ)
ಬರ್ನಿ ಸ್ಯಾಂಡರ್ಸ್(ಸಂಗ್ರಹ ಚಿತ್ರ)

ವಾಷಿಂಗ್ಟನ್: ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಬರೊಬ್ಬರಿ 3 ಬಿಲಿಯನ್ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೇ ವಿಚಾರವಾಗಿ ಅಮೆರಿಕ ಸೆನೆಟರ್ ಒಬ್ಬರು ಟ್ರಂಪ್ ವಿರುದ್ಧ ಕಿಡಿಕಾರಿದ್ದಾರೆ.

ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಬರ್ನಿ ಸ್ಯಾಂಡರ್ಸ್ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಒಪ್ಪಂದದ ಕುರಿತು ಕಿಡಿಕಾರಿದ್ದಾರೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆಯಿಂದ ದುಷ್ಪರಿಣಾಮ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಡೊನಾಲ್ಡ್ ಟ್ರಂಪ್ ವಿಶ್ವಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆಯೋ ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

3 ಬಿಲಿಯನ್ ಮೊತ್ತದ ಬೃಹತ್ ರಕ್ಷಣಾ ಒಪ್ಪಂದದ ಬದಲಿಗೆ, ಟ್ರಂಪ್ ಭಾರತವನ್ನೂ ಕೂಡ ಜಾಗತಿಕ ತಾಪಮಾನ ಏರಿಕೆ ಹೋರಾಟದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಬಹುದಿತ್ತು. ಆದರೆ ಟ್ರಂಪ್ ಭಾರತಕ್ಕೆ ರೇಥಿಯಾನ್, ಬೋಯಿಂಗ್ ಮತ್ತು ಲಾಕ್ಹೀಡ್ ಸಂಸ್ಥೆಗಳ ಯುದ್ಧೋಪಕರಣಗಳು ಮತ್ತು ಯುದ್ಧ ವಿಮಾನಗಳ ಮಾರಾಟದ ಕುರಿತು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ. ನಾವು ಒಗ್ಗೂಡಿ ವಾಯುಮಾಲಿನ್ಯವನ್ನು ತಡೆಯಬಹುದು. ಅಲ್ಲದೆ ಉತ್ತಮ ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಂಶೋಧಿಸಿ, ಉದ್ಯೋಗಗಳ ಸೃಷ್ಟಿ ಮಾಡಬಹುದು. ಆ ಮೂಲಕ ಈ ಭೂಮಿಯನ್ನು ಉಳಿಸಬಹುದು ಎಂದು ಸ್ಯಾಂಡರ್ಸ್ ಅಭಿಪ್ರಾಯಪಟ್ಟಿದ್ದಾರೆ.

78 ವರ್ಷ ವಯಸ್ಸಿನ ಬರ್ನಿ ಸ್ಯಾಂಡರ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಟ್ರಂಪ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸ್ಯಾಂಡರ್ಸ್ ಟ್ರಂಪ್ ಸರ್ಕಾರದ ಪ್ರಮುಖ ಟೀಕಾಕಾರಾಗಿದ್ದಾರೆ. ಟ್ರಂಪ್ ಸರ್ಕಾರದ ನೀತಿಗಳನ್ನು ನೇರವಾಗಿಯೇ ಸ್ಯಾಂಡರ್ಸ್ ವಿರೋಧಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com